Asianet Suvarna News Asianet Suvarna News

ಆಶಾ ಕಾರ್ಯಕರ್ತೆಯರೊಂದಿಗೆ ಸಿಎಂ ಸಂವಾದ : ಮುಕ್ತಕಂಠದಿ ಶ್ಲಾಘಿಸಿದ ಬಿಎಸ್‌ವೈ

  • ಆಶಾ ಕಾರ್ಯಕರ್ತೆಯರೊಂದಿಗೆ ಸಿಎಂ ಬಿಎಸ್‌ವೈ ವಿಡಿಯೋ ಸಂವಾದ
  • ಆಶಾ ಕಾರ್ಯಕರ್ತೆಯರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಿಎಂ
  • ತಮ್ಮ ವ್ಯಾಪ್ತಿಯಲ್ಲಿನ ಕಾರ್ಯಗಳ ಬಗ್ಗೆ ವಿವರಿಸಿದ ಆಶಾ ಕಾರ್ಯಕರ್ತೆಯರು
CM Bs Yediyurappa Video Conference With Asha Workers snr
Author
Bengaluru, First Published Jun 8, 2021, 3:54 PM IST

ಬೆಂಗಳೂರು (ಜೂ.08): ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಆಶಾ ಕಾರ್ಯಕರ್ತರೊಂದಿಗೆ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಕೋವಿಡ್ 19 ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮುಕ್ತ ಕಂಠದಿಂದ ಸಿಎಂ ಶ್ಲಾಘಿಸಿದರು. ಆಶಾ ಕಾರ್ಯಕರ್ತೆಯರ ಪರಿಶ್ರಮ ಹಾಗೂ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಗಮನಿಸಿ, ಕೋವಿಡ್ 19 ಎರಡನೇ ಅಲೆಯ ಪರಿಹಾರ ಪ್ಯಾಕೇಜ್ ನಡಿ 3 ಸಾವಿರ ರೂ. ಸಹಾಯಧನ ಘೋಷಿಸಿರುವುದಾಗಿ ತಿಳಿಸಿದರು. 

ವಿವಿಧ ಜಿಲ್ಲೆಗಳ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರ ಆರೋಗ್ಯದ ಸ್ಥಿತಿ ಗತಿ, ಕಾರ್ಯ ನಿರ್ವಹಣೆ, ಅವರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳ ವಿವರ, ಸಾರ್ವಜನಿಕರು, ಮೇಲಾಧಿಕಾರಿಗಳ ಸಹಕಾರ ಮೊದಲಾದ ವಿಷಯಗಳ ಕುರಿತು ಚರ್ಚಿಸಿದರು. 

ಬೀದಿ ವ್ಯಾಪಾರಿಗಳಿಗೆ 2 ಸಾವಿರ ರು. ಸಹಾಯಧನ : ಸಾಲ ಖಾತೆಗೆ ವಜಾ ಮಾಡದಂತೆ ಸೂಚನೆ ..

ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯ ಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಾಗಲು ಭಯ ಪಡುತ್ತಿದ್ದರು. ಆದರೆ ಇದೀಗ ಸಹಕರಿಸುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಅನುಭವಗಳನ್ನು ಸಿಎಂ ಜೊತೆ ಹಂಚಿಕೊಂಡರು. 

ಕೋವಿಡ್ ಪೀಡಿತರಾಗಿದ್ದ ಶಿವಮೊಗ್ಗ ಜಿಲ್ಲೆ ಮುಂಬಾರಿನ ಶಾರದಾ ಕೆ.ವಿ. ಕೋವಿಡ್ ಕೇರ್ ಸೆಂಟರಿನಿಂದಲೇ ಸಂವಾದದಲ್ಲಿ ಪಾಲ್ಗೊಂಡರು. ಕಳೆದ 15 ದಿನಗಳವರೆಗೆ ತಮ್ಮ ಗ್ರಾಮ ಕೋವಿಡ್ ಮುಕ್ತವಾಗಿತ್ತು. ಇದೀಗ ಏಳು ಪ್ರಕರಣಗಳು ಕಂಡು ಬಂದಿವೆ. ಇಬ್ಬರು ಹೋಂ ಐಸೊಲೇಷನ್ ನಲ್ಲಿದ್ದು, ಉಳಿದವರು ಕೋವಿಡ್ ಕೇರ್ ಸೆಂಟರಿನಲ್ಲಿ ದಾಖಲಾಗಿದ್ದಾರೆ ಎಂದು ವಿವರಿಸಿದರು. 

