Grama Vastavya: ಅಶೋಕ್ ವಾಸ್ತವ್ಯದ ಹಳ್ಳಿಗಳಿಗೆ 1 ಕೋಟಿ: ಸಿಎಂ ಬೊಮ್ಮಾಯಿ ಘೋಷಣೆ
ಪ್ರತಿ ತಿಂಗಳು ರಾಜ್ಯ ಸರ್ಕಾರದಿಂದ ಆಯೋಜಿಸಲಾಗುತ್ತಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ ಅವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ.
ಬಾಡ (ಡಿ.18): ಪ್ರತಿ ತಿಂಗಳು ರಾಜ್ಯ ಸರ್ಕಾರದಿಂದ ಆಯೋಜಿಸಲಾಗುತ್ತಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್.ಅಶೋಕ ಅವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಅವರು ಗ್ರಾಮ ವಾಸ್ತವ್ಯ ಮಾಡುವ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದಿಂದ ತಲಾ 1 ಕೋಟಿ ರು. ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಸಚಿವರು ಪ್ರತಿ ತಿಂಗಳು ನಡೆಸುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಎಲ್ಲೆಡೆ ಯಶಸ್ವಿಯಾಗಿದೆ.
ಇದಕ್ಕೆ ಜನಸ್ಪಂದನೆ ಸಹ ಅಭೂತಪೂರ್ವವಾಗಿದೆ. ಈ ಕಾರ್ಯಕ್ರಮಕ್ಕೆ ಸಚಿವರು ಹೋದ ಕಡೆಯಲ್ಲೆಲ್ಲಾ ಆಯಾ ಗ್ರಾಮಗಳಿಂದ ಸಾಕಷ್ಟುಸಹಕಾರ ದೊರೆತಿದೆ ಎಂದು ಶ್ಲಾಘಿಸಿದರು. ಶನಿವಾರ ಕಂದಾಯ ಸಚಿವರು ನಡೆಸುತ್ತಿರುವ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ ಸೇರಿದಂತೆ ಈಗಾಗಲೇ ನಡೆದಿರುವ ಎಲ್ಲ ಗ್ರಾಮ ವಾಸ್ತವ್ಯದ ಗ್ರಾಮಗಳ ಅಭಿವೃದ್ಧಿಗಾಗಿ ತಲಾ 1 ಕೋಟಿ ರು.ನೀಡಲಾಗುವುದು ಎಂದು ಬೊಮ್ಮಾಯಿ ಘೋಷಿಸಿದರು.
ಬಿಜೆಪಿಗೆ ಬಿಎಸ್‌ವೈ ನಾಯಕತ್ವದ ಶ್ರೀರಕ್ಷೆಯಿದೆ: ಸಿಎಂ ಬೊಮ್ಮಾಯಿ
ಬಡವರು, ರೈತರ ಕಲ್ಯಾಣಕ್ಕೆ ಪಣ: ಸರ್ಕಾರದ ಕಲ್ಯಾಣ ಯೋಜನೆಗಳು ರಾಜ್ಯದ ಬಡ ಜನರು, ರೈತರಿಗೆ ತಲುಪಿದಾಗ ಮಾತ್ರ ರಾಜ್ಯ ಸುಭಿಕ್ಷೆ ಆಗಲಿದೆ. ಈ ಕಾರ್ಯವನ್ನು ನಾನು ಮಾಡಿಯೇ ತೀರುತ್ತೇನೆ ಎಂಬ ಪಣ ತೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಾಡ ಗ್ರಾಮವು ಕನಕದಾಸರ ಜನ್ಮಭೂಮಿ. ಇದು ಪರಿವರ್ತನೆಯ ಭೂಮಿ. ಕನಕದಾಸರ ಮಹಿಮೆ ಇಲ್ಲಿಂದಲೇ ಶುರುವಾಗಿದೆ. ಈ ಕ್ಷೇತ್ರದ ಮೂಲಕವೇ ಅಭಿವೃದ್ಧಿ ಕಾರ್ಯ ಆರಂಭವಾಗಿದ್ದು, ರಾಜ್ಯದಲ್ಲಿ ಪರಿವರ್ತನೆಯೂ ಆಗಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡುವುದರಿಂದ ಆಯಾ ಕ್ಷೇತ್ರ ಮತ್ತಷ್ಟು ಪ್ರಗತಿಯಾಗಲಿದೆ ಎಂದರು.
