ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ನಾಯಕರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲೇ ಶುರುವಾಗಿದೆ. ಈ ಷಡ್ಯಂತ್ರದ ನಡುವೆಯೂ ಸಿಎಂ ತಮ್ಮ ಆಪ್ತರ ರಕ್ಷಣೆಗೆ ನಿಲ್ಲದೆ ಮೌನ ವಹಿಸಿರುವುದು ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ  ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು (ಏ.17): ರಾಜ್ಯ ರಾಜಕೀಯದಲ್ಲೀಗ ಹೊಸದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಆಪ್ತರು ಎಂದು ಗುರುತಿಸಿಕೊಂಡಿರುವ ನಾಯಕರನ್ನು ಪದೇ ಪದೇ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗೆ ಆರೋಪಿಸುತ್ತಿರುವವರು ವಿರೋಧ ಪಕ್ಷಗಳ ನಾಯಕರಲ್ಲ ಬದಲಾಗಿ ಆಡಳಿತ ಪಕ್ಷದ ನಾಯಕರಲ್ಲೇ ಇಂಥ ಆರೋಪ, ಚರ್ಚೆಗಳು ನಡೆಯಲಾರಂಭಿಸಿವೆ. ಸಿದ್ದರಾಮಯ್ಯ ಅವರ ಬಲವನ್ನು ಕುಗ್ಗಿಸಲು ಈ ರೀತಿ ಷಡ್ಯಂತ್ರ ನಡೆಯುತ್ತಿದೆ. ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಆತಂಕ, ಅಸಮಾಧಾನಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಪ್ತರ ರಕ್ಷಣೆಗೆ ಮುಂದಾಗದ ಸಿಎಂ

ಸಿಎಂ ಆಪ್ತರೆಂದೇ ಗುರುತಿಸಿಕೊಂಡಿರುವ ಕೆಲವು ನಾಯಕರ ಮೇಲೆ ಈಗಾಗಲೇ ಟಾರ್ಗೆಟ್ ಮಾಡಲಾಗಿದೆ. ಇನ್ನು ಕೆಲವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾತುಗಳು ಆಪ್ತಬಳಗದಲ್ಲಿ ಕೇಳಿಬರುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ಆಪ್ತರ ರಕ್ಷಣೆಗೆ ನಿಲ್ಲುತ್ತಿಲ್ಲ, ಆಪ್ತರ ವಿಷಯದಲ್ಲಿ ಗಟ್ಟಿ ನಿಲುವು ತಾಳುತ್ತಿಲ್ಲ ಎಂಬ ಬಹಿರಂಗ ಅಸಮಾಧಾನಕ್ಕೆ ಕಾರಣವಾಗಿದೆ.

ಹೈಕಮಾಂಡ್ ಮುಂದೆ ಸಿಎಂ ಅಸಹಾಯಕತೆ?

ಆಪ್ತರ ವಿರುದ್ಧ ಯಾವುದೇ ಕಠಿಣ ಕ್ರಮಗಳು ಜರುಗಿಸುವಾಗ ಅಥವಾ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳಾಗುವಾಗ ಸಿದ್ದರಾಮಯ್ಯ ಅವರು ಅಸಹಾಯಕರಂತೆ ವರ್ತಿಸುತ್ತಿದ್ದಾರೆ, ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಮೌನಕ್ಕೆ ಜಾರಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಆಪ್ತರ ರಕ್ಷಣೆಗೆ ಏನು ಕ್ರಮ ಕೈಗೊಳ್ಳುತ್ತಿಲ್ಲ. ಇದು ಅವರ ಅಸಹಾಯಕತೆ ತೋರಿಸುತ್ತಿದೆ. ಹೀಗಾದರೆ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭಾರೀ ಹಿನ್ನಡೆ ಆಗಬಹುದು. ಪಕ್ಷಕ್ಕೆ ಹಗಲಿರುಳು ದುಡಿದವರನ್ನೇ ಉದ್ದೇಶಪೂರ್ವಕ ಟಾರ್ಗೆಟ್ ಮಾಡಿದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ ಇಂಥ ಸಂದರ್ಭದಲ್ಲಿ ಸಿಎಂ ಆಪ್ತರನ್ನ ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕಠಿಣ ಪರಿಸ್ಥಿತಿ ಎದುರಾದಾಗ ಅವರು ಕೈ ಕಟ್ಟಿ ಕುಳಿತಿರುವುದು ಅವರ ಆಪ್ತರ ಬೇಸರಕ್ಕೆ ಕಾರಣವಾಗಿದೆ.

ಸಮುದಾಯಗಳ ಆಕ್ರೋಶ ಮತ್ತು ಹಿನ್ನಡೆ

ಈ ಬೆಳವಣಿಗೆ ಕೇವಲ ವ್ಯಕ್ತಿಗಳ ಮೇಲಿನ ಟಾರ್ಗೆಟ್ ಆಗಿ ಉಳಿದಿಲ್ಲ. ಹೀಗೆ ಗುರಿಯಾಗುತ್ತಿರುವ ನಾಯಕರು ಬೇರೆ ಬೇರೆ ಸಮುದಾಯಗಳನ್ನ ಪ್ರತಿನಿಧಿಸುತ್ತಿರುವುದರಿಂದ ಆಯಾ ಸಮುದಾಯಗಳು ಈಗ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿದವರನ್ನು ಹೀಗೆ ಮೂಲೆಗುಂಪು ಮಾಡಿದರೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭಾರೀ ಹಿನ್ನಡೆಯಾಗಲಿದೆ ಎಂಬ ಎಚ್ಚರಿಕೆ ನೀಡುತ್ತಿದ್ದಾರೆ.

ಆಪ್ತರಿಗೆ ಆಘಾತ:

ತಮ್ಮ ನಾಯಕ ಸಿದ್ದರಾಮಯ್ಯ ಎಂಥ ಸಂದರ್ಭದಲ್ಲೂ ನಮ್ಮ ಕೈಬಿಡುವುದಿಲ್ಲ ಎಂದು ಅವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಆಪ್ತರು ಈಗ ತೀವ್ರ ಆಘಾತಕ್ಕೊಳಗಾಗಿದ್ದಾರೆ. ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿದಾಗ ನಾಯಕನೇ ರಕ್ಷಿಸದಿದ್ದರೆ ಮುಂದೆ ದಾರಿ ಏನು ಎಂಬ ಪ್ರಶ್ನೆ ಅವರ ಮುಂದಿದೆ. ಸಿದ್ದರಾಮಯ್ಯ ಅವರ ಈ ನಿಗೂಢ ಮೌನ ಮತ್ತು ಅಸಹಾಯಕತೆ ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.