ಬಿಜೆಪಿಗೆ ಬಿಎಸ್‌ವೈ ನಾಯಕತ್ವದ ಶ್ರೀರಕ್ಷೆಯಿದೆ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಶ್ರೀರಕ್ಷೆ ಇದೆ. ರಾಜ್ಯದಲ್ಲಿ ಪಕ್ಷ ಈ ಮಟ್ಟದಲ್ಲಿ ಬೆಳೆಯಲು ಯಡಿಯೂರಪ್ಪ ಅವರೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಕೊಪ್ಪಳ (ಡಿ.16): ರಾಜ್ಯದಲ್ಲಿ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಶ್ರೀರಕ್ಷೆ ಇದೆ. ರಾಜ್ಯದಲ್ಲಿ ಪಕ್ಷ ಈ ಮಟ್ಟದಲ್ಲಿ ಬೆಳೆಯಲು ಯಡಿಯೂರಪ್ಪ ಅವರೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಬಿಜೆಪಿಯ ಹತ್ತು ಜಿಲ್ಲೆಗಳ ಕಾರ್ಯಾಲಯಗಳ ಉದ್ಘಾಟನೆ(ವಚ್ರ್ಯುವಲ್) ಹಾಗೂ ಮೂರು ಜಿಲ್ಲೆಗಳ ಕಾರ್ಯಾಲಯಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗುಣಗಾನ ಮಾಡಿದರು.
ಯಡಿಯೂರಪ್ಪ ಅವರ ಪರಿಶ್ರಮವನ್ನು ಪಕ್ಷ ಯಾವತ್ತೂ ಮರೆಯುವುದಿಲ್ಲ. ರಾಜ್ಯದಲ್ಲಿ ಹಳ್ಳಿ, ಹಳ್ಳಿಗಳಿಗೆ ತೆರಳಿ ಅವರು ಪಕ್ಷ ಕಟ್ಟಿದ್ದಾರೆ. ಅವರ ಆಶೀರ್ವಾದದಿಂದ ಇಂದು ಬಿಜೆಪಿ ರಾಜ್ಯದಲ್ಲಿ ಈ ಮಟ್ಟಕ್ಕೆ ಬೃಹತ್ತಾಗಿ ಬೆಳೆದಿದೆ ಎಂದರು. 2023ರ ಚುನಾವಣೆಯಲ್ಲಿ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ನಾಯಕತ್ವದಲ್ಲಿ ಹೊಸ ಯುಗ ಆರಂಭವಾಗಲಿದೆ. ಗುಜರಾತ್‌ನಂತೆ ರಾಜ್ಯದಲ್ಲೂ ಕಾಂಗ್ರೆಸ್ ಧೂಳೀಪಟವಾಗಲಿದೆ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
Karnataka Politics: ಒಗ್ಗಟ್ಟು ತೋರಿ ಮುನಿಸು ಮುಚ್ಚಿದ ಬಿಜೆಪಿ ದಿಗ್ಗಜರು
ಕರ್ನಾಟಕದಲ್ಲಿ ಯಡಿಯೂರಪ್ಪನವರು ಉತ್ತಮ ಆಡಳಿತ ಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಾವು ಜನಪರ ಆಡಳಿತ ನೀಡುತ್ತಿದ್ದೇವೆ. ಜನರು ಬಿಜೆಪಿಯನ್ನು ಯಾವತ್ತೂ ನಕಾರಾತ್ಮಕ ದೃಷ್ಟಿಕೋನದಿಂದ ನೋಡಿಲ್ಲ. ಪ್ರಧಾನಿ ಮೋದಿ ಅವರು ಬಿಜೆಪಿ ಮೇಲಿನ ದೃಷ್ಟಿಕೋನ ಬದಲಾಯಿಸಿದ್ದಾರೆ. ಗುಜರಾತ್‌ನಲ್ಲಿ ಏಳನೇ ಬಾರಿ ಜಯಭೇರಿ ಬಾರಿಸಿದ್ದೇವೆ. ರಾಜ್ಯದಲ್ಲೂ 2023ಕ್ಕೆ ಮತ್ತೆ ಕಮಲ ಅರಳಲಿದೆ ಎಂದರು.
ಒಳಮೀಸಲಿಗೆ ಉಪ ಸಮಿತಿ: ಕಾಂಗ್ರೆಸ್ ಅವಧಿಯಲ್ಲಿ ರಾಜ್ಯದಲ್ಲಿ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಮಾಡಿಲ್ಲ, ನಾವು ಮಾಡಿದ್ದೇವೆ. ಸದಾಶಿವ ಆಯೋಗದ ವರದಿ ಹಿನ್ನೆಲೆಯಲ್ಲಿ ಒಳಮೀಸಲಾತಿಗಾಗಿ ಕ್ಯಾಬಿನೆಟ್ ಉಪಸಮಿತಿ ರಚಿಸಿದ್ದೇವೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಣ್ಣೊರೆಸುವ ತಂತ್ರ ಎಂದು ಹೇಳಿದ್ದಾರೆ. ಐದು ವರ್ಷಗಳವರೆಗೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೂ ಒಮ್ಮೆಯೂ ಈ ಬಗ್ಗೆ ಮಾತನಾಡಲಿಲ್ಲ. ಅಧಿಕಾರದಲ್ಲಿದ್ದಾಗ ಐದು ವರ್ಷ ಸುಮ್ಮನಿದ್ದವರು ಈಗ ಮತ್ತೆ ಅಧಿಕಾರಕ್ಕೆ ಬಂದರೆ, ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಬರೀ ಸುಳ್ಳು ಹೇಳುವುದೇ ಸಿದ್ದರಾಮಯ್ಯನವರ ಕೆಲಸ ಎಂದು ಕಿಡಿಕಾರಿದರು.
ನಮ್ಮ ಕ್ಲಿನಿಕ್‌ಗೆ ಸಿಎಂ ಬೊಮ್ಮಾಯಿ ಚಾಲನೆ: ಏಕಕಾಲಕ್ಕೆ 114 ಕ್ಲಿನಿಕ್ ಆರಂಭ
ಅಂಜನಾದ್ರಿ ಸಮಗ್ರ ಅಭಿವೃದ್ಧಿ: ಹನುಮನ ಜನ್ಮಸ್ಥಳ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ .140 ಕೋಟಿ ಅನುದಾನ ಒದಗಿಸಿದೆ. ಅಂಜನಾದ್ರಿ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು, ರೋಪ್‌ವೇ ನಿರ್ಮಾಣ, ಯಾತ್ರಿ ನಿವಾಸ ನಿರ್ಮಿಸಲಾಗುವುದು. ಜತೆಗೆ, ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿ ಬೆಟ್ಟದವರೆಗೆ ಕೇಬಲ್ ಕಾರು ಸೇವೆ ಒದಗಿಸಲಾಗುವುದು. ಉತ್ತರ ಭಾರತದಿಂದ ಹಾಗೂ ಇಡೀ ರಾಜ್ಯದಿಂದ ಬರುವ ಯಾತ್ರಿಕರಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮಾಹಿತಿ ನೀಡಿದರು.