Omicron Threat: ಕಠಿಣ ಕ್ರಮ ಅನಿವಾರ್ಯ, ನೈಟ್ ಕರ್ಫ್ಯೂ ಮರುಪರಿಶೀಲಿಸಲ್ಲ: ಬೊಮ್ಮಾಯಿ
* ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳುವಾಗ ಇದು ಬೇಕಿತ್ತಾ?
* ಹೋಟೆಲ್, ಆಟೋ ಚಾಲಕರ ತೀವ್ರ ಆಕ್ರೋಶ
* ರಾತ್ರಿ ಕರ್ಫ್ಯೂ, ಆಸನ ಮಿತಿಗೆ ಅಸಮಾಧಾನ
ಮೈಸೂರು(ಡಿ.27): ನೆರೆಯ ರಾಜ್ಯಗಳಲ್ಲಿ ಒಮಿಕ್ರೋನ್(Omicron) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಠಿಣ ನಿರ್ಬಂಧಗಳನ್ನು ಹೇರುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ(Night Curfew) ಸೇರಿ ರಾಜ್ಯಾದ್ಯಂತ ಜಾರಿಗೊಳಿಸಲುದ್ದೇಶಿಸಿರುವ ಕಠಿಣ ನಿರ್ಬಂಧ ಕುರಿತು ಪುನರ್ ಪರಿಶೀಲನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.
ಒಮಿಕ್ರೋನ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ(New Year Celebration) ಸಂದರ್ಭದಲ್ಲೇ ರಾಜ್ಯಾದ್ಯಂತ(Karnataka) ಜಾರಿಗೊಳಿಸಲುದ್ದೇಶಿಸಿರುವ ಕಠಿಣ ನಿರ್ಬಂಧಗಳಿಗೆ ತೀವ್ರ ಆಕ್ಷೇಪ ಕೇಳಿ ಬಂದ ಸಂಬಂಧ ಭಾನುವಾರ ಮೈಸೂರಲ್ಲಿ(Mysuru) ಪ್ರತಿಕ್ರಿಯಿಸಿದ ಅವರು, ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿಯಮಾವಳಿಗಳು ಅನಿವಾರ್ಯ ಎಂದು ಸ್ಪಷ್ಟನೆ ನೀಡಿದರು.
Covid Vaccination : ರಾಜ್ಯದ ಎಲ್ಲ 1.1 ಕೋಟಿ ಮಧ್ಯ ವಯಸ್ಕರಿಗೆ ಲಸಿಕೆ
ಒಮಿಕ್ರೋನ್ ಹೆಚ್ಚಳ ಹಿನ್ನೆಲೆಯಲ್ಲಿ ಈಗಾಗಲೇ ಬೆಳಗಾವಿಯಲ್ಲಿ(Belagavi) ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಒಮಿಕ್ರೋನ್‌ನ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿಲ್ಲ. ಆದರೆ, ಅಕ್ಕಪಕ್ಕದ ರಾಜ್ಯ ಮತ್ತು ಬೇರೆ ದೇಶದಲ್ಲಿ ಒಮಿಕ್ರೋನ್ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ಮುಂಜಾಗ್ರತ ಕ್ರಮವಾಗಿ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಲು ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದರು.
ಕಠಿಣ ನಿಯಮಗಳಿಂದ ವ್ಯಾಪಾರಿಗಳು, ಉದ್ಯಮಿಗಳಿಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಬಂಧಗಳ ಕುರಿತು ಪುನರ್ ಪರಿಶೀಲನೆ ಮಾಡುವುದಿಲ್ಲ. ಹೊಸ ವರ್ಷಾಚರಣೆ ವೇಳೆ ಹೊರಂಗಣದಲ್ಲಿ ಪಾರ್ಟಿ ಮಾಡುವುದು, ಡಿಜೆ ಹಾಕಿಕೊಳ್ಳುವುದಕ್ಕೂ ಅವಕಾಶವಿಲ್ಲ. ಈ ಹಿಂದೆ ಕೊರೋನಾದ ಮೊದಲ ಮತ್ತು 2ನೇ ಅಲೆಯ ವೇಳೆ ಯೂರೋಪ್ ದೇಶಗಳಲ್ಲಿ ಸೋಂಕು ಕಾಣಿಸಿಕೊಂಡ ಒಂದೂವರೆ, ಎರಡು ತಿಂಗಳ ಬಳಿಕ ಭಾರತದಲ್ಲಿ ಹೆಚ್ಚಾಗಿತ್ತು. ಅದರ ಆಧಾರದ ಮೇಲೆ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾತ್ರಿ ಕರ್ಫ್ಯೂ, ಆಸನ ಮಿತಿಗೆ ಅಸಮಾಧಾನ
