- ಜಯಪ್ರಕಾಶ್ ಶೆಟ್ಟಿ, ಎಡಿಟರ್​ - ಕರೆಂಟ್ ಅಫೇರ್ಸ್​​​, ಸುವರ್ಣ ನ್ಯೂಸ್

ಅದೊಂದು ಐತಿಹಾಸಿಕ ಸಂದರ್ಶನ ಆಗಲಿದೆ ಎಂದು ನನಗಾಗಲಿ, ಹೇಮಂತನಿಗಾಗಲಿ ಗೊತ್ತಿರಲಿಲ್ಲ. ನಾವು ಕೇವಲ ಒಂದು ಕ್ಯಾಮೆರಾ ಮತ್ತು ಮೈಕ್​ ಹಿಡಿದು ಹೋಗಿದ್ದೆವು. ಸಂದರ್ಶನ ಸಿಕ್ಕರೆ ಬೈ ಚಾನ್ಸ್​ ಎನ್ನುವುದೇ ನಮ್ಮ ಆಶಯವಾಗಿತ್ತು. 8ಗಂಟೆಗೆ ಯಡಿಯೂರಪ್ಪನವರ ಸಂದರ್ಶನ ಶುರುವಾಯಿತು. ಒಟ್ಟು 15 ನಿಮಿಷದ ಸಂದರ್ಶನ. ಆದರೆ ನನ್ನ ಪ್ರಶ್ನೆಗಳಿಗೆ ಅವರು ಉತ್ತರಿಸಿದ ರೀತಿ ಅತೀ ದೊಡ್ಡ ಬ್ರೇಕಿಂಗ್​ ನ್ಯೂಸ್​ ಆಗುತ್ತೆ ಅಂತ ಗೊತ್ತಿರಲಿಲ್ಲ. ಅವತ್ತು ಇಡೀ ದಿನ ಎಲ್ಲ ಟಿವಿಗಳಲ್ಲೂ ಆ ಸಂದರ್ಶನದ ತುಣಕುಗಳೇ ರಾರಾಜಿಸಿದವು.

2009ರಲ್ಲಿ ನನ್ನ ಉದ್ಯೋಗ ಜೀವನದಲ್ಲೊಂದು ಮಹತ್ತರ ಬದಲಾವಣೆ ಆಗಿತ್ತು. ಆ್ಯಂಕರ್ ಜವಾಬ್ದಾರಿಯಿಂದ ವಿರಾಮ ಪಡೆದು ರಾಜಕೀಯ ವರದಿಗಾರಿಕೆ ಆರಂಭಿಸಿದ್ದೆ. ಎಸಿ ಸ್ಟುಡಿಯೋದಿಂದ ಬಿಸಿ ಬಿಸಿ ರಾಜಕೀಯ ಅಂಗಳದಲ್ಲಿ ಅಂಬೆಗಾಲಿಡಲು ಶುರು ಮಾಡಿದ ದಿನಗಳವು. ಆಗ ಸಿಎಂ ಆಗಿದ್ದವರು ಬಿ.ಎಸ್​. ಯಡಿಯೂರಪ್ಪ.

ಅದು 2009 ಸೆಪ್ಟಂಬರ್​ ತಿಂಗಳು. ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯ ನೆರೆ ಹಾವಳಿ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿರುವಾಗಲೇ, ದೂರದ ದೆಹಲಿಗೆ ತೆರಳಿದ್ದ ಕೆಲವರು, ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕಸರತ್ತು ನಡೆಸುತ್ತಿದ್ದರು.

ಅದೊಂದು ವಿದ್ಯೆ ಗೊತ್ತಿದ್ದರೆ, ಮೋದಿಯನ್ನೂ ಮೀರಿಸುತ್ತಿದ್ದರು BSY

ನೆರೆ ಹಾವಳಿಯ ನಡುವೆ ಈ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಯಡಿಯೂರಪ್ಪ ಅವರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಕಾರಣ ಉತ್ತರ ಕರ್ನಾಟಕದ ನೆರೆ ಹಾವಳಿಯ ಪರಿಹಾರ ಕಾರ್ಯ ಒಂದೆಡೆಯಾದರೆ ಹೈಕಮಾಂಡ್​ ಬುಲಾವ್​ ಮೇರೆಗೆ ಎಲ್ಲವನ್ನು ಅಲ್ಲಿಯೇ ಬಿಟ್ಟು ದೆಹಲಿ ನಾಯ ಕರ ಮುಂದೆ ನಿಲ್ಲುವ ಅನಿವಾರ್ಯತೆ.