ಜನರು ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ತಮ್ಮ ಪತಿಗೇ ಮೊದಲಿಗೆ ಲಸಿಕೆ ಕೊಡಿಸಿ, ಜನರಲ್ಲಿ ವಿಶ್ವಾಸ ಮೂಡಿಸಿದ ಅನುಭವವನ್ನು ರಾಮನಗರದ ಶಿವಲಿಂಗಮ್ಮ ಹಂಚಿಕೊಂಡರು.

ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳು

ವಿಜಯಪುರ ಜಿಲ್ಲೆಯ ದೀಪಾ ಬಜ್ಜನವರ ಕೋವಿಡ್ ಕೇರ್ ಸೆಂಟರಿಗೆ ದಾಖಲಾಗಲು ಜನರು ಹಿಂದೇಟು ಹಾಕಿದ ಅನುಭವವನ್ನು ಸಿಎಂ ಜೊತೆಗಿನ ವಿಡಿಯೋ ಸಂವಾದದ ವೇಳೆ ವಿವರಿಸಿದರು. 

ಸಬ್ಬಮಂಗಲದ ರತ್ನಮ್ಮ ಅವರು, ಮನೆ ಮನೆಗೆ ಭೇಟಿ ನೀಡಿ, ಅರಿವು ಮೂಡಿಸುವುದರೊಂದಿಗೆ ಸೋಂಕಿತರಿಗೆ ಪೌಷ್ಟಿಕ ಆಹಾರ ಸೇವಿಸುವಂತೆ ಮನವರಿಕೆ ಮಾಡುತ್ತಿರುವುದಾಗಿ ತಿಳಿಸಿದರು.

ಕೊಪ್ಪಳ ಜಿಲ್ಲೆ ನವಲಿ ಗ್ರಾಮದ ಲಕ್ಷ್ಮವ್ವ ನಾಯಕ್, ತಮ್ಮ ಗ್ರಾಮದಲ್ಲಿ 60 ವರ್ಷ ಮೇಲ್ಪಟ್ಟ 120 ಜನರಲ್ಲಿ 115 ಜನರಿಗೆ ಲಸಿಕೆ ಹಾಕಿಸಿರುವುದಾಗಿ ತಿಳಿಸಿದರು.

ಬೆಳಗಾವಿ ಜಿಲ್ಲೆ ಸುರೇಬಾನದ ಶಾರದಾ ಮುದ್ದನ್ನವರ ಅವರು ಬಡಜನರ ಚಿಕಿತ್ಸೆಗೆ ದಾನಿಗಳಿಂದ ನೆರವು ದೊರಕಿಸುವ ಪ್ರಯತ್ನ ಮಾಡಿರುವುದನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.

ಸಂವಾದದ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ಸುರಕ್ಷಿತ ಎಂಬುದನ್ನು ಮನವರಿಕೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಬೇಕು. ಜೊತೆಗೆ, ಐ ಎಲ್ ಐ, ಸಾರಿ ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ಕೂಡಲೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಒದಗಿಸಲು ಕ್ರಮ ವಹಿಸುವಂತೆ ಸಲಹೆ ನೀಡಿದರು.

ಸಿಎಂ ಇಂದು ಆಶಾ ಕಾರ್ಯಕರ್ತೆಯರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಧಾರವಾಡ ಜಿಲ್ಲೆ ಅಮ್ಮಿನಭಾವಿಯ ಪ್ರೇಮಾ ಪ್ರಕಾಶ್ ಕಬ್ಬೂರು. ದಕ್ಷಿಣ ಕನ್ನಡ ಜಿಲ್ಲೆ ಸುಲ್ಕೇರಿಯ ಹೇಮಲತಾ.  ಬಳ್ಳಾರಿ ಜಿಲ್ಲೆ ದಬ್ಬೂರಿನ ಪರಿಮಳಾ.  ರಾಯಚೂರು ಜಿಲ್ಲೆ ಗಣಮೂರಿನ ಇಂದಿರಾ ಸಿಎಂ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios