Asianet Suvarna News Asianet Suvarna News

ವಿಚ್ಛಿದ್ರಕಾರಿ ಶಕ್ತಿಗಳ ದಮನ ಮಾಡಲು ಎದ್ದು ನಿಲ್ಲಿ: ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸಿಎಂ ಕರೆ

ಏಕತೆ ನೆಪದಲ್ಲಿ ಸಮಾಜ, ಮನುಷ್ಯರನ್ನು ವಿಭಜಿಸುವ ವಿಚ್ಛಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದು ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

CM Siddaramaiah's speech on Democracy Day at bengaluru rav
Author
First Published Sep 16, 2024, 5:25 AM IST | Last Updated Sep 16, 2024, 12:02 PM IST

ಬೆಂಗಳೂರು (ಸೆ.16) : ಏಕತೆ ನೆಪದಲ್ಲಿ ಸಮಾಜ, ಮನುಷ್ಯರನ್ನು ವಿಭಜಿಸುವ ವಿಚ್ಛಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದು ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ವಿಧಾನಸೌಧದ ಮುಂಭಾಗ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಾರಿತ್ರಿಕ ಮಾನವ ಸರಪಳಿ ಉದ್ಘಾಟಿಸಿ ಮಾತನಾಡಿದ ಅವರು, ವಿಚ್ಛಿದ್ರಕಾರಕ ಶಕ್ತಿಗಳು ಏಕತೆಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ಕೆಲಸ ಮಾಡುತ್ತಿವೆ. ಯಾವುದೇ ಕಾರಣಕ್ಕೂ ಸಮಾಜ ಒಡೆಯುವ ಶಕ್ತಿಗಳು ಪ್ರಬಲವಾಗಲು ಬಿಡಬಾರದು. ಈ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದು ನಿಲ್ಲಬೇಕು ಎಂದು ಮನವಿ ಮಾಡಿದರು.

ಸತತ 3ನೇ ಬಾರಿಗೆ ವೀರಶೈವ ಮಹಾಸಭಾಅಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಅವಿರೋಧವಾಗಿ ಆಯ್ಕೆ

ವಿಚ್ಛಿದ್ರಕಾರಕ ಶಕ್ತಿಗಳು ಸಾಮಾಜಿಕ ನ್ಯಾಯ, ಸಮಾನತೆಯ ವಿರೋಧಿಗಳು. ಬಡವರ ಪರ ಕಾರ್ಯಕ್ರಮಗಳು ಜಾರಿಯಾಗಲು ಅವರು ಬಿಡುವುದಿಲ್ಲ. ಸಮಾಜದ ಶತ್ರುಗಳಾಗಿರುವ ಇವರನ್ನು ಮೆಟ್ಟಿ ನಿಲ್ಲದ ಹೊರತು ಮಹಿಳೆಯರು, ದಲಿತರು, ಹಿಂದುಳಿದವರಿಗೆ ಹಕ್ಕುಗಳು, ಅವಕಾಶಗಳು ಸಿಗಲು ಸಾಧ್ಯ ಆಗುವುದಿಲ್ಲ. ಬಿಜೆಪಿ ಮತ್ತು ಅವರ ಜೊತೆಗಿರುವ ವಿಚ್ಛಿದ್ರಕಾರಕ ಶಕ್ತಿಗಳನ್ನು ಸೋಲಿಸಬೇಕು. 20 ಲಕ್ಷಕ್ಕೂ ಅಧಿಕ ಮಂದಿಯ ಮಾನವ ಸರಪಳಿ ರಚಿಸಿರುವುದೇ ದುಷ್ಟ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಎಂದು ಹೇಳಿದರು.

ಸಂವಿಧಾನದ ಪೀಠಿಕೆಯಲ್ಲಿ ಮೌಲ್ಯಗಳಿವೆ. ಸಂವಿಧಾನ ಪೀಠಿಕೆ, ಸಂವಿಧಾನ ರಚನೆಯ ಉದ್ದೇಶ ತಿಳಿದವರು ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯ. ಸಂಪತ್ತು ಎಲ್ಲರಲ್ಲೂ ಹಂಚಿಕೆಯಾದಾಗ ಸಮ ಸಮಾಜ ನಿರ್ಮಾಣವಾಗುತ್ತದೆ. ಅಸಮಾನತೆ ತೊಡೆದು ಹಾಕುವವರೆಗೂ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ. ಸಮಾನತೆ ಸಾಧಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ಧರ್ಮ, ಜಾತಿಯ ಬಡವರಿಗೆ ಶಕ್ತಿ ತುಂಬಲು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸ್ಪಷ್ಟಪಡಿಸಿದರು.

