ಬಿಜೆಪಿ ನಾಯಕರ ಮೇಲಿನ ಎಫ್‌ಐಆರ್ ಕ್ರಮವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯದ ಶಾಂತಿ ಕಾಪಾಡುವುದು ಅಗತ್ಯ ಎಂದರು. ದಸರಾ ಉದ್ಘಾಟನೆ ಕುರಿತ ಕಾನೂನು ಹೋರಾಟದ ಬಗ್ಗೆಯೂ ಪ್ರತಿಕ್ರಿಯಿಸಿದರು.

ಮೈಸೂರು (ಸೆ.13): ನಾವು ಇದರಲ್ಲಿ ರಾಜಕಾರಣ ಮಾಡಲು ಹೋಗುವುದಿಲ್ಲ. ಅವರು ಬಾಯಿಗೆ ಬಂದಂತೆ ಮಾತನಾಡಿದರೆ ಏನು ಮಾಡೋಕಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಮೇಲೆ ಪೊಲೀಸರ ಎಫ್‌ಐಆರ್ ಕ್ರಮವನ್ನ ಸಮರ್ಥಿಸಿಕೊಂಡರು.

ಬಿಜೆಪಿ ನಾಯಕರ ಮೇಲೆ ಬ್ಯಾಕ್ ಟು ಬ್ಯಾಕ್ ಎಫ್‌ಐಆರ್ ಹಾಕಿರುವ ವಿಚಾರ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಶಾಂತಿ ನೆಮ್ಮದಿ ಕಾಪಾಡುವುದು ಅವಶ್ಯ ಅದಕ್ಕಾಗಿ ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಇದು ರಾಜಕಾರಣ ಅಲ್ಲಎಂದರು. ಇದೇ ವೇಳೆ ರಾಜ್ಯ ಸರ್ಕಾರ ಹಿಂದೂ ವಿರೋಧಿ ನಡೆ ಕುರಿತು ಆರೋಪ ಬಗ್ಗೆ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ 'ಹಾಗಾದರೆ ನಾನು ಹಿಂದೂ ಅಲ್ವ? ನಾನೂ ಹಿಂದೂನೇ. ನನ್ನ ಹೆಸರಲ್ಲಿ ಈಶ್ವರ ಹಾಗೂ ವಿಷ್ಣು ಇದ್ದಾರೆ. ಸಿದ್ದ ಎಂದರೆ ಈಶ್ವರ, ರಾಮ ಎಂದರೆ ವಿಷ್ಣು. ನನ್ನ ಹೆಸರಲ್ಲೇ ಎರಡು ದೇವರುಗಳು ಇದ್ದಾರೆ ಎಂದರು.

ದಸರಾ ಉದ್ಘಾಟಕರ ಸಂಬಂಧ ಕಾನೂನು ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ. ಮಾಡ್ಲಿ, ಅವರು ಕಾನೂನು ಹೋರಾಟ ಮಾಡ್ಲಿ. ಕೋರ್ಟ್‌ನಲ್ಲೇ ಇತ್ಯರ್ಥವಾಗಲಿ. ಆದರೆ ಇದು ಕೋರ್ಟ್‌ಗೆ ಹೋಗುವ ವಿಚಾರವಾ ಗೊತ್ತಿಲ್ಲ. ಕೋರ್ಟ್‌ಗೆ ಯಾರು ಹೋಗಿದ್ದಾರೆ ಅವರನ್ನೇ ಕೇಳಿ. ದಸರಾ ಒಂದು ಧರ್ಮದ್ದಲ್ಲ ಅದು ಸಾಂಸ್ಕೃತಿಕವಾಗಿ ನಡೆಯುತ್ತಿರುವ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ಎಲ್ಲ ಜನರೂ ಭಾಗವಹಿಸುತ್ತಾರೆ. ಇದು ನಾಡಹಬ್ಬ ಇಂಥ ಧರ್ಮದವರೇ ಭಾಗವಹಿಸಬೇಕು ಎಂಬ ನಿಯಮ ಇಲ್ಲ. ಈ ಹಬ್ಬದಲ್ಲಿ ಎಲ್ಲ ಜಾತಿ, ಧರ್ಮದವರು ಭಾಗವಹಿಸುತ್ತಾರೆ ಎಂದರು.