'ಅನ್ನ ಹಳಸಿತ್ತು, ನಾಯಿ ಹಸಿದಿತ್ತು' ಎಚ್‌ಡಿಕೆ ವಿರುದ್ಧ ಸಿಎಂ ಕಿಡಿ
ಬಿಜೆಪಿಯವರು ಅವರಿಗೆ ಹೇಳಿಕೊಟ್ಟಿದ್ದನ್ನು ಮಾಡ್ತಾ ಇದ್ದಾರೆ. ಅವರು ಹೇಳಿದ್ದನ್ನು ಇವರು ಕೇಳ್ತಾರೆ. ಇದೊಂದು ರೀತಿ ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬಂತೆ ಆಗಿದೆ ಇವರ ಪರಿಸ್ಥಿತಿ. ಈ ರಾಜ್ಯದ ಮಾಜಿ ಸಿಎಂ ಆಗಿದ್ದರೂ ಕುಮಾರಸ್ವಾಮಿ ಒಬ್ಬ ಕ್ಷುಲ್ಲಕ ವ್ಯಕ್ತಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರು (ನ.19):ಇಂದಿರಾ ಗಾಂಧಿ ಹುಟ್ಟಿದ್ದು ರಾಜಕೀಯ ಕೇಂದ್ರಿತ ಕುಟುಂಬದಲ್ಲಿ. ಬಾಲ್ಯದಿಂದಲೇ ಜನಪರ ಧೋರಣೆ ತಳೆದಿದ್ದರು. ದೇಶಕ್ಕಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಬಹಳ ದೃಢವಾದ ತೀರ್ಮಾನ ತೆಗೆದುಕೊಳ್ತಾ ಇದ್ರು. ಹೀಗಾಗಿ ಅವರನ್ನು ಉಕ್ಕಿನ ಮಹಿಳೆ ಅಂತಾ ಕರೀತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿಯವರ 106 ನೆಯ ಜನ್ಮ ದಿನಾಚರಣೆ ಆಚರಣೆ ವೇಳೆ ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಡೀ ರಾಷ್ಟ್ರದ ಇತಿಹಾಸದಲ್ಲಿ ಬಹಳ ಪ್ರಮುಖ ದಿನ ಇಂದು. ಇಂದಿರಾಗಾಂಧಿ ಹಸಿರು ಕ್ರಾಂತಿ ಮಾಡಿದವರು. ಈಗಿನ ಪ್ರಧಾನಿ ಅಂತಹ ಯಾವುದೆ ಕ್ರಾಂತಿ ಮಾಡಿಲ್ಲ. ಅವರದ್ದೇನಿದ್ರೂ ಸ್ಕ್ರೀನ್ ಕ್ರಾಂತಿ ಕೇವಲ ಟಿವಿ ಸ್ಕ್ರೀನ್ ಗಳ ಮೇಲೆ ಕಾಣಿಸುವ ಕ್ರಾಂತಿ ಮಾಡಿದವರು. ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರ ಸಾಲ ಮನ್ನಾ ಮಾಡ್ತಾರೆ, ಬಡವರದ್ದು ಮಾಡೋದಿಲ್ಲ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದರು.
ಕುಮಾರಸ್ವಾಮಿ ಹೇಳೋದೆಲ್ಲ ಶೇ. 99 ಸುಳ್ಳು, ಜೆಡಿಎಸ್ ಸೆಕ್ಯುಲರ್ ಆಗಿಲ್ಲ: ಸಿಎಂ ಸಿದ್ದರಾಮಯ್ಯ
ಕೇವಲ ದ್ವಜ ಹಿಡಿದು ಭಾರತ್ ಮಾತಾಕಿ ಜೈ ಅಂದ್ರೆ ದೇಶಭಕ್ತ ಅಲ್ಲ. ದೇಶದ ಆಸ್ತಿಪಾಸ್ತಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಕು. ಅದನ್ನು ಇಂಧಿರಾಗಾಂಧಿ ಮಾಡಿದ್ದರು. ಯಾವುದೇ ಧರ್ಮದ ಬಗ್ಗೆ ಭೇದ ಮಾಡದೇ ತಮ್ಮ ಪ್ರಾಣಕ್ಕೆ ಬೆದರಿಕೆ ಇದ್ದರೂ ಸಿಖ್‌ರನ್ನು ಅಂಗರಕ್ಷಕ ರಾಗಿ ಇಟ್ಟುಕೊಂಡಿದ್ದರು. ಈಗ ಅಂತಹ ಜಾತ್ಯಾತೀತ ಭಾವನೆ ಯಾರಲ್ಲೂ ಕಾಣುವುದಿಲ್ಲ ಎಂದರು. ಈ ವೇಳೆ ನಿರಂತರವಾಗಿ ಶಿಳ್ಳೆ ಹೊಡೆಯುತ್ತಿದ್ದ ಕಾರ್ಯಕರ್ತರನ್ನುದ್ದೇಶಿಸಿ, ರಾಜಕೀಯ ಸಮಾರಂಭದಲ್ಲಿ ಶಿಳ್ಳೆ ಹೊಡೆಯುವ ಸಂಸ್ಕೃತಿ ಬಿಡಿ. ನೀವು ಖುಷಿಯಿಂದ ಶಿಳ್ಳೆ ಹೊಡೆಯಬಹುದು. ಆದರೆ ಸಭಾ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಕಿವಿ ಮಾತು ಹೇಳಿದರು.