 ಅನುಭವ ಮಂಟಪ ಪ್ರಜಾಪ್ರಭುತ್ವದ ಸಂಕೇತ: 

ಬುದ್ಧ, ಬಸವಣ್ಣನವರ ಕಾಲದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಮೊದಲ ಪ್ರಜಾಪ್ರಭುತ್ವದ ಸಾಂಸ್ಥಿಕ ಸಂಕೇತವಾಗಿದೆ. ಸಂವಿಧಾನ ರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಪ್ರಜಾಪ್ರಭುತ್ವ ನಮ್ಮ ಉಸಿರಾಗಬೇಕು. ಸಂವಿಧಾನವನ್ನು ನಮಗೆ ಕೊಡುಗೆಯಾಗಿ ನೀಡಿರುವ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯದಂತೆ ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ಕೋಮುವಾದಿಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಇಂತಹ ಶಕ್ತಿಗಳನ್ನು ಮಟ್ಟ ಹಾಕಬೇಕು. ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಯ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ಮಾನವ ಸರಪಳಿಯ ರಾಯಭಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಪೌರ ಕಾರ್ಮಿಕರಾದ ನಾಗಲಕ್ಷ್ಮಿ, ಮಂಜುಳಾ, ತೃತೀಯ ಲಿಂಗಿ ಪ್ರಿಯಾಂಕ, ಇಬ್ಬರು ವಿಶೇಷ ಚೇತನ ವಿದ್ಯಾರ್ಥಿಗಳು ಸಿದ್ದರಾಮಯ್ಯ ಅವರ ಎಡ-ಬಲದಲ್ಲಿ ನಿಂತಿದ್ದು ವಿಶೇಷವಾಗಿತ್ತು. ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

1.78 ಲಕ್ಷ ಮಹಿಳೆಯರ ‘ಗೃಹಲಕ್ಷ್ಮಿ’ ಹಣಕ್ಕೆ ತಡೆ; ಆದಾಯ ತೆರಿಗೆ ಪಾವತಿದಾರರಿಗೆ ಇನ್ಮುಂದೆ ಹಣ ಸಿಗೊಲ್ಲ!

ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ರಿಜ್ವಾನ್ ಅರ್ಷದ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ.ಕೆ.ರಾಕೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜಗತ್ತಿನಲ್ಲಿಯೇ ಶ್ರೇಷ್ಠ ಪ್ರಜಾಪ್ರಭುತ್ವ ಹೊಂದಿರುವ ದೇಶ ನಮ್ಮದಾಗಿದೆ. ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಂವಿಧಾನವು ದಾರಿದೀಪವಾಗಿದೆ. ಬೀದರ್‌ನಿಂದ ಚಾಮರಾಜನಗರದವರೆಗಿನ ಮಾನವ ಸರಪಳಿಯು ಪ್ರಜಾಪ್ರಭುತ್ವಕ್ಕೆ ನೀಡುವ ಗೌರವವಾಗಿದೆ.

-ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸಭಾಪತಿ

ಸಿಎಂ ಇದ್ದ ವೇದಿಕೆಗೆ ಜಿಗಿದ ಯುವಕ ಅರೆಸ್ಟ್‌

ಬೆಂಗಳೂರು: ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಆಸೀನರಾಗಿದ್ದ ವೇದಿಕೆಯತ್ತ ಯುವಕನೊಬ್ಬ ನುಗ್ಗಲು ಯತ್ನಿಸಿ ಆತಂಕದ ಸ್ಥಿತಿ ನಿರ್ಮಾಣವಾಯಿತು. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಯುವಕನನ್ನು ಸುತ್ತುವರಿದರು. ನಂತರ ಆತನನ್ನು ಬಂಧಿಸಲಾಯಿತು. ಕನಕಪುರದ ಈ ಯುವಕ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ಶಾಲು ಹಾಕಲು ಬಂದಿದ್ದ ಎನ್ನಲಾಗಿದೆ.

Latest Videos
Follow Us:
Download App:
  • android
  • ios