ಒಮಿಕ್ರೋನ್ ಸೋಂಕು ಹರಡುವಿಕೆ ತಡೆಯುವ ಹಿನ್ನೆಲೆ ರಾಜ್ಯ ಸರ್ಕಾರ(Government of Karnataka) ಹೊಡಿಸಿರುವ ರಾತ್ರಿ ಕರ್ಫ್ಯೂ ಮತ್ತು ಹೋಟೆಲ್, ರೆಸ್ಟೋರೆಂಟ್ ಹಾಗೂ ಬಾರ್‌ಗಳಲ್ಲಿ ಶೇ.50ರಷ್ಟು ಆಸನ ಮಿತಿ ನಿಯಮಕ್ಕೆ ಹೋಟೆಲ್ ಮಾಲೀಕರರು, ಆಟೋ ಟ್ಯಾಕ್ಸಿ ಚಾಲಕರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಈ ಕುರಿತು ಮಾತನಾಡಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ, ‘ಕೊರೋನಾ ಲಾಕ್‌ಡೌನ್‌ನಿಂದ(Lockdown) ಈಗಾಗಲೇ ಹಲವು ಹೋಟೆಲ್‌ಗಳು ನಷ್ಟದಲ್ಲಿವೆ. ಹೊಸವರ್ಷದ ಸಂದರ್ಭದಲ್ಲಿ ಹೆಚ್ಚು ಜನ ಆಗಮಿಸಿ ಹೆಚ್ಚು ವ್ಯಾಪಾರ ನಡೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಈಗಾಗಲೇ ಹಲವು ಹೋಟೆಲ್‌ಗಳು ಸಿದ್ಧತೆ ಮಾಡಿಕೊಂಡಿದ್ದವು. ಸಾಕಷ್ಟು ಗ್ರಾಹಕರು(Customers) ವರ್ಷಾಂತ್ಯ ಮತ್ತು ಆರಂಭದ ದಿನಗಳಿಗೆಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಮುಂಗಡ ಹಣ ನೀಡಿ ಬುಕ್ಕಿಂಗ್ ಮಾಡಿಕೊಂಡಿದ್ದರು. ಆದರೆ, ರಾಜ್ಯ ಸರ್ಕಾರ ಹೊಸ ವರ್ಷ ಒಂದು ವಾರ ಇದೆ ಎನ್ನುವ ಸಂದರ್ಭದಲ್ಲಿ ಶೇ.50ರಷ್ಟುಆಸನ ಮಿತಿ ಹೇರಿದೆ. ಅಲ್ಲದೆ, ಅವೈಜ್ಞಾನಿಕವಾದ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದ ಹೋಟೆಲ್ ಉದ್ಯಮ ಮತ್ತಷ್ಟುನಷ್ಟಕ್ಕೀಡಾಗಲಿದೆ. ನಿಯಮ ಜಾರಿ ಮುನ್ನ ಹೋಟೆಲ್ ಮಾಲೀಕರ ಜತೆ ಯಾವುದೇ ಚರ್ಚೆ ನಡೆಸಿಲ್ಲ. ಸರ್ಕಾರಕ್ಕೆ ಮಾಲೀಕರ ಸಂಕಷ್ಟ ಅರ್ಥವಾಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ರಾತ್ರಿ ಕರ್ಫ್ಯೂನಿಂದ ಸಾರ್ವಜನಿಕರು ಹೆಚ್ಚು ಓಡಾಡುವುದಿಲ್ಲ. ಇದರಿಂದ ಮತ್ತೆ ಲಕ್ಷಾಂತರ ಆಟೋ ಚಾಲಕರ ದುಡಿಮೆಗೆ ಕಲ್ಲು ಬೀಳುತ್ತದೆ. ರಾತ್ರಿ ವೇಳೆ ಬಂದ್ ಮಾಡಿ ಸೋಂಕು ನಿಯಂತ್ರಿಸುವ ಕ್ರಮವನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.
Omicron Threat: 'ರಾಜ್ಯದಲ್ಲಿ ಕೊರೋನಾ ನಿಯಂತ್ರಣ'
ಓಲಾ(Ola) ಊಬರ್(Uber) ಅಸೋಸಿಯೇಷನ್ ಅಧ್ಯಕ್ಷ ತನ್ವಿರ್ ಪಾಷಾ ಮಾತನಾಡಿ, ‘ನಿತ್ಯದುಡಿಮೆ ನಂಬಿ ಬದುಕುತ್ತಿರುವ ಟ್ಯಾಕ್ಸಿ, ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಆಘಾತ ನೀಡಿದೆ. ಸಭೆ, ಸಮಾರಂಭಗಳಿಗೆ, ಮಾರುಕಟ್ಟೆಗಳಿಗೆ ಅನುಮತಿ ನೀಡಿದೆ. ಆದರೆ, ಟ್ಯಾಕ್ಸಿಗಳಿಗೆ ತುರ್ತು ಸೇವೆ ಮಾತ್ರ ಅನುಮತಿ ನೀಡಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದರು. ಇನ್ನು ರಾತ್ರಿ ಪಾಳಿಯಲ್ಲಿ ದುಡಿಮೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಟ್ಯಾಕ್ಸಿ ಚಾಲಕರು ಇದ್ದಾರೆ. ಅಂತಹವರಿಗೆ ರಾತ್ರಿ ಕರ್ಫ್ಯೂ ನಿಯಮ ಉಪವಾಸ ಮಲಗುವಂತೆ ಮಾಡಲಿದೆ. ಈ ಕೂಡಲೇ ಟ್ಯಾಕ್ಸಿ ಓಡಾಟಕ್ಕೆ ಸಂಪೂರ್ಣ ಅನುಮತಿ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಗಡಿ ಭಾಗಗಳು, ವಿಮಾನ ನಿಲ್ದಾಣಗಳ ಮೂಲಕ ಒಮಿಕ್ರೋನ್ ಸೋಂಕು ಹರಡದಂತೆ ನಿಯಂತ್ರಿಸಬೇಕಾಗಿದೆ. ಆದರೆ, ಸರ್ಕಾರ ರಾತ್ರಿ ಮಾತ್ರ ಸೋಂಕು ಹರಡಲಿದೆ ಎಂದು ನಿರ್ಧರಿಸಿದ್ದು, ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದರಿಂದ ಸಾಮಾನ್ಯ ಜೀವನಕ್ಕೆ ತೊಂದರೆ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.