'ಜನರು ಸಣ್ಣಪುಟ್ಟ ಕೆಲಸಕ್ಕೆ ವಿಧಾನಸೌಧಕ್ಕೆ ಬರಬೇಕಾ, ನೀವೆಲ್ಲ ಯಾಕಿದ್ದೀರಿ?' ಅಧಿಕಾರಿಗಳ ಮೇಲೆ ಸಿಎಂ ಗರಂ
ಕೆಡಿಪಿ ಸಭೆ ಮುಗಿದ ನಂತರ ಜನ ಸಾಮಾನ್ಯರ ಬಗ್ಗೆ ಮುತುವರ್ಜಿ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು. ಸಾರ್ವಜನಿಕರು ದೂರದ ಪ್ರದೇಶಗಳಿಂದ ವಿಧಾನಸೌಧಕ್ಕೆ , ನನ್ನ ಮನೆ ಬಾಗಿಲಿಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಬರಬೇಕಾ ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ ಎಂದು ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.
ವರದಿ : ಮಧು.ಎಂ.ಚಿನಕುರಳಿ
ಮೈಸೂರು (ಆ.28) : ಕೆಡಿಪಿ ಸಭೆ ಮುಗಿದ ನಂತರ ಜನ ಸಾಮಾನ್ಯರ ಬಗ್ಗೆ ಮುತುವರ್ಜಿ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು. ಸಾರ್ವಜನಿಕರು ದೂರದ ಪ್ರದೇಶಗಳಿಂದ ವಿಧಾನಸೌಧಕ್ಕೆ , ನನ್ನ ಮನೆ ಬಾಗಿಲಿಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಬರಬೇಕಾ ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು. ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ಕೆಡಿಪಿ ಸಭೆ(Mysuru KDP Meeting)ಯ ಕೊನೆಯಲ್ಲಿ ಮಾತನಾಡಿದರು.
ಜನರಿಗೆ ಅಧಿಕಾರಿ-ಸಿಬ್ಬಂದಿ ಕೈಗೆ ಸಿಗಬೇಕು. ಖಾತೆ ಮಾಡಿಸಿಕೊಳ್ಳಲು, ಜಾತಿ ಪ್ರಮಾಣ ಪತ್ರಕ್ಕೆ ಜನ ವಿಧಾನಸೌಧಕ್ಕೆ ಬರಬೇಕಾ ? ಜನರೇ ನಮ್ಮ ಮಾಲೀಕರು. ನಾವು ಜನಗಳ ಸೇವಕರು. ಜನರ ಹಣದಲ್ಲಿ ನಿಮಗೆ, ನಮಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗುತ್ತಿವೆ. ಹೀಗಾಗಿ ಜನರನ್ನು ಸಣ್ಣ ಪುಟ್ಟ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಬೇಕು. ಜನ ಸಣ್ಣ ಕೆಲಸಗಳಿಗೆ ವಿಧಾನಸೌಧ(Vidhanasoudha)ಕ್ಕೆ ಬರುತ್ತಾರೆ ಎಂದರೆ, ನನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂದರೆ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ಇದು ನಿಮಗೆ ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.
ಆಪರೇಷನ್ ಹಸ್ತ ಬೆನ್ನಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ ಎಂಪಿ ರೇಣುಕಾಚಾರ್ಯ!
ಜನ ಬರಿಗಾಲಿನಲ್ಲಿ ಬಂದರೂ, ಚೆಡ್ಡಿ ಹಾಕಿಕೊಂಡು ಬಂದರೂ ಅವರೇ ಸರ್ಕಾರದ ಮಾಲೀಕರು. ಕಾರಿನಲ್ಲಿ ಓಡಾಡುವ ಅಧಿಕಾರಿಗಳು ಬರಿ ಗಾಲಿನಲ್ಲಿ ಬರುವವರನ್ನು ಗೌರವದಿಂದ ಕಾಣಬೇಕು. ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿ ಕೊಡಬೇಕು ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಮೊದಲು ನನ್ನ ಜಿಲ್ಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಚುರುಕಾಗಬೇಕು. ನಿಯಮಬದ್ದವಾಗಿ, ಕಾಲ ಮಿತಿಯಲ್ಲಿ ಕೆಲಸ ಮಾಡದಿದ್ದರೆ ಅದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನ ಯಾವ ನಿರೀಕ್ಷೆ ಇಟ್ಟುಕೊಂಡು ಸರ್ಕಾರವನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಿ. ಮೈಸೂರು ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ 16 ನೇ ಸ್ಥಾನದಲ್ಲಿದೆ ಎಂದರೆ ನಾಚಿಕೆಗೇಡು. ಇದನ್ನು ನಾನು ಸಹಿಸಲ್ಲ. ಶಿಕ್ಷಣ, ಆರೋಗ್ಯ ಸೂಚ್ಯಂಕ ಸೇರಿ ಎಲ್ಲಾ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಸೂರು ಮಾದರಿ ಜಿಲ್ಲೆಯಾಗಲೇಬೇಕು. ಆ ರೀತಿ ದಕ್ಷತೆ ಮತ್ತು ಕಾರ್ಯಕ್ಷಮತೆ ಪ್ರದರ್ಶಿಸಿ ಎಂದು ಎಲ್ಲಾ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಆರು ತಿಂಗಳ ಬಳಿಕ ಮತ್ತೆ ಕೆಡಿಪಿ ಸಭೆ ನಡೆಸುತ್ತೇನೆ. ಅಷ್ಟರೊಳಗೆ ಪರಿಸ್ಥಿತಿ ಸುಧಾರಿಸಬೇಕು. ಪ್ರಗತಿಯ ವೇಗ ಹೆಚ್ಚಾಗಬೇಕು. ಇಲ್ಲದಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡುತ್ತೇನೆ. ಪ್ರೀ ಮೆಚೂರ್ ಎನ್ನುವುದನ್ನೂ ನೋಡದೆ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಮಳೆಯ ಅಭಾವ ಇರುವುದರಿಂದ ಜನರು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ಎಂದು ಸೂಚಿಸಿದರು.
ಅನುಮತಿ ಪಡೆಯದೆ ತರಾತುರಿಯಲ್ಲಿ 957 ಕೋಟಿ ಮಹದಾಯಿ ಟೆಂಡರ್, ಅಧಿಕಾರಿಗಳ ಅಮಾನತಿಗೆ ಆಗ್ರಹ
ಇನ್ಸ್ ಪೆಕ್ಟರ್ ಗಳ ಅರಿವಿಗೆ ಬಾರದಂತೆ ಅವರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ. ಈ ಬಗ್ಗೆ ಡಿಸಿಪಿ ಗಳು, ಎಸ್ ಪಿ ಗಳು ಎಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.