ಬೆಂಗಳೂರು, (ಜೂನ್. 07): ಕೋವಿಡ್‌ 3ನೇ ಅಲೆ ಸೇರಿ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸಜ್ಜಾಗುತ್ತಿದೆ.

ಇದಕ್ಕಾಗಿ ರಾಜ್ಯ ಸರಕಾರ 1,500 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಸೋಮವಾರ ನಡೆದ ಕೋವಿಡ್‌ ಕಾರ್ಯಪಡೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಪಾಸಿಟಿವಿಟಿ ದರ ಇಳಿಕೆ: ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಡಬಲ್

ಇನ್ನು ಈ ಬಗ್ಗೆ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಸುದ್ದಿಗಾರರೊಂದಿಗೆ ಮಾತನಾಡಿ,  3  ತಿಂಗಳಲ್ಲಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗಲಿದೆ ಎಂದರು. 

ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳು
* 146 ತಾಲೂಕು ಹಾಗೂ 16 ಜಿಲ್ಲಾಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಇನ್ನು 3 ಆಸ್ಪತ್ರೆಗಳ ಸೌಲಭ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ಇದು. ಇಡೀ ವ್ಯವಸ್ಥೆಯನ್ನು ತಾಂತ್ರಿಕವಾಗಿ ಸಂಪೂರ್ಣ ಮೇಲ್ದರ್ಜೆಗೇರಿಸಲಾಗುವುದು. 

ಪ್ರಮುಖ 2 ಘೋಷಣೆ ಮಾಡಿದ ಮೋದಿ, ಸುಗಮವಾಯ್ತಾ BSY ಹಾದಿ?ಜೂ.7ರ ಟಾಪ್ 10 ಸುದ್ದಿ!

* ಪ್ರಾಥಮಿಕ ಮಟ್ಟದಿಂದ ಜಿಲ್ಲಾ ಆಸ್ಪತ್ರೆವರೆಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯದಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ಪ್ರತೀ ತಾಲೂಕು ಆಸ್ಪತ್ರೆಯಲ್ಲೂ ಒಟ್ಟು 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಇಷ್ಟೂ ಹಾಸಿಗೆಗಳ ಪೈಕಿ 25 ಐಸಿಯು, 25 ಎಚ್‌ಡಿಯು ಹಾಗೂ 50 ಆಕ್ಸಿಜನ್‌ ಹಾಸಿಗೆಗಳಿರುತ್ತವೆ. ಜತೆಯಲ್ಲಿಯೇ ವೆಂಟಿಲೇಟರ್‌, ಮಾನೀಟರ್‌ಗಳು & ಬೈಪ್ಯಾಪ್ ವ್ಯವಸ್ಥೆ ಇರುವ ಹಾಗೆ ಕ್ರಮ ವಹಿಸಲಾಗುವುದು. ರಿಮೋಟ್‌ ಐಸಿಯುಗಳ ಜತೆಗೆ ಎಲ್ಲ ರೀತಿಯ ಡಯಾಗ್ನಾಸ್ಟಿಕ್‌ ಸೌಲಭ್ಯವನ್ನೂ ಒದಗಿಸಲಾಗುವುದು. ಈ ಇಡೀ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ಎಲ್ಲ ನುರಿತ ಸಿಬ್ಬಂದಿಯನ್ನು ಸಮರೋಪಾದಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು. 

* ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ ತನಕ ಇಷ್ಟೆಲ್ಲ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ಕೊನೆ ಪಕ್ಷ 4,000  ವೈದ್ಯರ ಅಗತ್ಯವಿದೆ. ಒಬ್ಬ ವೈದ್ಯರಿಗೆ ಮೂವರು ನರ್ಸ್‌ಗಳಂತೆ, ಒಬ್ಬ ವೈದ್ಯರಿಗೆ ಗ್ರೂಪ್‌ ʼಡಿʼ ಮೂವರು ಸಿಬ್ಬಂದಿ ಅಗತ್ಯ. ಮೂಲಸೌಲಭ್ಯ ಮತ್ತು ಸಿಬ್ಬಂದಿ ವೇತನ ಸಲುವಾಗಿ 1,500 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ವಾರ್ಷಿಕ 600 ಕೋಟಿ ರೂ. ವೇತನ ಹೊರತುಪಡಿಸಿದರೆ ಮಿಕ್ಕ ಬಹುತೇಕ ವೆಚ್ಚ ಒಮ್ಮೆಯಷ್ಟೇ ಆಗುವಂಥದ್ದು. ಉಳಿದಂತೆ ಕಟ್ಟಡ, ಆಕ್ಸಿಜನ್‌ ಜನರೇಟರ್‌, ವೆಂಟಿಲೇಟರ್‌, ಯಂತ್ರೋಪಕರಣ ಇತ್ಯಾದಿ ಸೇರಿ 800 ಕೋಟಿ ರೂ. ವೆಚ್ಚ ಆಗಲಿದೆ. ಈ ಕುರಿತ ಅಂದಾಜು ವೆಚ್ಚದ ವಿವರಗಳನ್ನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದ್ದು, ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 

* ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಯಾರೂ ತಮ್ಮ ತಾಲೂಕು ಬಿಟ್ಟು ಆಚೆ ಬರಬಾರದು. ಜಿಲ್ಲಾ ಮಟ್ಟದಲ್ಲೇ 97% ಆರೋಗ್ಯ ಸೇವೆ ಸಿಗಬೇಕು. ಸರಕಾರಿ ಆಸ್ಪತ್ರೆ ಎಂದರೆ, ನಿರ್ವಹಣೆ & ಗುಣಮಟ್ಟದಲ್ಲಿ ಕೊರತೆ ಆಗಬಾರದು. ಇದು ಸರಕಾರದ ಉದ್ದೇಶ. ಇದಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ಬಿಸಿಜಿ (ಬಾಸ್ಟನ್‌ ಕನ್ಸಲ್‌ಟಿಂಗ್‌ ಗ್ರೂಪ್)‌ ನಮಗೆ CSR ಮೂಲಕ ಉಚಿತವಾಗಿ ತಾಂತ್ರಿಕ ನೆರವು ನೀಡುತ್ತಿದೆ. 

ಬೆಂಗಳೂರು ನಗರದಲ್ಲೂ ವಿಸ್ತರಣೆ: 
ಬೆಂಗಳೂರಿನಲ್ಲಿ ಆರೋಗ್ಯ ಮೂಲಸೌಕರ್ಯ ವಿಸ್ತರಿಸಲು ಸ್ಥಳದ ಅಭಾವ ಇದ್ದು, ಹೊಸ ಜಾಗಗಳನ್ನು ಅಥವಾ ಲಭ್ಯ ಸ್ಥಳಗಳನ್ನು ಗುರುತಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಅಗಾಧವಾಗಿ ಹೆಚ್ಚಿಸಲಾಗುವುದು. ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆಗಳಲ್ಲಿ ಒಳಗೊಳ್ಳದ ನಿತ್ಯದ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 2ನೇ ಹಂತದ ಆಸ್ಪತ್ರೆಗಳನ್ನು ಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುವುದು. ಈ ಉದ್ದೇಶಕ್ಕೆ ಸ್ಥಳದ ಅಗತ್ಯವಿದೆ. ಒಂದೆರಡು ವಾರದಲ್ಲಿ ಈ ಸಮಿತಿ ವರದಿ ನೀಡಲಿದೆ. 

*ಬೆಂಗಳೂರಿನಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು 100 ಹಾಸಿಗೆಗಳ ಉತ್ಕೃಷ್ಟ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತಿದೆ. ಇಲ್ಲಿಯೂ 25 ಐಸಿಯು, 25 ಎಚ್‌ಡಿಯು ಹಾಗೂ 50 ಆಕ್ಸಿಜನ್‌ ಹಾಸಿಗೆಗಳಿರುತ್ತವೆ. ಜತೆಗೆ, 4 ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯನ್ನು ಸ್ಥಾಪನೆ ಮಾಡಲಾಗುವುದು. 

