Asianet Suvarna News Asianet Suvarna News

ಶಿವಮೊಗ್ಗ ಸುಬ್ಬಣ್ಣ ಸ್ಮಾರಕಕ್ಕೆ ಅಗತ್ಯ ನೆರವು: ಸಿಎಂ ಬೊಮ್ಮಾಯಿ

ಹಿರಿಯ ಕಲಾವಿದ ಶಿವಮೊಗ್ಗ ಸುಬ್ಬಣ್ಣ ಅವರು ಸಂಗೀತದ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಸಂಗೀತ ಪರಂಪರೆಯನ್ನು ಮುಂದುವರೆಸಲು ಅವರ ಸ್ಮಾರಕಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

cm basavaraj bommai speaks about shivamogga subbanna memorial gvd
Author
Bangalore, First Published Aug 13, 2022, 3:30 AM IST

ಬೆಂಗಳೂರು (ಆ.13): ಹಿರಿಯ ಕಲಾವಿದ ಶಿವಮೊಗ್ಗ ಸುಬ್ಬಣ್ಣ ಅವರು ಸಂಗೀತದ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಸಂಗೀತ ಪರಂಪರೆಯನ್ನು ಮುಂದುವರೆಸಲು ಅವರ ಸ್ಮಾರಕಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶುಕ್ರವಾರ ಅವರು, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಸುಬ್ಬಣ್ಣ ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಹಾಗೂ ಹಿರಿಯ ಕಲಾವಿದರು. 

ಅವರ ನಿಧನ ದುಃಖ ತಂದಿದೆ. ಅವರ ಸಾಧನೆ ಬಹಳ ದೊಡ್ಡದು. ವಿಶೇಷವಾಗಿ ಕನ್ನಡದ ಎಲ್ಲಾ ಕವಿಗಳ ಹಾಡುಗಳನ್ನು ಹಾಡಿ, ಅವು ಪ್ರಸಿದ್ಧವಾಗಲು ಕಾರಣೀಭೂತರಾಗಿದ್ದಾರೆ. ಆ ಹಾಡುಗಳಿಗೆ ಜೀವಕಳೆಯನ್ನು ತುಂಬಿದ್ದಾರೆ. ಅವರು ಸದಾ ಲವಲವಿಕೆಯಿಂದ ಇದ್ದವರು. ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ನನ್ನೊಂದಿಗೆ ವಿಶೇಷ ಪ್ರೀತಿಯ ಸಂಬಂಧ ಹೊಂದಿದ್ದರು ಎಂದು ಸ್ಮರಿಸಿದರು. ಅವರ ಅಗಲಿಕೆ ಕರ್ನಾಟಕದ ಕಲಾಲೋಕಕ್ಕೆ ತುಂಬಲಾರದ ನಷ್ಟ. ಅವರ ಅನಿರೀಕ್ಷಿತ ಸಾವಿನಿಂದ ಆಘಾತವಾಗಿದೆ. ಸುಬ್ಬಣ್ಣ ಅವರು ಸಂಗೀತದ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. 

ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಕನ್ನಡದಲ್ಲಿ ಟ್ವೀಟ್!

ಎಂಥ ಕಷ್ಟಕರವಾದ ಸಂಗೀತವನ್ನೂ ಸರಳ, ಸುಲಭವಾಗಿ ಹಾಡುವ ಕಲೆ ಕರ್ನಾಟಕದ ಎಲ್ಲಾ ಕಲಾವಿದರಿಗೆ ತೋರಿಸಿ ಕೊಟ್ಟಿದ್ದಾರೆ. ನವ ಕಲಾವಿದರಿಗೆ ಬಿಟ್ಟುಕೊಟ್ಟು ಹೋಗಿರುವ ಪರಂಪರೆ ಮುಂದುವರೆಯಬೇಕು ಎನ್ನುವುದು ನಮ್ಮ ಆಸೆ. ಅದಕ್ಕೆ ಬೇಕಾದ ಎಲ್ಲ ನೆರವು ನೀಡಲು ಸಿದ್ಧರಿದ್ದೇವೆ. ಶಿವಮೊಗ್ಗ ಸುಬ್ಬಣ್ಣ ಅವರ ಹಾಡುಗಾರಿಕೆ, ಸಂಗೀತದಲ್ಲಿ ನಿರಂತರವಾಗಿ ಜೀವಿಸುತ್ತಾರೆ. ಅದು ನಮ್ಮ ಕರ್ನಾಟಕದ ನವ ಪೀಳಿಗೆಗೆ ದೊಡ್ಡ ಪ್ರೇರಣಾ ಶಕ್ತಿಯಾಗಿ ಅವರು ಉಳಿಯಲಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಸುಬ್ಬಣ್ಣ ಎಂದು ಹೆಸರು ಕೊಟ್ಟವರು ಕಂಬಾರ: ಶಿವಮೊಗ್ಗ ಸುಬ್ಬಣ್ಣನವರು 1938ರ ಡಿ.14ರಂದು ಜನಿಸಿದರು. ಇವರ ತಂದೆ ಗಣೇಶರಾಯರು, ತಾಯಿ ರಂಗಾನಾಯಕಿ. ಇವರ ಮೂಲ ಹೆಸರು ಜಿ.ಸುಬ್ರಮಣ್ಯ. ಕಂಬಾರರು ‘ಕಾಡು ಕುದುರೆ’ ಚಿತ್ರದಲ್ಲಿ ‘ಕಾಡು ಕುದುರೆ ಓಡಿ ಬಂದಿತ್ತಾ’ ಹಾಡನ್ನು ಹಾಡಿಸುವಾಗ ಹೆಸರನ್ನು ‘ಶಿವಮೊಗ್ಗ ಸುಬ್ಬಣ್ಣ’ ಎಂದು ಬದಲಿಸಿದರು. ಈ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ಎಂಬ ಖ್ಯಾತಿ ಇವರದ್ದು. ಸುಬ್ಬಣ್ಣನವರ ತಾತ ಶಾಮಣ್ಣನವರು ಸಂಗೀತ ವಿದ್ವಾಂಸರಾಗಿದ್ದು ಮನೆಯಲ್ಲಿ ಸಂಸ್ಕೃತ ವೇದಘೋಷಗಳು ಮೊಳಗುತ್ತಿದ್ದ ವಾತಾವರಣವಿತ್ತು. 

ಚಿಕ್ಕಂದಿನಲ್ಲಿ ಒಂದಷ್ಟು ಸಂಗೀತ ಕಲಿಯುತ್ತಿದ್ದರೂ ಮುಂದೆ ಓದಿನಲ್ಲಿ ಗಮನ ಹರಿಸಿದ ಸುಬ್ಬಣ್ಣರು ಸಂಗೀತದ ಬಗ್ಗೆ ಗಂಭೀರವಾಗಿ ಗಮನ ಹರಿಸಲಿಲ್ಲ. ಕಾಲೇಜಿನ ದಿನಗಳಲ್ಲಿ ರಫಿ, ಕಿಶೋರ್‌, ಮನ್ನಾಡೆ ಹಾಡುಗಳನ್ನು ಸೊಗಸಾಗಿ ಹಾಡುತ್ತಾ ಬಹುಮಾನ ಗೆಲ್ಲುತ್ತಿದ್ದರು. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಬಿಡುಗಡೆಯಾದ ಮೊಟ್ಟಮೊದಲ ಧ್ವನಿ ಸುರುಳಿ ನಿತ್ಯೋತ್ಸವದಲ್ಲಿ ಕೂಡ ಸುಬ್ಬಣ್ಣ ಹಾಡಿದರು. ಕುವೆಂಪು ಗೀತೆಗಳು ಗೀತಗಂಗಾ, ದೀಪಿಕಾ, ಕವಿಶೈಲ, ಬಾರೋ ವಸಂತ, ಅಗ್ನಿಹಂಸ, ನಾಮಸ್ಮರಣ, ಉಪಾಸನಾ, ದೇವ ನಿನ್ನ ಬೇಡುವೆ ಮೊದಲಾದ ನೂರಾರು ಧ್ವನಿಸುರುಳಿಗಳಿಗೆ ಸುಬ್ಬಣ್ಣ ಧ್ವನಿಯಾದರು. 

ಜೊತೆಗೆ ತಮ್ಮ ವಕೀಲಿ ವೃತ್ತಿಯನ್ನು ಕೂಡ ಮುಂದುವರೆಸಿಕೊಂಡು ಬಂದರು. ಶಿವಮೊಗ್ಗದಲ್ಲಿ ಹಾಗೂ ನಂತರ ಬೆಂಗಳೂರಿನ ಹೈಕೋರ್ಚ್‌ಗಳಲ್ಲಿ ತಮ್ಮ ವಕೀಲರಾಗಿ ಕಾರ್ಯ ನಿರ್ವಹಿಸಿದರು. ಭಾವಗೀತೆಗಳಲ್ಲದೆ ಬಹಳಷ್ಟುಜನಪದ ಗೀತೆ, ಭಕ್ತಿಗೀತೆಗಳ ಕ್ಯಾಸೆಟ್‌ಗಳಲ್ಲೂ ಸುಬ್ಬಣ್ಣ ತಮ್ಮ ಸುಮಧುರ ನಾದವನ್ನು ಪಸರಿಸಿದ್ದಾರೆ. ದೇಶ-ವಿದೇಶಗಳಲ್ಲಿರುವ ಕನ್ನಡಿಗರಿಗೆ ಸಾಂಸ್ಕೃತಿಕ ಉತ್ಸವಗಳಲ್ಲಿ ಮತ್ತು ಹಲವಾರು ವೇದಿಕೆಗಳಲ್ಲಿ ಕೂಡ ಅವರ ಗಾನಗಂಗೆ ನಿರಂತರವಾಗಿ ಹರಿದಿದೆ.

Shivamogga Subbanna Passed Away: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

1979ರಲ್ಲಿ ಕಾಡುಕುದುರೆ ಚಿತ್ರದ ಗಾಯನಕ್ಕೆ ಸಂದ ರಜತ ಕಮಲ ರಾಷ್ಟ್ರ ಪ್ರಶಸ್ತಿಯಲ್ಲದೆ, ಕನ್ನಡ ಕಂಪು ಪ್ರಶಸ್ತಿ, ಸುಂದರಶ್ರೀ ಪ್ರಶಸ್ತಿ, ಶಿಶುನಾಳ ಷರೀಫ ಪ್ರಶಸ್ತಿ, ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಗೌರವ, ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್‌ ಗೌರವ ಮುಂತಾದ ಅನೇಕ ಪ್ರತಿಷ್ಠಿತ ಗೌರವಗಳು ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂದಿವೆ. ಆಕಾಶವಾಣಿಯವರು ನಡೆಸುವ ವಾರ್ಷಿಕ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Follow Us:
Download App:
  • android
  • ios