ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 'ಡಿ ಬಾಸ್' ಎಂದು ಘೋಷಣೆ ಕೂಗಿದ ನಟ ದರ್ಶನ್ ಅಭಿಮಾನಿಗಳ ಮೇಲೆ ಗರಂ ಆದರು.
ರಾಮನಗರ (ಆ.4): ರಾಮನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಸಿದ್ಧ ಚಾಮುಂಡೇಶ್ವರಿ ಕರಗ ಮಹೋತ್ಸವದ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಟ ದರ್ಶನ್ ಅಭಿಮಾನಿಗಳ ಮೇಲೆ ಗರಂ ಆದ ಪ್ರಸಂಗ ನಡೆಯಿತು. ಸಿಎಂ ಭಾಷಣದುದ್ದಕ್ಕೂ ಅಭಿಮಾನಿಗಳು 'ಡಿ ಬಾಸ್.. ಡಿ ಬಾಸ್..' ಎಂದು ಘೋಷಣೆ ಕೂಗಿ ಅಡ್ಡಿಪಡಿಸಿದಾಗ, "ನೀವು ಹೀಗೆ ಮಾಡಿಯೇ ಅವರಿಗೆ ತೊಂದರೆ ಮಾಡುತ್ತಿದ್ದೀರಿ," ಎಂದು ಬಹಿರಂಗವಾಗಿಯೇ ಕಿಡಿಕಾರಿದರು.
ಅಷ್ಟೇ ಅಲ್ಲದೆ, "ಇಲ್ಲಿ ಕೋರ್ಟಿನ ವಿಚಾರ ಮಾತನಾಡಲು ಆಗುವುದಿಲ್ಲ. ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ, ಆದರೆ ಅದನ್ನು ಪಬ್ಲಿಕ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ. ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ನಾನು ಪ್ರಾರ್ಥನೆ ಮಾಡಿ ಸಿಎಂ ಆದೆ, ನೀವು ಹಾಗೆಯೇ ಪ್ರಾರ್ಥನೆ ಮಾಡಿ," ಎಂದು ದರ್ಶನ್ ಅಭಿಮಾನಿಗಳಿಗೆ ಸಲಹೆ ನೀಡಿದ ಸಿಎಂ, ಅವರ ಘೋಷಣೆ ಅತಿಯಾದಾಗ ಒಂದಷ್ಟು ಹೊತ್ತು "ನಾನು ಮಾತನಾಡಲ್ಲ ಹೋಗ್ರೋ" ಎಂದು ಕೋಪದಿಂದ ಮೈಕ್ ಕೊಟ್ಟು ಚೇರ್‌ನಲ್ಲಿ ಕುಳಿತರು.
ಪಟಾಕಿ ಸಿಡಿಸಿದ ಕಾರ್ಯಕರ್ತರ ಮೇಲೆಯೂ ಸಿಎಂ ಸಿಡಿಮಿಡಿ!
ದರ್ಶನ್ ಅಭಿಮಾನಿಗಳ ಗದ್ದಲ ಮುಗಿದು ಸಿಎಂ ಮತ್ತೆ ಭಾಷಣ ಆರಂಭಿಸುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಮತ್ತೆ ಅಡ್ಡಿಪಡಿಸಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸಿಎಂ, "ಯಾಕೆ ಮನೆಹಾಳು ಮಾಡಿಕೊಳ್ಳುತ್ತೀರಿ? ನನಗೆ ಈ ಪಟಾಕಿ ಬೇಕಿಲ್ಲ. ನನಗೆ ನಿಮ್ಮ ಬದುಕು ಬೇಕು, ನಿಮ್ಮ ಅಭಿವೃದ್ಧಿ ಬೇಕು. ನಿಮ್ಮ ಪ್ರಾರ್ಥನೆ ಮತ್ತು ಶ್ರಮದಿಂದಲೇ ನನಗೆ ಸೇವಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ," ಎಂದು ಪಟಾಕಿ ಸಿಡಿಸಿದವರ ವಿರುದ್ಧವೂ ಕೋಪ ತೋರಿಸಿಕೊಂಡರು.
ರಾಮನಗರದ ಅಭಿವೃದ್ಧಿಗೆ ₹600 ಕೋಟಿ ಹೆಲ್ತ್ ವಿವಿ, ₹150 ಕೋಟಿ ಅರ್ಕಾವತಿ ಯೋಜನೆ
ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಸುದೀರ್ಘವಾಗಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಅಭಿವೃದ್ಧಿ ಯೋಜನೆಯ ರೂಪುರೇಷೆಗಳನ್ನು ತೆರೆದಿಟ್ಟರು. ರಾಮನಗರದಲ್ಲಿ ಬರೋಬ್ಬರಿ ₹600 ಕೋಟಿ ವೆಚ್ಚದಲ್ಲಿ 'ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ' (RGUHS) ಹಾಗೂ ₹150 ಕೋಟಿ ವೆಚ್ಚದಲ್ಲಿ 'ಅರ್ಕಾವತಿ ನದಿ ಅಭಿವೃದ್ಧಿ' ಯೋಜನೆ ಸಾಕಾರಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಸುಮಾರು 300 ಎಕರೆ ಜಾಗದಲ್ಲಿ ಬಡವರಿಗೆ ನಿವೇಷನ (ಸೈಟ್) ಹಂಚಿಕೆ ಮಾಡುವ ಮಹತ್ವದ ಕೆಲಸ ಶೀಘ್ರದಲ್ಲೇ ನಡೆಯಲಿದೆ. ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ಕ್ಷೇತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ದೂರದೃಷ್ಟಿ ಸರ್ಕಾರದ ಮುಂದಿದೆ. ಹೆಚ್.ಸಿ. ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಇಡೀ ಜಿಲ್ಲೆಯ ಭಾಗ್ಯ. ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ರಾಮನಗರದಲ್ಲಿ ಹೈಟೆಕ್ ಕೆಪಿಎಸ್ ಶಾಲೆ ಹಾಗೂ 'ಭಾರತ್ ಜೋಡೋ ಯುವಕರ ಸಂಘ' ರೂಪುಗೊಳ್ಳುತ್ತಿದೆ ಎಂದರು.
'ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಿಮ್ಮೂರಿನ ಮಕ್ಕಳು. ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ, ಅವಕಾಶ ಮಾತ್ರ ನೀಡುತ್ತಾನೆ. ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡೋಣ' ಎಂದು ಕರೆ ನೀಡಿದ ಸಿಎಂ ಡಿಕೆ ಶಿವಕುಮಾರ್, ಕರಗ ಮಹೋತ್ಸವದ ಶುಭಾಶಯ ಕೋರಿದರು.


