ಶಿವಾಜಿನಗರದ ಸೇಂಟ್ ಬೆಸಿಲಿಕಾ ಚರ್ಚ್‌ ಪುನರುಜ್ಜೀವನಗೊಳಿಸಲು ₹5 ಕೋಟಿ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಬೆಂಗಳೂರು (ಸೆ.9): ಶಿವಾಜಿನಗರದ ಸೇಂಟ್ ಬೆಸಿಲಿಕಾ ಚರ್ಚ್‌ ಪುನರುಜ್ಜೀವನಗೊಳಿಸಲು ₹5 ಕೋಟಿ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚರ್ಚ್‌ನಲ್ಲಿ ಭಾನುವಾರ ಸಂಜೆ ನಡೆದ ಸೇಂಟ್ ಮೇರಿ ಅಮ್ಮನವರ ಹುಟ್ಟುಹಬ್ಬದ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪೀಟರ್ ಮಚಾಡೋ ಅವರು ಕ್ರಿಶ್ಚಿಯನ್ ಧರ್ಮವನ್ನು ಉನ್ನತೀಕರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಕ್ಕೆ ನಮ್ಮ ಸರ್ಕಾರ ಎಲ್ಲಾ ಸಹಕಾರ ನೀಡುತ್ತದೆ. ಈ ಹಿಂದೆ ಚರ್ಚ್‌ಗೆ ಭೇಟಿ ನೀಡಿದಾಗ ₹10 ಕೋಟಿ ನೆರವು ನೀಡುವುದಾಗಿ ಹೇಳಿದ್ದೆ. ಅದರಂತೆ ಬಜೆಟ್‌ನಲ್ಲಿ ₹5 ಕೋಟಿ ನೀಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಉಳಿದ ₹5 ಕೋಟಿ ನೀಡಲಾಗುವುದು ಎಂದು ತಿಳಿಸಿದರು.

ಬೆಸಿಲಿಕಾ ಚರ್ಚ್‌ ಚಾರಿತ್ರಿಕವಾಗಿ ಭಾವೈಕ್ಯತೆಯ ಚರ್ಚ್‌ ಆಗಿದೆ. ಎಲ್ಲಾ ಜಾತಿ, ಧರ್ಮದವರು ನಿರಂತರವಾಗಿ ಬಂದು ಹೋಗುತ್ತಿರುವುದೇ ಸೌಹಾರ್ದ ಪರಂಪರೆಗೆ ಸಾಕ್ಷಿಯಾಗಿದೆ. ದೇಶದೆಲ್ಲೆಡೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಧರ್ಮ ಗುರುಗಳು ಮತ್ತು ಸಂಸ್ಥೆಗಳು ಕೊಡುಗೆಯನ್ನು ನೀಡಿವೆ. ಇವರ ಈ ಸಾಮಾಜಿಕ‌ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂದು ಹೇಳಿದರು.

ಕರ್ನಾಟಕ ರಾಜ್ಯವು ಕುವೆಂಪು, ಅಂಬೇಡ್ಕರ್, ಬಸವಣ್ಣನವರ ಮಾನವೀಯ ಮೌಲ್ಯದ ನೆಲೆಯಾಗಿದೆ. ಕಪಟಿಗಳ ದ್ವೇಷದ ಪಿತೂರಿಗೆ ಮಹನೀಯರ ಮಾನವೀಯ ಆಶಯಗಳು ಬಲಿಯಾಗಬಾರದು. ಪರಸ್ಪರ ಸಹಬಾಳ್ವೆ, ಸೌಹಾರ್ದದ ಬೆಸುಗೆಯನ್ನು ನಾವೆಲ್ಲರೂ ಗಟ್ಟಿಗೊಳಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಮಾತನಾಡಿ, ಉದ್ದೇಶಿತ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣವೆಂದು ನಾಮಕರಣ ಮಾಡಬೇಕು. ಇದರಿಂದ ಚರ್ಚ್‌ಗೆ ಹೆಚ್ಚು ಜನರು ಬರಲು ಅನುಕೂಲ ಆಗುತ್ತದೆ. ಅಲ್ಲದೇ, ಚರ್ಚ್‌ನ ಎದುರು ಒಳಾಂಗಣ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.

ಕುಟುಂಬಸಮೇತ 1 ವಾರ ಡಿಕೆಶಿ ಅಮೆರಿಕ ಪ್ರವಾಸಕ್ಕೆ; ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಭೇಟಿ?

ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಆಜಾನ್ ಕೂಗುತ್ತಿದ್ದಂತೆ ಭಾಷಣ ನಿಲ್ಲಿಸಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದ ವೇಳೆ ಅಜಾನ್ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಭಾಷಣ ಮಾಡುವುದನ್ನು ನಿಲ್ಲಿಸಿದರು. ಈ ವೇಳೆ ಅವರ ಬಳಿಗೆ ತೆರಳಿದ ಶಾಸಕ ರಿಜ್ವಾನ್ ಅರ್ಷದ್, ಮಾತು ಮುಂದುವರೆಸುವಂತೆ ಕೇಳಿದರು. ಬಳಿಕ ಮುಖ್ಯಮಂತ್ರಿಯವರು ತಮ್ಮ ಭಾಷಣ ಮುಂದುವರೆಸಿದರು.