13 ದಿನ ಸಿಎಂ ಯಡಿಯೂರಪ್ಪ ಸೇರಿದಂತೆ ಅರ್ಧಕ್ಕರ್ಧ ಶಾಸಕರು ಸೇರಿದಂತೆ ಇಡೀ ಮಂತ್ರಿಮಂಡಲ ದೆಹಲಿಯಲ್ಲಿ ಬೀಡುಬಿಟ್ಟಿತ್ತು. ಇಲ್ಲಿ ನೆರೆ ಪೀಡಿತರ ಪಾಡು ಕೇಳೋರೆ ಇಲ್ಲದಂತಾಗಿತ್ತು. ಸುವರ್ಣ ನ್ಯೂಸ್​ನ ದೆಹಲಿ ಬ್ಯೂರೋ ಮುಖ್ಯಸ್ಥರಾಗಿದ್ದ ಪ್ರಶಾಂತ್​ ನಾಥು ಜೊತೆ ಸೇರಿ ವರದಿ ಮಡಲು ನಾನು ಮತ್ತು ಕ್ಯಾಮೆರಾಮನ್​ ಹೇಮಂತ್​ ದೆಹಲಿ ವಿಮಾನ ಏರಿದ್ದೆವು.

13 ದಿನಗಳಲ್ಲಿ ಸಿ.ಎಂ ಯಡಿಯೂರಪ್ಪನವರು ಬಿಜೆಪಿ ಅಧ್ಯಕ್ಷ ರಾಜನಾಥ್​ಸಿಂಗ್​ ಮನೆ, ಅರುಣ್​ ಜೇಟ್ಲಿ ಮನೆ ಹಾಗೂ ಸುಷ್ಮಾ ಸ್ವರಾಜ್​ ಅವರ ನಿವಾಸಕ್ಕೆ ಅಲೆದಾಟವೇ ಆಯಿತು. ಪರಿಸ್ಥಿತಿ ಹೇಗಿತ್ತೆಂದರೆ ಯಾವುದೇ ಕ್ಷಣದಲ್ಲೂ ಯಡಿಯೂರಪ್ಪನವರು ರಾಜೀನಾಮೆ ನೀಡಲಿದ್ದಾರೆ. ಅದ್ರಲ್ಲೂ ರಾಷ್ಟ್ರೀಯ ಮಾಧ್ಯಮಗಳು, ಕನ್ನಡ ಮಾಧ್ಯಮಗಳಲ್ಲಿ ಒಂದೇ ರೀತಿಯ ಬ್ರೇಕಿಂಗ್​ ನ್ಯೂಸ್​ `ಬಿಎಸ್​ವೈ ರಾಜೀನಾಮೆ ಯಾವಾಗ..?'

"

ನವಂಬರ್​ 6ರ ರಾತ್ರಿ ರಾಜನಾಥ್​ಸಿಂಗ್​ ಭೇಟಿ ಮುಗಿಸಿದ ಬಿಎಸ್​ವೈ ನೇರವಾಗಿ ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ವಿಚಾರಿಸಲು ತೆರಳಿದರು. ಅರ್ಧ ಗಂಟೆಯ ನಂತರ ವಾಜಪೇಯಿ ನಿವಾಸದಿಂದ ಹೊರ ಬಂದಾಗ ಯಡಿಯೂರಪ್ಪನವರ ಕಣ್ಣಾಲಿಗಳು ತೇವವಾಗಿದ್ದವು. ಗುರು ವಾಜಪೇಯಿ ಆರೋಗ್ಯ ಸರಿ ಇದ್ದಿದ್ದರೆ ಅನ್ನೋ ಭಾವ ಅವರ ಮುಖದಲ್ಲಿತ್ತು. ಏನಾಗುತ್ತಿದೆ ದೆಹಲಿಯಲ್ಲಿ ಎಂಬ ಖಚಿತ ಮಾಹಿತಿ ಯಾರೊಬ್ಬರಿಗೂ ಸಿಗುತ್ತಿರಲಿಲ್ಲ. ಆದರೂ ಯಡಿಯೂರಪ್ಪ ಪದಚ್ಯುತಿ ಗ್ಯಾರಂಟಿ ಎಂಬ ಸುದ್ದಿ ಹರಿದಾಡುತ್ತಿತ್ತು.

ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಒಂದು ಸಂದರ್ಶನ ಸಿಕ್ಕರೆ ಅದೊಂದು ದೊಡ್ಡ ಪ್ರೈಜ್​ ಕ್ಯಾಚ್​ ಆಗಲಿದೆ ಎಂದು ಪತ್ರಕರ್ತ ಮನಸ್ಸು ಒಳಗೊಳಗೆ ತುಡಿಯುತ್ತಿತ್ತು. ವಾಜಪೇಯಿ ನಿವಾಸದಿಂದ ಬಂದ ಯಡಿಯೂರಪ್ಪ ನೇರವಾಗಿ ಕರ್ನಾಟಕ ಭವನ ಸೇರಿದರು. ಬೆಳಗ್ಗೆ 6 ಗಂಟೆಗೆ ಚುಮುಚುಮು ಚಳಿಯಲ್ಲಿ ನಾನು ಮತ್ತು ಕ್ಯಾಮರಮನ್​ ಹೇಮಂತ್​ ಹಾಗೂ ಧನಂಜಯ್ ಕುಮಾರ್​ ಜೊತೆ ತುಳುವಿನಲ್ಲಿ ಮಾತನಾಡಿ ಅಪಾಯಿಂಟ್​ಮೆಂಟ್​ ಫಿಕ್ಸ್​ ಮಾಡಿಕೊಂಡೆವು. ಸಫಾರಿ ಹಾಕಿಕೊಂಡಿದ್ದ ಯಡಿಯೂರಪ್ಪನವರು ಅದಾಗಲೇ ವಾಕಿಂಗ್​ ಹಾಗೂ ದೇವರ ಪೂಜೆ ಮುಗಿಸಿ ಒಂದು ರೀತಿ ಶೂನ್ಯದತ್ತ ಮುಖಮಾಡಿ ಕೂತಿದ್ದರು.. ಧನಂಜಯ್ ಕುಮಾರ್​ ಸಂದರ್ಶನದ ವಿಷಯ ಹೇಳಿದಾಗ ತಕ್ಷಣ ರೆಡಿ ಆದರು.

ಯಡಿಯೂರಪ್ಪ ಹುಟ್ಟಿದಬ್ಬಕ್ಕೆ ಮೋದಿ ಗಿಫ್ಟ್

ನನಗೋ ವರದಿಗಾರಿಕೆಯೆ ಹೊಸದು. ಇನ್ನು ಯಡಿಯೂರಪ್ಪ ತುಂಬಾ ಸಂಕಟದಲ್ಲಿದ್ದಾಗ ಮಾತನಾಡಿಸುವುದು ಸವಾಲಾಗಿತ್ತು. ಕೋಪಿಷ್ಟ ಅನ್ನೋ ಮಾತು ಬೇರೆ ಅವರ ಜೊತೆಗಿದೆ. ಯಡಿಯೂರಪ್ಪ ನನ್ನಂತ ಕಿರಿಯನ ಎದುರು ಮನ ಬಿಚ್ಚಿ ಮಾತನಾಡ್ತಾರ..? ಅವರ ಬಾಯಿ ಬಿಡಿಸುವುದು ಹೇಗೆ..? ಅನ್ನೋ ಲೆಕ್ಕಾಚಾರದಲ್ಲೇ ಮಾತು ಶುರು ಮಾಡಿದೆ. ನನ್ನ ಪ್ರಶ್ನೆಗಳಿಗೆ ಅವರು ಉತ್ತರಿಸಿದ ರೀತಿ ಅತೀ ದೊಡ್ಡ ಬ್ರೇಕಿಂಗ್​ ನ್ಯೂಸ್​ ಆಗಿ ಇತಿಹಾಸದ ಪುಟದಲ್ಲಿ ದಾಖಲಾಯ್ತು.

ಪ್ರಶ್ನೆ: ದೇವರ ಪೂಜೆ ಮಾಡಿ ಕೂತಿದ್ದೀರಿ. ದೇವರು ಈಗ ಪ್ರತ್ಯಕ್ಷವಾದರೆ ಏನು ಮಾಡುವಿರಿ..?
ಈ ಪ್ರಶ್ನೆಗೆ ಉತ್ತರಿಸಲು ಶುರು ಮಾಡುತ್ತಲೇ ಅವರ ಕೊರಳುಬ್ಬಿ ಗದ್ಗಿತರಾಗಿ ಕಣ್ತುಂಬಿಕೊಂಡರು. ಅವರು ಎಷ್ಟೇ ಪ್ರಯತ್ನ ಪಟ್ಟರು ಅದನ್ನು ಹಿಡಿದಿಡಲಾಗದೆ ಅವರ ಕೆನ್ನೆಯನ್ನು ತೋಯಿಸಿತು ಕಣ್ಣೀರು. ಕಣ್ಣೀರು ಹಾಕುತ್ತಲೇ ಮಾತಾದ ಯಡಿಯೂರಪ್ಪ ಹೇಳಿದ್ದು ಹೀಗೆ..

`ರಾಜ್ಯದ ಜನ ನೆರೆ ಹಾವಳಿಯಿಂದ ತತ್ತರಿಸುತ್ತಿದ್ದಾರೆ. ಭಗವಂತ ನೀನು ನಿರೀಕ್ಷೆ ಮಾಡಿದ್ದಷ್ಟು ಕೆಲಸ ಮಾಡಲು ಆಗಲಿಲ್ಲ.? ಜನರ ಕೆಲಸ ಮಾಡಲು ಇನ್ನೂ ಹೆಚ್ಚಿನ ಶಕ್ತಿ ಕೊಡು ಅಂತಾ ಕೇಳ್ತಿನಿ' ಎನ್ನುತ್ತಾ ಬಿಕ್ಕಿ ಬಿಕ್ಕಿ ಅತ್ತರು. `ಉತ್ತರ ಕರ್ನಾಟಕದ ಜನ ಒಂದೊತ್ತಿನ ಊಟಕ್ಕೂ ಪರದಾಡಬಾರದು ಈ ಸಂದರ್ಭದಲ್ಲಿ ನಾನು ಅವರ ಜೊತೆ ಇರಬೇಕಿತ್ತು. ನನ್ನ ಸ್ವಾರ್ಥಕ್ಕಾಗಿ ಸಚಿವೆ ಶೋಭ ಮತ್ತು ಐಎಎಸ್​ ಅಧಿಕಾರಿ ಬಳಿಗಾರ್​ ಅವರನ್ನ ಕೈ ಬಿಡಬೇಕಾಯಿತು. ನನ್ನನ್ನ ಭಗವಂತ ಎಂದೂ ಕ್ಷಮಿಸಲಾರ' ಅಂದು ಬಿಟ್ಟರು.

