ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ನಿರ್ಧಾರದಿಂದ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದು, ತೆರೆಮರೆಯಲ್ಲಿ ಮುಂದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.

ಬೆಂಗಳೂರು (ಮೇ.27): ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ‘ಕುರ್ಚಿ ಕದನ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್ ಸಿಕ್ಕಿದೆ. ಹೈಕಮಾಂಡ್ ಸೂಚನೆಗೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಧಿಕೃತವಾಗಿ ನಿರ್ಧರಿಸಿದ್ದಾರೆ. ಗುರುವಾರ ಮಧ್ಯಾಹ್ನವೇ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ.

Add Asianetnews Kannada as a Preferred SourcegooglePreferred

ರಾಜಭವನದಿಂದ ಸಿಕ್ಕಿತು ಮುಹೂರ್ತ: ನಾಳೆ ಮಧ್ಯಾಹ್ನ 3 ಗಂಟೆಗೆ ರಾಜೀನಾಮೆ ಸಲ್ಲಿಕೆ!

ಸಿಎಂ ರಾಜೀನಾಮೆ ನಿರ್ಧಾರದ ಬೆನ್ನಲ್ಲೇ ರಾಜಭವನದಿಂದಲೂ ಭೇಟಿಗೆ ಸಮಯ ನಿಗದಿಯಾಗಿದೆ. "ನಾಳೆ ಮಧ್ಯಾಹ್ನ 3 ಗಂಟೆಗೆ ನಾನಿರುತ್ತೇನೆ ಬನ್ನಿ" ಎಂದು ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ ಸರಿಯಾಗಿ 3 ಗಂಟೆಗೆ ಸಿದ್ದರಾಮಯ್ಯ ಅವರು ವಿಧಾನಸೌಧದ ಪಕ್ಕದಲ್ಲೇ ಇರುವ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ರಾಜೀನಾಮೆ ನೀಡಿದ ತಕ್ಷಣವೇ ಸಿದ್ದರಾಮಯ್ಯ ಅವರು ಸುದೀರ್ಘ ಜಂಟಿ ಸುದ್ದಿಗೋಷ್ಠಿ (Press Meet) ನಡೆಸಲಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳ ಆಕ್ರೋಶ

ಇನ್ನೊಂದೆಡೆ ಸಿದ್ದರಾಮಯ್ಯ ಅವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆ ಅವರ ಕಟ್ಟಾ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ರಾಹುಲ್ ಗಾಂಧಿ ಅವರ ಈ ತಪ್ಪು ನಿರ್ಧಾರಕ್ಕೆ ನಮ್ಮ ತೀವ್ರ ವಿರೋಧವಿದೆ. ಹೈಕಮಾಂಡ್‌ಗೆ ನಾವು ಕೈಮುಗಿದು ಕೇಳುತ್ತೇವೆ, ದಯವಿಟ್ಟು ಈ ತಪ್ಪು ನಿರ್ಧಾರವನ್ನು ತಕ್ಷಣವೇ ವಾಪಸ್ ಪಡೆಯಿರಿ" ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

"ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಿದರೆ ಮುಂದಿನ ಆರು ತಿಂಗಳು ಈ ಕಾಂಗ್ರೆಸ್ ಸರ್ಕಾರ ಇರಲ್ಲ" ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಸಿಎಂ ಪರವಾಗಿ ತೀವ್ರ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸುತ್ತಿದ್ದ ಅಭಿಮಾನಿಗಳನ್ನು ತಕ್ಷಣವೇ ಹತೋಟಿಗೆ ತಂದ ಪೊಲೀಸರು ಹಲವರನ್ನು ವಶಕ್ಕೆ (Detain) ಪಡೆದಿದ್ದಾರೆ.

'ಯಾರೂ ಗೊಂದಲ ಮಾಡಬೇಡಿ, ಎಲ್ಲವೂ ಸ್ಮೂತ್ ಆಗಿರಲಿ!'

ರಾಜ್ಯದಲ್ಲಿ ಉಂಟಾಗಿರುವ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕಕ್ಕೆ ಬರಬೇಕಾಗಿದ್ದ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಪ್ರವಾಸ ಕೊನೆಕ್ಷಣದಲ್ಲಿ ರದ್ದಾಗುವ (ಡೌಟ್) ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ದೆಹಲಿಯಿಂದಲೇ ಆಪರೇಷನ್ ನಡೆಸಿರುವ ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ನಾಯಕರಿಗೆ ನೇರವಾಗಿ ಫೋನ್ ಕರೆ ಮಾಡಿದ್ದಾರೆ.

"ನಾಳೆ ರಾಜೀನಾಮೆ ಪ್ರಕ್ರಿಯೆ ವೇಳೆ ರಾಜ್ಯದಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಗಲಾಟೆಗಳು ಸೃಷ್ಟಿಯಾಗಬಾರದು. ಎಲ್ಲವನ್ನೂ ಅತ್ಯಂತ ಶಾಂತಿಯುತವಾಗಿ ಮತ್ತು ಸ್ಮೂತ್ ಆಗಿ ಮುಗಿಸಬೇಕು" ಎಂದು ಹೈಕಮಾಂಡ್‌ನ ಸಂದೇಶವನ್ನು ಸಿಎಂ ಆಪ್ತ ವಲಯಕ್ಕೆ ಕೆ.ಸಿ. ವೇಣುಗೋಪಾಲ್ ರವಾನಿಸಿದ್ದಾರೆ.

ಬದಲಾಗಲಿದೆಯೇ ಕೆಪಿಸಿಸಿ ಪೀಠ?: ಸಚಿವ ಜಮೀರ್-ಸತೀಶ್ ಜಾರಕಿಹೊಳಿ ಭೇಟಿ!

ಸಿಎಂ ರಾಜೀನಾಮೆ ನಿರ್ಧಾರ ಪ್ರಕಟವಾಗುತ್ತಿದ್ದಂತೆ ತೆರೆಮರೆಯಲ್ಲಿ ಮುಂದಿನ ಅಧಿಕಾರದ ಹಂಚಿಕೆಯ ರಣತಂತ್ರಗಳು ಚುರುಕುಗೊಂಡಿವೆ. ಇಂದು ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ನಡುವೆ ನಡೆದ ದಿಢೀರ್ ಭೇಟಿ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಪೀಠ ಏರುವುದು ಬಹುತೇಕ ಖಚಿತವಾಗಿರುವುದರಿಂದ, ಅವರು ಹೊಂದಿರುವ ಕೆಪಿಸಿಸಿ ಅಧ್ಯಕ್ಷ (KPCC President) ಹುದ್ದೆಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಈಗಿನಿಂದಲೇ ಕೆಪಿಸಿಸಿ ಪಟ್ಟ ಅಲಂಕರಿಸಲು ಭರ್ಜರಿ ಆಂತರಿಕ ತಯಾರಿ ಮತ್ತು ಸಚಿವರ ಬೆಂಬಲ ಕ್ರೋಢೀಕರಣವನ್ನು ಆರಂಭಿಸಿದ್ದಾರೆ ಎನ್ನಲಾಗುತ್ತಿದ್ದು, ಜಮೀರ್ ಭೇಟಿ ಅದರದ್ದೇ ಒಂದು ಭಾಗ ಎನ್ನಲಾಗಿದೆ.