ವಾರ್‌ ರೂಂಗೆ ಅನುಸಂಧಾನ: 
ಕೋವಿಡ್‌ ನಿರ್ವಹಣೆಯಲ್ಲಿ ಆಪ್ತಮಿತ್ರ, ಟೆಲಿ ಟ್ರಯಾಜಿಂಗ್‌, ಸುವರ್ಣ ಆರೋಗ್ಯ ಟ್ರಸ್ಟ್‌ ಸೇರಿ ವಿವಿಧ ನೆಟ್‌ವರ್ಕ್‌ಗಳು, ಆಪ್‌ಗಳು ಇತ್ಯಾದಿ ಇದ್ದು ಪ್ರತ್ಯೇಕವಾಗಿ ಕೆಲಸ ಮಾಡುತ್ತಿವೆ. ಇವೆಲ್ಲವನ್ನೂ ಕೋವಿಡ್‌ ವಾರ್‌ರೂಂಗೆ ಅನುಸಂಧಾನ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹೊಸ ವ್ಯವಸ್ಥೆಗೆ ವಾರ್‌ ರೂಂ ಉಸ್ತುವಾರಿಯೇ ಅಧ್ಯಕ್ಷರಾಗುತ್ತಾರೆ. ವಿವಿಧ ಸಮಿತಿಗಳ ಉಸ್ತುವಾರಿ ಹೊಂದಿರುವವರೆಲ್ಲ ವಾರ್‌ ರೂಂ ಉಸ್ತುವಾರಿ ಸಮಿತಿ ಸದಸ್ಯರಾಗಿರುತ್ತಾರೆ. ಮೂರನೇ ಅಲೆ ಇದೊಂದು ಅತ್ಯುತ್ತಮ ಕ್ರಮವಾಗಿದೆ. ಎರಡು ತಿಂಗಳಲ್ಲಿ ಇದನ್ನು ಮಾಡಲಾಗುವುದು. 

ಯುವಜನರಿಗೆ ಆರೋಗ್ಯ ಕುಶಲತೆ ತರಬೇತಿ: 
ಆರೋಗ್ಯ ವ್ಯವಸ್ಥೆ ಅರೆವೈದ್ಯ ಸಿಬ್ಬಂದಿ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಹಯೋಗದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ಎಸ್‌ಎಸ್‌ಎಲ್‌ಸಿ-ಪಿಯುಸಿ ವ್ಯಾಸಂಗ ಮಾಡಿರುವ 5,000 ಯುವ ಜನರಿಗೆ 3 ತಿಂಗಳ ಉಚಿತ ತರಬೇತಿಯನ್ನು ಆಯಾ ಜಿಲ್ಲಾ ಕೇಂದ್ರದಲ್ಲೇ ನೀಡಲಾಗುವುದು. ಈ ಸಂದರ್ಭದಲ್ಲಿ ಮಾಸಿಕ 5,000 ಗೌರವ ಧನ ನೀಡಲಾಗುವುದು.  

5 ಲಕ್ಷ ವಯಲ್ಸ್‌ ರೆಮಿಡಿಸಿವಿರ್‌ ಸಂಗ್ರಹ: 
3ನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ 5 ಲಕ್ಷ ವಯಲ್ಸ್‌ ರೆಮಿಡಿಸಿವಿರ್‌ ಔಷಧಿಯನ್ನು ಸಂಗ್ರಹ ಮಾಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಸದ್ಯಕ್ಕೆ ನಮ್ಮಲ್ಲಿ 2 ಲಕ್ಷ ವಯಲ್ಸ್‌ ಸಂಗ್ರಹ ಇದೆ. ಇನ್ನು 2,156 ಕಪ್ಪು ಶಿಲೀಂದ್ರದ ಪ್ರಕರಣಗಳು ವರದಿಯಾಗಿದ್ದು, ಅದಕ್ಕೂ ಔಷಧಿ ಕೊರತೆಯಾಗದಂತೆ ಲೈಸೋಮಲ್‌ ಆಪ್ತೋಟೆರಿಸಿನ್-ಬಿ ಔಷಧಿಯನ್ನು 23,000 ವಯಲ್ಸ್‌ ಕೇಂದ್ರ ಒದಗಿಸಿದೆ. ಪ್ರತಿದಿನ 10,000 ವಯಲ್ಸ್‌ ಅಗತ್ಯವಿದ್ದು, ಇದಕ್ಕೆ ಪರ್ಯಾಯವಾಗಿ ʼಎಮಲ್ಷನ್‌ ಆಪ್ತೋಮಲ್‌ ಟೆರಿಸನ್-ಬಿʼ ಔಷಧಿಯ 25,000 ವಯಲ್ಸ್‌  ಇದೇ ಜೂನ್ 10ರಂದು ಪೂರೈಕೆಯಾಗಲಿದೆ. 

ಖಾಸಗಿ ಆಸ್ಪತ್ರೆ & ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ 7,500 ಸಾಮಾನ್ಯ ಬೆಡ್‌ಗಳನ್ನು ಆಕ್ಸಿಜನ್‌ ಬೆಡ್‌ಗಳನ್ನಾಗಿ ಪರಿವರ್ತನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕೆ ಅಗತ್ಯ ಆರ್ಥಿಕಿ ನೆರವು ನೀಡಲಾಗುವುದು. 
  
ಜುಲೈ ಹೊತ್ತಿಗೆ ರಾಜ್ಯದಲ್ಲಿಯೇ 500 ಮೆ.ಟನ್‌ ಆಕ್ಸಿಜನ್‌ ಉತ್ಪಾದನೆಗೆ ಕ್ರಮ ವಹಿಸಲಾಗುವುದು. ಅದಕ್ಕೆ ಬೇಕಾದ ಅಗತ್ಯ ಆಕ್ಸಿಜನ್‌ ಜನರೇಟರ್‌ಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕಡೆಯಿಂದ ಒದಗಿಸಲಾಗುವುದು. ಜತೆಗೆ, ಜಿಲ್ಲಾಸ್ಪತ್ರೆಗಳಲ್ಲಿ 6 ಕೆಎಲ್‌ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಇದ್ದು, ಅದ್ನು 13 ಕೆಎಲ್‌ಗೆ ಹೆಚ್ಚಿಸಲಾಗುವುದು, ಮೆಡಿಕಲ್‌ ಕಾಲೇಜ್‌ಗಳಲ್ಲಿ 20 ಕೆಎಲ್‌ ಸಂಗ್ರಹ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗುವುದು. 

ಇನ್ನು ಲಸಿಕೆ ಖರೀದಿ ಇಲ್ಲ: 
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರ ವ್ಯಾಕ್ಸಿನ್‌ ಪೂರೈಕೆ ಮಾಡಲಿದೆ ಎಂದು ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಪ್ರಧಾನಿ ಅವರಿಗೆ ಅಭಿನಂದನೆಗಳು. ಇನ್ನು ಮುಂದೆ ರಾಜ್ಯವು ನೇರವಾಗಿ ಲಸಿಕೆ ಖರೀದಿ ಮಾಡಲ್ಲ. ಈಗಾಗಲೇ 3 ಕೋಟಿ ಲಸಿಕೆ ಖರೀದಿಗೆ ಆದೇಶ ನೀಡಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇನ್ನೂ 2 ಕೋಟಿ ಲಸಿಕೆ ಪಡೆಯುವ ಬಗ್ಗೆ ಪ್ರಯತ್ನ ನಡೆದಿತ್ತು. ಈಗ ಅದನ್ನು ಕೈಬಿಡಲಾಗಿದೆ. 

ಈ ತಿಂಗಳಲ್ಲಿಯೇ ಕೇಂದ್ರದ 58 ಲಕ್ಷ‌ ಡೋಸ್‌ ಕೋವಿಡ್ ಲಸಿಕೆ ಬರಲಿದೆ. ಖಾಸಗಿ ಕ್ಷೇತ್ರದಿಂದಲೂ 20 ಲಕ್ಷ ಡೋಸ್‌ ಲಭ್ಯವಾಗುತ್ತಿದೆ. ಜೂನ್‌ ತಿಂಗಳೊಂದರಲ್ಲೇ ರಾಜ್ಯಕ್ಕೆ 80 ಲಕ್ಷ ಡೋಸ್‌ ಲಸಿಕೆ ಸಿಗಲಿದೆ. ಈ ಲೆಕ್ಕದ ಪ್ರಕಾರ ಪ್ರತೀ ದಿನ 6 ಲಕ್ಷ ಜನರಿಗೆ ಲಸಿಕೆ ನೀಡಲು ಸಾಧ್ಯವಿದೆ. ಅದಕ್ಕೆ ಅಗತ್ಯವಾದ ಕ್ರಮ ಸರಕಾರ ವಹಿಸಲಿದೆ.