ತಕ್ಷಣವೇ ಹೊರಬಂದ ನಾನು, ಸುವರ್ಣ ನ್ಯೂಸ್​ನ ಅಂದಿನ ಮುಖ್ಯಸ್ಥರಾದ ಹೆಚ್​,ಆರ್​.ರಂಗನಾಥ್​ಗೆ ವಿಷಯ ಮುಟ್ಟಿಸಿದೆ. ಒಂದೇ ಸಮನೆ ನಮಗೆ ಫೋನ್​ಗಳ ಸುರಿಮಳೆ. ನಮಗೆ ಒಂದು ಕಾಪಿ ಬೇಕು ಅಂತ. ಪ್ರಶಾಂತ್​ನಾಥೂ ಅವರಂತೂ ಸಂದರ್ಶನದ ವಿಡಿಯೋಗೆ ಸುವರ್ಣ ನ್ಯೂಸ್​ನ ಲೋಗೋ ಹಾಕಿ ಎಲ್ಲ ರಾಷ್ಟ್ರೀಯ ವಾಹಿನಿಯ ಪ್ರತಿನಿಧಿಗಳಿಗೆ ಹಂಚುತ್ತಿದ್ದರು. ಬೆಳಗ್ಗೆ 9 ಗಂಟೆಗೆ ಯಾವುದೇ ಟಿವಿ ಹಾಕಿದ್ರೂ ಅಲ್ಲಿ ಯಡಿಯೂರಪ್ಪನವರ ಸಂದರ್ಶನ. ರಾಷ್ಟ್ರೀಯ ವಾಹಿನಿಗಳೂ ನಮ್ಮ ಸಂದರ್ಶನವನ್ನ ಬಿತ್ತರಿಸುತ್ತಿವೆ. ಬಿಬಿಸಿ, ಸಿಎನ್​ಎನ್​ನಲ್ಲೂ ಅದು ಪ್ರಸಾರವಾಯ್ತು. ಅದರಲ್ಲೂ ನಮ್ಮ ವಾಹಿನಿಯ ವಾಟರ್​ ಮಾರ್ಕ್​ ಸಮೇತ ಬಿತ್ತರವಾಗುತ್ತಿತ್ತು. ಅದೆಂಥ ಖುಷಿ ಕೊಡುವ ವಿಚಾರ, ಏನೋ ದೊಡ್ಡ ಸಾಧನೆ ಮಾಡಿದ ಹೆಮ್ಮೆ.. ದೆಹಲಿಯ ಉಳಿದ ಎಲ್ಲ ಪತ್ರಕರ್ತರು ಯಡಿಯೂರಪ್ಪ ತಂಗಿದ್ದ ಕರ್ನಾಟಕ ಭವನದ ಸುತ್ತ ಸೇರಿದರು. ಆದರೆ ಅಲ್ಲಿ ಯಡಿಯೂರಪ್ಪ ಇರಲಿಲ್ಲ. ಅವರು ವೈಷ್ಣೋದೇವಿಯ ಮಂದಿರಕ್ಕೆ ಹೆಲಿಕಾಪ್ಟರ್‌​ನಲ್ಲಿ ಹಾರಿಯಾಗಿತ್ತು. ಸಂದರ್ಶನದ ಪ್ರಭಾವ ಹೇಗಿತ್ತು ಅಂದರೆ ಇಡೀ ರಾಜ್ಯಾದ್ಯಂತ ಯಡಿಯೂರಪ್ಪ ಅವರ ಬಗ್ಗೆ ಒಂದು ವಿಶೇಷ ಅನುಕಂಪ ಮೂಡಿತ್ತು.

