ವಿಧಾನಸಭೆ [ಮಾ.03]:  ಗಡಿ ವಿಚಾರದಲ್ಲಿ ನೆರೆ ರಾಜ್ಯ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದ್ದು, ಯಾವುದೇ ಕಾರಣಕ್ಕೂ ಒಂದಿಂಚು ಜಮೀನನ್ನೂ ಬಿಟ್ಟುಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖಡಕ್ಕಾಗಿ ನುಡಿದಿದ್ದಾರೆ.

 ಸದನದಲ್ಲಿ ಸಂತಾಪ ಸೂಚನೆ ನಂತರ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷದ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಪಕ್ಷದ ಗದ್ದಲದ ನಡುವೆಯೇ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಗಡಿ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ಆದರೆ, ಮಹಾಜನ್‌ ವರದಿಯೇ ಅಂತಿಮ. ಯಾವುದೇ ಕಾರಣಕ್ಕೂ ನಾಡಿನ ಒಂದಿಂಚು ಜಮೀನನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಐದಾರು ಇಲಾಖೆ ಸುವರ್ಣಸೌಧಕ್ಕೆ:

ಬೆಳಗಾವಿಯಲ್ಲಿ ಸುವರ್ಣಸೌಧ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಮತ್ತು ಜನತೆಯ ಹತ್ತಿರಕ್ಕೆ ಅಧಿಕಾರ ತೆಗೆದುಕೊಂಡು ಹೋಗುವ ದೃಷ್ಟಿಯಿಂದ ಕನಿಷ್ಠ 5-6 ಇಲಾಖೆಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರ ಹಿಡಿದು ಏಳು ತಿಂಗಳಾಗಿದೆ. ದಿಟ್ಟವಾಗಿ ಹಲವು ಸವಾಲುಗಳನ್ನು ಎದುರಿಸಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರಲು ದೃಢವಾಗಿ ಪ್ರಯತ್ನಿಸುತ್ತಿದೆ. ಕೆಲವು ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ತಡೆ ಹಿಡಿದಿದ್ದಾರೆ ಎಂಬ ನಿಲುವು ತಳೆದಿದ್ದಾರೆ. ಆದರೆ, ಹಣಕಾಸಿನ ಶಿಸ್ತನ್ನು ಪಾಲಿಸಲು ಈ ರೀತಿಯ ಕಾರ್ಯ ಅನಿವಾರ್ಯವಾಗಿದೆ. ಹಂತಹಂತವಾಗಿ ಹಣ ಬಿಡುಗಡೆ ಮಾಡಿ, ತಡೆಹಿಡಿದ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.

ಬಜೆಟ್‌ನಲ್ಲಿ ಕೃಷಿಗೆ ಒತ್ತು:

ರಾಜ್ಯದ ರೈತರ ಸರ್ವೋತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ನಲ್ಲಿ ನೀರಾವರಿ ಮತ್ತು ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಹೀಗಾಗಿ ಹೆಚ್ಚಿನ ರೀತಿಯನ್ನು ಹೂಡಿಕೆ ಬರುವ ನಿರೀಕ್ಷೆ ಇದೆ. ಯಾದಗಿರಿ ಜಿಲ್ಲೆಯ ಕಡೆಚೂರ್‌ ಕೈಗಾರಿಕಾ ಪಾರ್ಕ್ ಮುಂದಿನ ದಿನದಲ್ಲಿ ರಾಜ್ಯದ ಅತಿ ದೊಡ್ಡ ಔಷಧಿ ಮತ್ತು ಆವೃತ್ತಿಗಳು ಸಲಕರಣೆಗಳ ಕೇಂದ್ರವಾಗಿ ಪರಿಣಮಿಸಲಿದೆ. ಇದರಿಂದ ಆ ಭಾಗದ ಯುವಕರಿಗೆ ಕೆಲಸ ಸಿಗುವುದು ಮತ್ತು ಆಲ್ಲಿನ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೈದರಾಬಾದ್‌-ಕರ್ನಾಟಕ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಇದು 370ಜೆ ಕಲಂ ತೀವ್ರಗತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ವಿಧಾನಸೌಧ ನಡುಗಿಸುವ ಬಿಎಸ್ ಯಡಿಯೂರಪ್ಪ ಕಣ್ಣೀರಿಟ್ಟಿದ್ದೇಕೆ?..

ಬೀದರ್‌ ಮತ್ತು ಕಲಬುರಗಿ ವಿಮಾನ ನಿಲ್ದಾಣ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಗೆ ವರದಾನವಾಗಿದೆ. ಬಂಡವಾಳದಾರರಿಗೆ ಅಗತ್ಯ ಇರುವುದು ಸಮಯ ನಿರ್ವಹಣೆಯಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕಕ್ಕೆ ಭೇಟಿ ನೀಡಲು ವಿಮಾನ ನಿಲ್ದಾಣಗಳು ಸಹಾಯವಾಗಲಿದೆ. ಹುಬ್ಬಳ್ಳಿ ನಡೆದ ಬಂಡವಾಳ ಹೂಡಿಕೆ ಸಮಾವೇಶ ಉತ್ತರ ಕರ್ನಾಟಕದಲ್ಲಿ 70 ಸಾವಿರ ಕೋಟಿ ರು. ಬಂಡವಾಳ ಬರುವಂತೆ ಮಾಡಿದೆ. ದಾವೋಸ್‌ ಭೇಟಿ ಫಲಪ್ರದವಾಗಿದೆ. ಕೆಲವು ತಿಂಗಳಲ್ಲಿ ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರು ಸಾಲು ಸಾಲಾಗಿ ಬರಲಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಔದ್ಯೋಗಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಇದರಿಂದ ಉದ್ಯೋಗ ಸೃಷ್ಟಿಕುಂಠಿತಗೊಂಡಿದೆ. ಮುಂದಿನ ದಿನದಲ್ಲಿ ಈ ಸಮಸ್ಯೆ ಬಗೆಹರಿಸಲು ಸರ್ಕಾರವು ದಿಟ್ಟಹೆಜ್ಜೆ ಇಟ್ಟಿದೆ ಎಂದು ಆಶ್ವಾಸನೆ ನೀಡಿದರು.

ಶಿಕ್ಷಣ ಗುಣಮಟ್ಟದ ಹೆಚ್ಚಳಕ್ಕೆ ಶಿಕ್ಷಕರ ತರಬೇತಿ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಮುಂತಾದ ಉಪಕ್ರಮಗಳೊಂದಿಗೆ ಶಾಲಾ ಮಕ್ಕಳಿಗೆ ಹಿತಕರವಾದ ವಾತಾವರಣ ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ. ಶಾಲೆಗಳ ಕೊಠಡಿಗಳು, ಶೌಚಾಲಯ ಮತ್ತಿತರ ಮೂಲಸೌಕರ್ಯ ಒದಗಿಸಲು 141.81 ಕೋಟಿ ರು. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಲೋಕೋಪಯೋಗಿ ಇಲಾಖೆಯಿಂದ ಹಾನಿಗೊಳದ ರಸ್ತೆಗಳ ದುರಸ್ತಿ ಹಾಗೂ ಪುನರ್‌ ನಿರ್ಮಾಣಕ್ಕಾಗಿ 500 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಕೆರೆಗಳ ದುರಸ್ತಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 449.58 ಕೋಟಿ ರು. ಬಿಡುಗಡೆಯಾಗಿದೆ. ಗ್ರಾಮೀಣ ಪ್ರದೇಶಗಳ ರಸ್ತೆ ದುರಸ್ತಿಗಾಗಿ 447.42 ಕೋಟಿ ರು. ಮತ್ತು ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಕೆಲಸಗಳ ದುರಸ್ತಿಗಾಗಿ 48.55 ಕೋಟಿ ರು. ಮೊತ್ತವು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡಗಡೆ ಮಾಡಲಾಗಿದೆ. ವಿದ್ಯುತ್‌ ಉಪಕರಣಗಳ ದುರಸ್ತಿಗಾಗಿ 201.12 ಕೋಟಿ ರು. ಅನುದಾನ ಸೇರಿ ಎಲ್ಲಾ ಕಾರ್ಯಕ್ರಮಗಳಿಗಾಗಿ 2146 ಕೋಟಿ ರು. ಬಿಡುಗಡೆ ಮಾಡುವ ಮೂಲಕ ಮೂಲಭೂತ ಸೌಲಭ್ಯಗಳನ್ನು ದುರಸ್ತಿಪಡಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.