ಸ್ವಕ್ಷೇತ್ರಕ್ಕೆ ಸಿಎಂ ಭರ್ಜರಿ ಕೊಡುಗೆ: ಇದೇ ವೇಳೆ, ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನರಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ಭರ್ಜರಿ ಕೊಡುಗೆಗಳನ್ನು ವೇದಿಕೆಯಲ್ಲಿ ಘೋಷಿಸಿದರು. ಕ್ಷೇತ್ರದ ಶಾಲಾ ಮಕ್ಕಳಿಗೆ ಬಸ್ ಸಮಸ್ಯೆಯಿದೆ. ಆದ್ದರಿಂದ ವಿನೂತನ ಪ್ರಯೋಗವಾಗಿ ಶಾಲೆಯ ಮಕ್ಕಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಶಾಲಾ ಬಸ್ ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಈ ಕ್ಷೇತ್ರದಿಂದಲೇ ಆರಂಭಿಸಲಾಗುತ್ತಿದೆ. ಈ ಯೋಜನೆಯ ಅಂಗವಾಗಿ ಶಾಲೆಯ ಆರಂಭ ಹಾಗೂ ಮುಕ್ತಾಯದ ಅವಧಿಯಲ್ಲಿ ನಿಗದಿತ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲಾಗುವುದು. ಇದರಿಂದಾಗಿ ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ತಲುಪಲು ಅನುಕೂಲವಾಗಲಿದೆ. ನಂತರದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
Karnataka Politics: ಒಗ್ಗಟ್ಟು ತೋರಿ ಮುನಿಸು ಮುಚ್ಚಿದ ಬಿಜೆಪಿ ದಿಗ್ಗಜರು
ಶಿಗ್ಗಾವಿ ಹಾಗೂ ಸವಣೂರಿನಲ್ಲಿ ಎಸ್ಸಿ, ಎಸ್ಟಿ ಹಾಸ್ಟೆಲ್‌ಗಳ ಕಾಮಗಾರಿ ನಡೆಯುತ್ತಿದ್ದು, ಇದನ್ನು ಶೀಘ್ರ ಪೂರ್ತಿಗೊಳಿಸುವಂತೆ ಆದೇಶ ನೀಡಿದ್ದೇನೆ. ಈ ಭಾಗದ ರಸ್ತೆ, ಮೂಲಸೌಲಭ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಇಷ್ಟಾಗಿಯೂ ಮಳೆ ಬಂದ ಹಿನ್ನೆಲೆಯಲ್ಲಿ ರಸ್ತೆಗಳು ಹದಗೆಟ್ಟಿದ್ದವು. ಈಗ ಮಳೆ ನಿಂತಿದೆ. ಹೀಗಾಗಿ, ರಸ್ತೆ ದುರಸ್ತಿಗೆ ಆದೇಶಿಸಿದ್ದೇನೆ. ಪ್ರತಿ ಹಳ್ಳಿಗಳಲ್ಲಿ ಹೊಲಕ್ಕೆ ಹೋಗುವ ರಸ್ತೆಗಳನ್ನು ಮುಂದಿನ ಮೇ ಒಳಗೆ ಅಭಿವೃದ್ಧಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಜೊತೆಗೆ ಮಂಜೂರಾಗಿರುವ ಶಾಲೆಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಆಯುರ್ವೇದ ಕಾಲೇಜು, ಬಸ್ ಡಿಪೋ, ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ ಮಾಡಿ ಮಹಿಳೆಯರಿಗೆ ಕೆಲಸ ಕೊಡುವ ಕೆಲಸ ಮಾಡಲಾಗುವುದು ಎಂದರು.