ಒಬ್ಬ ಮುಖ್ಯಮಂತ್ರಿ ಕ್ಯಾಮೆರಾ ಮುಂದೆ ಅಳೋದೇನು. ನನ್ನಂತಹ ಕಿರಿಯನ ಮುಂದೆ ಮನ ಬಿಚ್ಚಿ ಮಾತನಾಡಿದ ಬಿಎಸ್​ವೈಗೆ ಹಿಂದೊಂದು, ಮುಂದೊಂದು ಮಾತನಾಡುವ ಅಭ್ಯಾಸವಿಲ್ಲ ಎಂಬುದು ಅರಿವಾಯ್ತು. ಇಂದಿಗೂ ಅವರ ಜೊತೆ ಹೆಚ್ಚಿನ, ಹತ್ತಿರದ ಒಡನಾಟವೇನಿಲ್ಲ. ಆದರೂ ಅವರು ಹಳೆಯದನ್ನು ಮರೆತಿಲ್ಲ. ಸಿಕ್ಕಾಗ ವಿಶ್ವಾಸದ ನಗು, ಮಾತು ನಡೆಸುವುದುಂಟು. ಅಧಿಕಾರ ಇದ್ದಾಗ ಒಂದು ರೀತಿ, ಇಲ್ಲದಾಗ ಒಂದು ರೀತಿ ವರ್ತಿಸುವ ರಾಜಕಾರಣಿಯಲ್ಲ ಯಡಿಯೂರಪ್ಪ. ಪತ್ರಕರ್ತರನ್ನು ಕರ್ಚೀಫಿನ ರೀತಿ ಅನೇಕ ರಾಜಕಾರಣಿಗಳು ಬಳಸುವುದುಂಟು. ಅಧಿಕಾರ ಇಲ್ಲದಾಗ ಪತ್ರಕರ್ತರಿಂದ ಸುದ್ದಿಯಲ್ಲಿದ್ದು, ಅಧಿಕಾರ ಸಿಕ್ಕಾಗ ಸಣ್ಣ ಟೀಕೆಯನ್ನು ಸಹಿಸದೇ ಪತ್ರಕರ್ತರನ್ನು ನಿಂದಿಸುವ ಜಾಯಮಾನವೂ ಬಿಎಸ್​ವೈ ಅವರದಲ್ಲ. ಟೀಕೆಗೆ ಪ್ರತಿಕ್ರಿಯೆ ನೀಡುವುದಕ್ಕಿಂತ, ಕೆಲವು ಬಾರಿ ಟೀಕೆಯ ಅಂಶಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ತಿದ್ದಿಕೊಂಡುಬಿಟ್ಟಿರುತ್ತಾರೆ. ಒಳ್ಳೆಯದನ್ನು ಹೆಚ್ಚು ಮಾತನಾಡಿ ಟೀಕೆ ಮರೆತುಬಿಡುವ, ಮರೆಸಿಬಿಡುವ ಜಾಣ್ಮೆಯೂ ಯಡಿಯೂರಪ್ಪಗೆ ಸಿದ್ಧಸಿದೆ.

ಈ ಬಾರಿ ಹಳೇ ತಪ್ಪು ಮಾಡಲಿಲ್ಲ..!
ಈ ಬಾರಿ ಸಿಎಂ ಆದ ಕೆಲವೇ ದಿನಗಳಲ್ಲಿ ಮತ್ತದೇ ಪ್ರವಾಹ ಉತ್ತರ ಕರ್ನಾಟಕವನ್ನು ಕಾಡತೊಡಗಿತು. ಸಂಪುಟ ರಚನೆ ಆಗಿರಲಿಲ್ಲ. ಸಂಪುಟ ರಚನೆಗೆ ಗ್ರೀನ್​ ಸಿಗ್ನಲ್​ ಪಡೆಯಲು ದೆಹಲಿಗೆ ಹೋಗಿ ಬಿಎಸ್​ವೈ ಕುಳಿತು ಬಿಡ್ತಾರೆ ಮೊದಲಿನಂತೆ ಅಂದುಕೊಂಡಿದ್ದೆ. ಆದರೆ ಅವರು ಹಳೆಯ ತಪುà ಮಾಡಲಿಲ್ಲ. ಒನ್​ ಮ್ಯಾನ್​ ಆರ್ಮಿಯಂತೆ ಉತ್ತರ ಕರ್ನಾಟಕ ಸುತ್ತಿ ಸಂತ್ರಸ್ತರಿಗೆ ನೆರವಿನ ಕೈ ಚಾಚುತ್ತಿದ್ದರು. ಯುವಕರು ನಾಚುವಂತೆ ಓಡಾಡುವ ಅವರ ಉತ್ಸಾಹಕ್ಕೆ ಅವರ ವಯಸ್ಸು ಜಸ್ಟ್​ ನಂಬರ್​ ಅನ್ನಿಸಿಬಿಟ್ಟಿತು.

