ಆಯುಷ್‌ ಇಲಾಖೆಯಿಂದ ಪ್ರಮಾಣೀಕೃತ ‘ಆಯುಷ್‌ 64’ ಔಷಧ  ರಾಜ್ಯದ ಮಾರುಕಟ್ಟೆಗೆ   ‘ಕೋವಿಡ್‌-19’ ವಿರುದ್ಧ ಹೋರಾಡುವ ಆಯುರ್ವೇದ ಸಂಜೀವಿನಿ  ಕೊರೋನಾ ಸೋಂಕಿತರ ಪಾಲಿಗೆ ‘ಆಯುಷ್‌ 64’ ಹೊಸ ಭರವಸೆ

ಮಂಗಳೂರು (ಜೂ.08):‘ಕೋವಿಡ್‌-19’ ವಿರುದ್ಧ ಹೋರಾಡುವ ಆಯುರ್ವೇದ ಸಂಜೀವಿನಿ, ಕೇಂದ್ರ ಆಯುಷ್‌ ಇಲಾಖೆಯಿಂದ ಪ್ರಮಾಣೀಕೃತ ‘ಆಯುಷ್‌ 64’ ಔಷಧವನ್ನು ರಾಜ್ಯದ ಮಾರುಕಟ್ಟೆಗೆ ಸೋಮವಾರ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಕೊರೋನಾ ಸೋಂಕಿತರ ಪಾಲಿಗೆ ‘ಆಯುಷ್‌ 64’ ಹೊಸ ಭರವಸೆ ಮೂಡಿಸಿದೆ.

‘ಆಯುಷ್‌ 64’ ಉತ್ಪನ್ನವನ್ನು ತಯಾರಿಸುವ ಪರವಾನಗಿ ಹೊಂದಿರುವ ಪುತ್ತೂರಿನ ಎಸ್‌ಡಿಪಿ ರೆಮಿಡಿಸ್‌ ಮತ್ತು ರಿಸರ್ಚ್ ಸೆಂಟರ್‌ನ ಆಯುರ್ವೇದ ತಜ್ಞ ಡಾ. ಹರಿಕೃಷ್ಣ ಪಾಣಾಜೆ ಮತ್ತು ರಾಜ್ಯಾದ್ಯಂತ ವಿತರಿಸುವ ಮಾರುಕಟ್ಟೆಹೊಣೆ ಹೊತ್ತಿರುವ ವಿವೇಕ್‌ ಟ್ರೇಡರ್ಸ್‌ ಹಾಗೂ ಆಯುರ್‌ ವಿವೇಕ್‌ ಸಂಸ್ಥೆಯ ಮುಖ್ಯಸ್ಥ ಮಂಗಲ್ಪಾಡಿ ನರೇಶ್‌ ಶೆಣೈ ಅವರು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಅಟಲ್‌ ಸೇವಾ ಕೇಂದ್ರದಲ್ಲಿ ಔಷಧ ಬಿಡುಗಡೆಗೊಳಿಸಿದರು.

ಕೊರೋನಾ ವಿರುದ್ಧ ಸಮರಕ್ಕೆ ಮತ್ತೊಂದು ಆಯುರ್ವೇದ ಔಷಧ; ವೈರಾನಾರ್ಮ್ ಬಿಡುಗಡೆ ...

ಬಳಿಕ ಮಾತನಾಡಿದ ಡಾ.ಹರಿಕೃಷ್ಣ ಪಾಣಾಜೆ, ಎಸ್‌ಡಿಪಿ ಸಂಸ್ಥೆಯು ಕಳೆದ 30 ವರ್ಷಗಳಿಂದ ಆಯುರ್ವೇದ ಉತ್ಪನ್ನಗಳನ್ನು ತಯಾರಿಸುತ್ತಾ ಬಂದಿದೆ. ಭಾರತ ಸರ್ಕಾರದ ಆಯುಷ್‌ ಇಲಾಖೆ ಹಾಗೂ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ರಿಸರ್ಚ್ ಇನ್‌ ಆಯುರ್ವೇದ ‘ಆಯುಷ್‌ 64’ ಔಷಧ ಸಿದ್ಧಪಡಿಸಿದೆ. ಇದರ ಬಗ್ಗೆ ದೇಶದ 9 ಕಡೆಗಳಲ್ಲಿ ಕ್ಲಿನಿಕಲ್‌ ಅಧ್ಯಯನ ಪ್ರಯೋಗಗಳು ನಡೆದಿದ್ದು, ಕೊರೋನಾ ಸೋಂಕನ್ನು ಯಶಸ್ವಿಯಾಗಿ ಈ ಔಷಧ ನಿರ್ಮೂಲನೆ ಮಾಡಲಿದೆ ಎಂಬುದನ್ನು ಸಾರಿವೆ. ರಾಜ್ಯದಲ್ಲಿ ಈ ಔಷಧ ತಯಾರಿಕೆಯ ಪರವಾನಗಿ ಎಸ್‌ಡಿಪಿ ರೆಮಿಡಿಸ್‌ ಮತ್ತು ರಿಸಚ್‌ರ್‍ ಸೆಂಟರ್‌ಗೆ ದೊರೆತಿರುವುದು ಸಂತಸದ ವಿಚಾರವಾಗಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದರು.

ವಾರದೊಳಗೆ ಸೋಂಕು ಲಕ್ಷಣ ಶಮನ: ಕೊರೋನಾ ಲಕ್ಷಣಗಳು ಆರಂಭವಾದ ಕೂಡಲೇ ಈ ಔಷಧ ಸೇವನೆ ಆರಂಭಿಸಬೇಕು. ಮಾತ್ರೆ ಸೇವನೆಯ ವಾರದೊಳಗೆ ಸೋಂಕಿನ ಲಕ್ಷಣಗಳು ಶಮನಗೊಳ್ಳುತ್ತವೆ. ದೇಹದಲ್ಲಿ ‘ವೈರಸ್‌ ಲೋಡ್‌’ ಕಡಿಮೆ ಮಾಡಿ ರೋಗಿಯನ್ನು ಗುಣಮುಖಗೊಳಿಸಲಿದೆ. ಕೊರೋನಾ ಲಕ್ಷಣ ಕಂಡುಬಂದು ವರದಿ ದೊರೆಯಲು ವಿಳಂಬವಾದರೂ ಈ ಔಷಧ ಸೇವನೆ ಆರಂಭಿಸಬಹುದು. ಈ ಔಷಧ ಇತರ ಸೋಂಕು ರೋಗಗಳ ಶಮನಕ್ಕೂ ಪೂರಕವಾಗಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಅಡ್ಡ ಪರಿಣಾಮವಂತೂ ಇಲ್ಲವೇ ಇಲ್ಲ. ಈ ಔಷಧ ಸೇವನೆಯಿಂದ ಸೋಂಕಿತ ರೋಗಿಯ ಆರೋಗ್ಯ ಸ್ಥಿತಿ ವೆಂಟಿಲೇಟರ್‌ವರೆಗೆ ಹೋಗದಂತೆ ತಡೆದು ಗುಣಮುಖಗೊಳಿಸುತ್ತದೆ ಎಂದು ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದರು.

ರಾಜ್ಯದಲ್ಲಿ ಹಂತ-ಹಂತವಾಗಿ ಅನ್​ಲಾಕ್: ಸಚಿವ ಆರ್.ಅಶೋಕ್ ಸ್ಪಷ್ಟನೆ

ಆಯುಷ್‌ 64 ಔಷಧವನ್ನು ಕೊರೋನಾ ಸೋಂಕಿತರು 14 ದಿನಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೋವಿಡ್‌-19 ಸಾಮಾನ್ಯ ಲಕ್ಷಣಗಳಿರುವ ಸೋಂಕಿತರು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ತಲಾ ಮಾತ್ರೆಯಂತೆ ಆಹಾರ ಸೇವಿಸಿದ ಒಂದು ಗಂಟೆ ನಂತರ ನೀರಿನೊಂದಿಗೆ ಸೇವಿಸಬೇಕು. ಹೀಗೆ 20 ದಿನ ಸೇವನೆ ಮಾಡಿದರೆ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಬಹುದು. ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳ ಔಷಧಗಳೊಂದಿಗೆ ಆಯುಷ್‌ 64 ಮಾತ್ರೆಗಳನ್ನು ಸೇವಿಸಬಹುದು. ಕೋವಿಡ್‌ ಲಸಿಕೆ ಪಡೆದು ಸೋಂಕಿತರಾದವರು ಕೂಡ ವೈದ್ಯರ ಸಲಹೆ ಮೇರೆಗೆ ಪಡೆದುಕೊಳ್ಳಬಹುದು ಎಂದು ಅವರು ವಿವರಿಸಿದರು.

ವಿವೇಕ್‌ ಟ್ರೇಡರ್ಸ್‌ ಹಾಗೂ ಆಯುರ್‌ ವಿವೇಕ್‌ ಸಂಸ್ಥೆಯ ಮುಖ್ಯಸ್ಥ ನರೇಶ್‌ ಶೆಣೈ ಮಾತನಾಡಿ, ‘ಆಯುಷ್‌ 64’ ಔಷಧ ಉತ್ಪಾದನೆಗೆ ಇಡೀ ದೇಶದಲ್ಲಿ ಕೇವಲ 9 ಸಂಸ್ಥೆಗಳಿಗೆ ಮಾತ್ರ ಸರ್ಕಾರ ಪರವಾನಗಿ ನೀಡಿದ್ದು, ರಾಜ್ಯದಲ್ಲಿ ಈ ಉತ್ಪನ್ನ ತಯಾರಿಸುವ ಏಕೈಕ ಸಂಸ್ಥೆ ಪುತ್ತೂರಿನ ಎಸ್‌ಡಿಪಿ ಆಗಿದೆ. ಇನ್ನು ಮುಂದೆ ಈ ಔಷಧ ರಾಜ್ಯದ ಎಲ್ಲ ಔಷಧಿ ಮಳಿಗೆಗಳಲ್ಲಿ ದೊರೆಯಲಿದೆ. ಅತಿ ಶೀಘ್ರದಲ್ಲಿ ಕೋವಿಡ್‌ ಮುಕ್ತ ಭಾರತ ನಿರ್ಮಾಣವಾಗಲಿದೆ ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona