ನಾಲ್ವಡಿ ಕೃಷ್ಣರಾಜ ಒಡೆಯರ್, ಶಾಹು ಮಹಾರಾಜರು ಜನಪರ, ಸಾಮಾಜಿಕ ನ್ಯಾಯದ ಪರವಾಗಿ ಇದ್ದವರಾಗಿದ್ದರು. ಮಹತ್ವದ ನಿಲುವುಗಳಿಂದ ಸಮಸಮಾಜದ ಸಲುವಾಗಿ ಕೆಲಸ ಮಾಡಿದವರು. ಅವರವರಿಗೆ ಅವರೇ ಸಾಟಿ ಎಂದು ಮಹದೇವಪ್ಪ ಹೇಳಿದರು.

ದಾವಣಗೆರೆ (ಜು.28): ನಾಲ್ವಡಿ ಕೃಷ್ಣರಾಜ ಒಡೆಯರ್, ಶಾಹು ಮಹಾರಾಜರು ಜನಪರ, ಸಾಮಾಜಿಕ ನ್ಯಾಯದ ಪರವಾಗಿ ಇದ್ದವರಾಗಿದ್ದರು. ಮಹತ್ವದ ನಿಲುವುಗಳಿಂದ ಸಮಸಮಾಜದ ಸಲುವಾಗಿ ಕೆಲಸ ಮಾಡಿದವರು. ಅವರವರಿಗೆ ಅವರೇ ಸಾಟಿ ಎಂದು ಸಮಾಜ ಕಲ್ಯಾಣ ಸಚಿವ ಡಾ। ಎಚ್.ಸಿ.ಮಹದೇವಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ಹೋಲಿಸಲಾಗುವುದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೈಸೂರು ಅಭಿವೃದ್ಧಿಗೆ ಕೆಲಸ ಮಾಡಿದ ನಿಟ್ಟಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಕೆಲಸವಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಸಿದ್ದರಾಮಯ್ಯ ಮೇಲು, ಸಮಾನರು ಅಂತಾ ಯತೀಂದ್ರ ಅವರು ಎಲ್ಲಿ ಹೇಳಿದ್ದಾರೆ ಎಂದು ಮಹದೇವಪ್ಪ ಪ್ರಶ್ನಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿಗರು ಕ್ಷಮೆಯಾಚಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇ.ಡಿ ಸಂಸ್ಥೆಯ ದುರ್ಬಳಕೆ ಮಾಡಿರುವ ಬಿಜೆಪಿಗರು ರಾಜ್ಯದ ಜನರ ಕ್ಷಮೆಯಾಚಿಸಲಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ. ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಷಯದಲ್ಲಿ ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳುತ್ತಿದ್ದ ಇ.ಡಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದ್ದು, ಚುನಾವಣೆಗಳು ಚುನಾವಣಾ ಕಣದಲ್ಲಿ ನಡೆಯಲಿ, ನೀವು ರಾಜಕೀಯ ದಾಳವಾಗಿ ಬಳಕೆ ಆಗಬೇಡಿ ಎಂದಿದ್ದಾರೆ.

ನಾವು ಮಾತನಾಡಲು ಆರಂಭಿಸಿದರೆ ಇ.ಡಿ ವಿರುದ್ಧ ಬಹಳ ಕಟುವಾಗಿ ಮಾತನಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳನ್ನು ನಾವು ಕಂಡಿದ್ದೇವೆ. ಇ.ಡಿ ದೇಶಾದ್ಯಂತ ಈ ರೀತಿಯ ಕೆಟ್ಟ ಪ್ರವೃತ್ತಿ ಹರಡುವುದನ್ನು ನಾವು ಸಹಿಸುವುದಿಲ್ಲ ಎಂದು ಇ.ಡಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಈ ಮೂಲಕ ಬಿಜೆಪಿಗರು ವಿಪಕ್ಷಗಳನ್ನು ತೇಜೋವಧೆ ಮಾಡಲು ಇ.ಡಿ ದಾಳವಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದ್ದು, ಇಂತಹ ಹೀನ ರಾಜಕೀಯ ಕೃತ್ಯ ಮಾಡಿದ್ದಕ್ಕಾಗಿ ಅವರು ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಲಿ ಎಂದು ಒತ್ತಾಯಿಸಿದ್ದಾರೆ.

ಇನ್ನು ರಾಜಕೀಯದ ಹಿಡಿತಕ್ಕೆ ಒಳಗಾಗದೇ ಸ್ವತಂತ್ರ ತನಿಖಾ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿ ಸಂಸ್ಥೆಗಳ ಘನತೆಯನ್ನು ಮತ್ತು ಅದರ ಮಹತ್ವವನ್ನು ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ. ದೇಶದ ಸರ್ವೋಚ್ಛ ಅಂಗವಾದ ನ್ಯಾಯಾಂಗವೇ ಇಡಿ ಸಂಸ್ಥೆಯ ಅಧಿಕಾರ ದುರ್ಬಳಕೆ ವಿಷಯದಲ್ಲಿ ದನಿ ಎತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಆಗಿದೆ ಎಂದು ಅವರು ಸ್ವಾಗತಿಸಿದ್ದಾರೆ.