ರಾಜಕೀಯ ಬದ್ಧವೈರಿಗಳ ಸಮಾಗಮ: ಸಿದ್ದು ಮಾತಿಗೆ ಭಾವುಕರಾದ ಯಡಿಯೂರಪ್ಪ

ಯಡಿಯೂರಪ್ಪ ಇಷ್ಟವಾಗೋದು ಏಕೆ..?
ಯಡಿಯೂರಪ್ಪನವರ ಸಿಟ್ಟು ನೋಡಿದ್ದೇವೆ. ಪ್ರೀತಿಯನ್ನು ನೋಡಿದ್ದೇವೆ. ಅವರಲ್ಲಿ ಸಿಟ್ಟು ಶಾಶ್ವತ ಅಲ್ಲ, ಕೇವಲ ಕ್ಷಣಿಕ. ಅವರಲ್ಲಿ ಕೆಟ್ಟ ಗುಣಗಳಿಗಿಂತ ಒಳ್ಳ ಗುಣಗಳು ಹೆಚ್ಚಿವೆ.
* ಯಾವತ್ತಿಗೂ ಕೋಮು ಪ್ರಚೋದಿತ ಹೇಳಿಕೆ ನೀಡಿದವರಲ್ಲ. ಅಂತಹುದರಿಂದ ಲಾಭ ಮಾಡಿಕೊಂಡವರಲ್ಲ. ಬಿಎಸ್​ವೈ ಜಾತಿ ಜಾತಿಯನ್ನ ಎತ್ತಿಕಟ್ಟುವ ಪ್ರಯತ್ನ ಮಾಡಿದವರಲ್ಲ.
* ತಮ್ಮ ವಿರುದ್ಧ ವೈಯಕ್ತಿಕ ವಿಷಯ ಪ್ರಸ್ತಾಪಿಸಿ ಹೇಳಿಕೆ ನೀಡಿದರು ಎಂಬ ಕಾರಣಕ್ಕೆ ಅದೇ ರೀತಿಯ ಹೇಳಿಕೆ ನೀಡಿದವರಲ್ಲ. ಬಿಎಸ್​ವೈ ರಾಜಕಾರಣದ ಮೂಲಕವೇ ಉತ್ತರ ಕೊಟ್ಟವರು.
* ಎಂದಿಗೂ ಯಾರಿಗೂ ಕೀಳು ಭಾಷೆ ಬಳಸಿದವರಲ್ಲ.. ವೈಯಕ್ತಿಕ ಟೀಕೆ ಮಾಡಿದವರಲ್ಲ.
* ಅವರಿಗಿಷ್ಟವಿಲ್ಲದ ಸುದ್ದಿ ಬರೆದವರನ್ನು ಎಂದೂ ಜರಿದವರಲ್ಲ, ಯಾಕಣ್ಣ..ಯಾಕಪ್ಪಾ ಎನ್ನುತ್ತಲೇ ಆ ಸುದ್ದಿಗೆ ಸ್ಪಷ್ಟನೆ ಕೊಟ್ಟವರು. ಮನಬಿಚ್ಚಿ ಮಾತನಾಡಿ ನಮ್ಮ ಅಭಿಪ್ರಾಯ ಬದಲಿಸಲು ಯತ್ನಿಸಿದವರು.
* ತಪುà ಮಾಹಿತಿಯಿಂದ ಸುಳ್ಳು ಸುದ್ದಿಯಾದಾಗ ಸಿಟ್ಟಾದರೂ, ನಿಂದಿಸದೇ ಸರಿಯಾದ ಮಾಹಿತಿ ಒದಗಿಸಿದವರು.
* ಗಂಟೆ ಗಟ್ಟಲೆ ಮನೆ ಮುಂದೆ ಕಾಯುವ ಪತ್ರಕರ್ತರನ್ನು ಎಂದೂ ಕೆಟ್ಟದಾಗಿ ನಡೆಸಿಕೊಂಡವರಲ್ಲ. ಸುದ್ದಿ ಆ ಕಡೆ ಇರ್ಲಪ್ಪ, ಊಟ ಮಾಡಿ, ತಿಂಡಿ ತಿನ್ನಿ ಅಂತ ವೈಯಕ್ತಿಕವಾಗಿ ವಿಚಾರಿಸಿಕೊಳ್ತಾರೆ. ಅವರಿಗೆ ಅರಿವಿಲ್ಲದೆ ಅವರ ಸಿಬ್ಬಂದಿಗಳು ಕೆಟ್ಟದಾಗಿ ನಡೆದುಕೊಂಡಾಗ ಹಿಂದೆ ಮುಂದೆ ನೋಡದೆ ಕ್ಷಮೆ ಯಾಚಿಸಿದ್ದು ಉಂಟು.
* ಅತಿಯಾದ ಹೊಗಳಿಕೆಯನ್ನೂ ಒಪುàವವರಲ್ಲ. ಒಮ್ಮೆ ಇಂದ್ರಜಿತ್​ ಲಂಕೇಶ್​ ಅತಿಯಾಗಿ ಹೊಗಳಿದಾಗ ವೇದಿಕೆಯಲ್ಲೇ ನಿಮ್ಮ ತಂದೆ ಇದ್ದರೆ ಹೀಗೆ ಮಾತನಾಡುತ್ತಿರಲಿಲ್ಲ ಎಂದು ಹೊಗಳಿಕೆಯನ್ನು ತಿರಸ್ಕರಿಸಿದ್ದರು ಬಿಎಸ್​ವೈ.

