ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿದೆ. ಈ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬೆಂಗಳೂರು (ಆ.01): ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿದೆ. ಈ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅಸಹಾಕಾರದ ನಡುವೆಯೂ ರಾಜ್ಯದ ರೈತರಿಗೆ ಅನಾನುಕೂಲ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ನಡುವೆ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ದುರ್ಲಾಭ ಮಾಡಿಕೊಳ್ಳಲು ಕಾಳಸಂತೆಕೋರರು ಪ್ರಯತ್ನಿಸುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸಚಿವರು ಮತ್ತು ಶಾಸಕರ ಜೊತೆ ಸಭೆ ನಡೆಸುತ್ತಿದ್ದ ಸಿದ್ದರಾಮಯ್ಯ ಅವರು ಸಭೆ ನಡುವೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ ಸ್ಪಷ್ಟ ಸೂಚನೆ ನೀಡಿದರು ಎಂದು ತಿಳಿದುಬಂದಿದೆ. ಜಿಲ್ಲೆ ಮತ್ತು ತಾಲೂಕು, ಹೋಬಳಿ ಎಲ್ಲೂ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಠಿಯಾಗಬಾರದು. ಈ ರೀತಿ ಅಭಾವ ಸೃಷ್ಟಿಸುತ್ತಿರುವವರ ಬಗ್ಗೆ ತೀವ್ರ ನಿಗಾ ಇಟ್ಡು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯಾಯಯುತವಾಗಿ ಜಾತಿಗಣತಿ ನಡೆಸಲಿ: ದೇಶದಲ್ಲಿ ಜಾತಿಗಣತಿಗೆ ಒತ್ತಾಯಿಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅವರ ನಿರಂತರ ಒತ್ತಡದಿಂದ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ. ಈಗ ಕೇಂದ್ರ ನ್ಯಾಯಯುತವಾಗಿ ಜಾತಿಗಣತಿ ನಡೆಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸಬೇಕು ಎಂಬುದು ರಾಜಕೀಯ ಬೇಡಿಕೆಯಲ್ಲ. ಸಾಂವಿಧಾನಿಕ ಅಗತ್ಯವಾಗಿದೆ. ಸತ್ಯಾಂಶವಿಲ್ಲದೆ ಯಾರೂ ಕಾಣುವುದಿಲ್ಲ. ಗೋಚರತೆ ಇಲ್ಲದೆ ನ್ಯಾಯವೂ ಇಲ್ಲ. ಸಾಮಾಜಿಕ ನ್ಯಾಯಕ್ಕೆ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ನ್ಯಾಯಯುತವಾಗಿ ಜಾತಿಗಣತಿ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ರಾಹುಲ್ ಗಾಂಧಿಯವರು ನಿಜವಾದ ನ್ಯಾಯ ಯೋಧರಾಗಿ ಹೊರಹೊಮ್ಮಿದ್ದಾರೆ. ಭಾರತ ಜೋಡೋ ಯಾತ್ರೆ ಮತ್ತು ಭಾರತ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ದೇಶದಾದ್ಯಂತ ಅವರು ಪ್ರಯಾಣಿಸಿದ್ದಾರೆ. ಅವರ ಯಾತ್ರೆ ಅಧಿಕಾರಕ್ಕಾಗಿ ಆಗಿರಲಿಲ್ಲ. ಬದಲಿಗೆ ಜನರ ಧ್ವನಿಗಳನ್ನು ಆಲಿಸಲು ಯಾತ್ರೆ ಮಾಡಿದರು. ಶೋಷಣೆಯ ಅಂಚಿನಲ್ಲಿರುವ ಜನರಿಗೆ ಧ್ವನಿಯನ್ನು ನೀಡಿದರು. ಜಾತಿಗಣತಿಗಾಗಿ ಮತ್ತು ಸಮಾನತೆಗಾಗಿ ಅವರು ನಡೆಸಿದ ನಿರಂತರ ಹೋರಾಟ, ಬಿಜೆಪಿಯನ್ನು ಒಳನಿಷ್ಠೆಯಿಂದಲ್ಲದಿದ್ದರೂ ಒತ್ತಡದಿಂದ ಪ್ರತಿಕ್ರಿಯಿಸುವಂತೆ ಮಾಡಿದೆ ಎಂದರು.