ಪಾಕಿಸ್ತಾನವನ್ನು ಯುದ್ಧದಲ್ಲಿ ಬಗ್ಗುಬಡಿದು ಬಾಂಗ್ಲಾದೇಶ ನಿರ್ಮಾಣ ಮಾಡಿದ ಕೀರ್ತಿ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ. ಹಾಗಾಗಿ ವಾಜಪೇಯಿ ಅವರು "ದುರ್ಗೆ' ಎಂದು ಕರೆದಿದ್ದರು.
ಅಂತಹ ಧೈರ್ಯ ಇಂದಿರಾಗಾಂಧಿ ತೋರಿಸುತ್ತಿದ್ದರು. ಈಗಿನ ಪ್ರಧಾನಿಗೆ ಇಂಥ ದೃಢ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಇಲ್ಲ ಎಂದರು.
ಕುಮಾರಸ್ವಾಮಿ ಕ್ಷುಲ್ಲಕ ವ್ಯಕ್ತಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಬಿಜೆಪಿ ಹಾಗೂ ಈ ದಳದವರಿಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಅಸೂಯೆ, ಮತ್ಸರ, ದ್ವೇಷ ತುಂಬಿಕೊಂಡು ಇದ್ದಾರೆ. ಕುಮಾರಸ್ವಾಮಿ ಬರೀ ಹಿಟ್ ಅಂಡ್ ರನ್ ಕೆಲಸ ಮಾಡ್ತಾರೆ. ಬಿಜೆಪಿಯವರು ಅವರಿಗೆ ಹೇಳಿಕೊಟ್ಟಿದ್ದನ್ನು ಮಾಡ್ತಾ ಇದ್ದಾರೆ. ಅವರು ಹೇಳಿದ್ದನ್ನು ಇವರು ಕೇಳ್ತಾರೆ. ಇದೊಂದು ರೀತಿ ಅನ್ನ ಹಳಸಿತ್ತು ನಾಯಿ ಹಸಿದಿತ್ತು ಎಂಬಂತೆ ಆಗಿದೆ ಇವರ ಪರಿಸ್ಥಿತಿ. ಈ ರಾಜ್ಯದ ಮಾಜಿ ಸಿಎಂ ಆಗಿದ್ದರೂ ಕುಮಾರಸ್ವಾಮಿ ಒಬ್ಬ ಕ್ಷುಲ್ಲಕ ವ್ಯಕ್ತಿ. ನನ್ನ ಮಗನ ವಿರುದ್ಧ ಮಾಡುವ ಇವರ ಎಲ್ಲ ಆರೋಪಗಳು ಕ್ಷುಲ್ಲಕವಾದವುಗಳು. ಇವರ ಅಪಪ್ರಚಾರಗಳಿಗೆ ನಾವು ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು. ಸುಳ್ಳೇ ಇವರ ಮನೆ ದೇವರು. ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಾರೆ. ಎರಡು ಸಲ ಸಿಎಂ ಆದವರು ಈ ರೀತಿ ಕ್ಷುಲ್ಲಕ ವಿಚಾರಗಳನ್ನು ಹೇಳಿಕೊಂಡು ತಿರುಗುತ್ತಿರುವುದು ನಾಚಿಕೆಗೇಡು. ಕರೆಂಟು ಕದ್ದು ಫೈನ್ ಕಟ್ಟಿದ್ದಾರೆ ಮಾಜಿ ಮುಖ್ಯಮಂತ್ರಿಯಾದವರು ಕರೆಂಟು ಕದೀತಾರಾ? ನಾನು ಅದಕ್ಕೆ ಹೇಳೋದು ಕುಮಾರಸ್ವಾಮಿನೆ ಕ್ಷುಲ್ಲಕ ವ್ಯಕ್ತಿ ಅಂತಾ. ನನ್ನ ರಾಜಕೀಯ ಜೀವನದಲ್ಲಿ ಟ್ರಾನ್ಸ್ ಫರ್ ಗೆ ದುಡ್ಡು ತಗೊಂಡಿಲ್ಲ. ಯಾರಾದರು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಅವರು ಅಧಿಕಾರದಲ್ಲಿ ಇದ್ದಾಗ ಅದನ್ನೆ ಮಾಡಿದ್ದಾರೆ.ಅದನ್ನ ಈಗ ನಮಗೆ ಹೇಳ್ತಿದಾರೆ ಎಂದು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಜಿ.ಟಿ. ದೇವೇಗೌಡ ಪ್ರಾಭಲ್ಯ ಕುಗ್ಗಿಸಲು ಚಕ್ರವ್ಯೂಹ ಹೆಣೆದ ಸಿದ್ದರಾಮಯ್ಯ: ಮೊದಲ ಬಾಣಕ್ಕೇ ಜಿಟಿಡಿ ಕಕ್ಕಾಬಿಕ್ಕಿ!
ಲೋಕಸಭಾ ಚುನಾವಣೆ ನಾವೇ ಗೆಲ್ಲಬೇಕು:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. ಬಿಬಿಎಂಪಿ ಚುನಾವಣೆಯಲ್ಲೂ ಸಹ ನಾವೇ ಗೆಲ್ಲಬೇಕು. ಅದಕ್ಕಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.