ಕೊಟ್ಟ ಮಾತು ತಪ್ಪಲ್ಲ..ಮರೆಯೋದು ಇಲ್ಲ..!
ಕಾಂಗ್ರೆಸ್​ - ಜೆಡಿಎಸ್​ ಬಿಟ್ಟು ಬಂದ ಶಾಸಕರು ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ. ಯಡಿಯೂರಪ್ಪ ವಚನ ಭ್ರಷ್ಟ ಅಲ್ಲ ಅಂತ ಅವರವರ ಅನುಭವ ಹೇಳಿಕೊಳ್ತಾ ಇರ್ತಾರೆ. ನನಗೆ ಅದೇನು ವಿಶೇಷ ಅನಿಸೋದಿಲ್ಲ. ಕಾರಣ, ದಟ್​ ಈಸ್​ ಯಡಿಯೂರಪ್ಪ. ನನಗೂ ಅದರ ಅನುಭವವಿದೆ. ಸುವರ್ಣ ನ್ಯೂಸ್​ನ ಡಿಎಸ್​ಎನ್​ಜಿ ಡ್ರೈವರ್​ ಆಗಿ ವಿಶ್ವಾನಾಥ್​ ಎಂಬುವವರೊಬ್ಬರಿದ್ದರು. ಅವರಿಗೆ ಕಿಡ್ನಿ ವೈಫಲ್ಯವಾಗಿತ್ತು. ಕಿಡ್ನಿ ಕಸಿ ಮಾಡಿಸಲು ಐದು ಲಕ್ಷ ರೂಪಾಯಿಗಳ ಅಗತ್ಯವಿತ್ತು. ಅವರು ಶಿಕಾರಿಪುರದವರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ದುಡ್ಡು ಕೊಡಿಸೋಣ ಎಂದು ಅರ್ಜಿ ಜೊತೆ ಬಿಎಸ್​ವೈ ಅವರನ್ನು ನಿತ್ಯದ ಸುದ್ದಿ ಸಮಯದಲ್ಲೇ ಭೇಟಿಯಾಗಿ ಅರ್ಜಿ ಸಲ್ಲಿಸಲಾಯ್ತು. ತತಕ್ಷಣವೇ ಎರಡೂವರೆ ಲಕ್ಷ ರೂಪಾಯಿಗೆ ಸಹಿ ಹಾಕಿ, ವೈಯಕ್ತಿಕವಾಗಿಯೂ ಹಣ ನೀಡಿದರು. ಅಲ್ಲದೇ 15 ದಿನದಲ್ಲಿ ಹಣ ಬರದಿದ್ದರೆ ನನ್ನ ಗಮನಕ್ಕೆ ತನ್ನಿ ಎಂದರು. ಅಲ್ಲಿಗೆ ಮರೆತುಬಿಟ್ಟಿದ್ದೆವು. ಅವರೇ ಮತ್ತೆ 15 ದಿನಗಳ ನಂತರ ನಿಮ್ಮ ಹುಡುಗನಿಗೆ ಹಣ ಬಂತಾ ಅಂತ ಕೇಳಿ ನೆನಪಿಸಿದರು. ಆಗ ವಿಶ್ವನಾಥನಿಗೆ ಫೋನ್​ ಮಾಡಿದರೆ ಬಂದು ಐದಾರು ದಿನ ಆಯ್ತು ಸಾ ಅಂದಾಗ ಆತನ ಮೇಲೆ ಕೋಪ ಬಂದಿತ್ತು. ಹಣ ಕೊಡಿಸಿದ್ದಕ್ಕಿಂತ ಅದು ಸರಿಯಾಗಿ ತಲುಪಿತೇ ಎಂದು ವಿಚಾರಿಸಿಕೊಂಡ ರೀತಿ ಇಷ್ಟವಾಯ್ತು. ಸಾಮಾನ್ಯ ಜನರಿಗೆ ನೆರವು ನೀಡಿದ ಇಂತಹ ಹಲವು ಪ್ರಕರಣಗಳಿಗೆ ಅವರ ಮನೆ ಮುಂದೆ ಪತ್ರಕರ್ತರು ಸಾಕ್ಷಿಯಾಗಿದ್ದಾರೆ. ಇಂತಹ ನೆರವನ್ನ ಎಂದೂ ಅವರು ಸುದ್ದಿಯಾಗಿ ಹೇಳಿಕೊಂಡವರಲ್ಲ.

ರಾಜಾಹುಲಿ ಆದ ರೋಚಕ ಕಥೆ...!
ಸಿಎಂ ಕುರ್ಚಿಯಿಂದಿಳಿದ ಬಿಎಸ್​ವೈ ಸದಾನಂದಗೌಡರಿಗೆ ಪಟ್ಟಾಭಿಷೇಕ ಮಾಡಿದ್ದರು. ಸದಾನಂದಗೌಡರು ಬಹುಮತ ಸಾಬೀತು ಮಾಡುವ ದಿನವದು. ಸದಾನಂದಗೌಡರನ್ನ ಸಿಎಂ ಮಾಡಿದ್ದಷ್ಟೇ ಅಲ್ಲ, ಅವರಿಗೆ ಸದನದೊಳಗೆ ಬೆಂಬಲ ಕೊಡಿಸಲು ಬಿಎಸ್​ವೈ ಸಜ್ಜಾಗಿದ್ದರು. ಬಿಜೆಪಿಯ ಎಲ್ಲಾ ಶಾಸಕರು ಸದನದಲ್ಲಿ ಹಾಜರಿರುವಂತೆ ಕಾಯುತ್ತಿದ್ದರು ಯಡಿಯೂರಪ್ಪ. ಆಡಳಿತ ಪಕ್ಷದ ಸದಸ್ಯರು ಒಳಬರುವ, ಹೊರ ಹೋಗುವ ದ್ವಾರಕ್ಕೆ ಹತ್ತಿರವಿದ್ದ ಸೀಟಿನಲ್ಲಿ ಕುಳಿತು ಶಾಸಕರನ್ನು ಕಾಯುತ್ತಿದ್ದರು ಯಡಿಯೂರಪ್ಪ. ಬಿಎಸ್​ವೈ ಕಣ್ತಪ್ಪಿಸಿ ಶಾಸಕರು ಹೊರಹೋಗಲು ಸಾಧ್ಯವೇ ಆಗಿರಲಿಲ್ಲ. ಸುರಪುರÀ ಶಾಸಕ ರಾಜುಗೌಡ, ಹೇಗೋ ಬಿಎಸ್​ವೈ ಅವರನ್ನ ಒಪ್ಪಿಸಿ ಮೊಗಸಾಲೆಗೆ ಬಂದರು. ಆ ಪತ್ರಕರ್ತರೆಲ್ಲಾ ಸುತ್ತುವರೆದು ಯಾಕೆ ಯಾರು ಹೊರಗಡೆ ಬರ್ತಿಲ್ಲ ಎಂದಾಗ ಶಾಸಕ ರಾಜುಗೌಡ ಹೇಳಿದ್ದು, `ಅಲ್ಲಿ ಬಾಗಿಲಲ್ಲಿ ರಾಜಾಹುಲಿ ಕಾಯ್ತಾ ಕುಳಿತಿದೆ' ಎಂದಾಗ ಎಲ್ಲರೂ ಜೋರಾಗಿ ನಕ್ಕೆವು.

ಇದಾಗಿ ಏಳು ವರ್ಷಗಳ ನಂತರ ಸುವರ್ಣ ನ್ಯೂಸ್​ನಲ್ಲಿ ಯಡಿಯೂರಪ್ಪನವರನ್ನ ಸಂದರ್ಶನಕ್ಕೆ ಹೆಸರಿಡುವಾಗ ನೆನಪಾದದ್ದು ರಾಜುಗೌಡರ ಮಾತು. ಅಖಾಡದಲ್ಲಿ ರಾಜಾಹುಲಿ ಎಂದು ನಾನು ಕೊಟ್ಟ ಹೆಸರನ್ನ ಕನ್ನಡಪ್ರಭ - ಸುವರ್ಣ ನ್ಯೂಸ್​ನ ಪ್ರಧಾನ ಸಂಪಾದಕರು ಖುಷಿ ಖುಷಿಯಲ್ಲಿ ಒಪ್ಪಿದರು. ಯಡಿಯೂರಪ್ಪನವರಿಗೆ ಸರಿಯಾಗಿ ಒಪುàತ್ತೆ, ಬ್ರಾಂಡ್​ ಆಗುತ್ತೆ ಎಂಬ ರವಿಹೆಗಡೆಯವರ ಮಾತು ಸುಳ್ಳಾಗಿಲ್ಲ. ಈಗ ರಾಜಾಹುಲಿ ಅಂದ್ರೆ ಚಿಕ್ಕ ಹುಡುಗರೂ ಯಡಿಯೂರಪ್ಪ ಎನ್ನುತ್ತಾರೆ. ಇದು ನನಗೆ ಖುಷಿಯ ವಿಚಾರ.

ಸಾಲಮನ್ನಾ: ಹಾಲಿ-ಮಾಜಿ ನಡುವೆ ಜಟಾಪಟಿ

ರಾತ್ರಿ ಎರಡು ಗಂಟೆಗೆ ಮಲಗಿದರೂ, ಬೆಳಗ್ಗೆ 6 ಗಂಟೆಗೆಲ್ಲಾ ಕೆಲಸಕ್ಕೆ ರೆಡಿಯಾಗುವ ಯಡಿಯೂರಪ್ಪ ಎಂದೂ ದಣಿದವರಂತೆ ಕಂಡವರಲ್ಲ. ದಣಿವರಿಯದೇ ದುಡಿಯುವ, ಜನರ ಕಷ್ಟಗಳಿಗೆ ಸ್ಪಂದಿಸುವ ಅವರಿಗೆ ಭಗವಂತ ಇನ್ನಷ್ಟು ಶಕ್ತಿ, ಆರೋಗ್ಯ, ಚೈತನ್ಯ ಕರುಣಿಸಲಿ. ರಾಜಾಹುಲಿ ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭಾಶಯಗಳು.