Omicron Threat: 'ರಾಜ್ಯದಲ್ಲಿ ಕೊರೋನಾ ನಿಯಂತ್ರಣ'
* ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್
* ಮೈಕ್ರೋ ಕಂಟೈನ್ಮೆಂಟ್ 97ಕ್ಕೆ ಏರಿಕೆ
* ಮೂರು ತಿಂಗಳ ಬಳಿಕ 250+ ಕೊರೋನಾ ಕೇಸ್
ಬೆಂಗಳೂರು(ಡಿ.25): ರಾಜ್ಯದಲ್ಲಿ(Karnataka) ಕೋವಿಡ್-19(Covid-19) ಪ್ರಕರಣಗಳ ಹಬ್ಬುವಿಕೆ ನಿಯಂತ್ರಣದಲ್ಲಿದೆ. ಆದರೂ ಸರ್ಕಾರ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಾಜ್ಯ ಕೋವಿಡ್ ವಾರ್ ರೂಮ್‌ನ ಮುಖ್ಯಸ್ಥ ಮುನೀಶ್ ಮೌದ್ಗಿಲ್(Munish Moudgil) ಮಾಹಿತಿ ನೀಡಿದ್ದಾರೆ. ಕಳೆದ ಒಂದು ತಿಂಗಳ ಪಾಸಿಟಿವಿಟಿ ದರವನ್ನು ಗಮನಿಸಿದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಸೋಂಕಿತರ ಸಂಪರ್ಕಿತರನ್ನು, ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್(Quarantine) ಮಾಡುವುದು ಸೋಂಕಿನ ಹರಡುವಿಕೆ ನಿಯಂತ್ರಿಸಲು ಅತ್ಯಂತ ಅವಶ್ಯಕ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವು(Government of Karnataka) ಕೋವಿಡ್ ಹರಡುವುದಕ್ಕೆ ಕಡಿವಾಣ ಹಾಕಲು ಸಂಪರ್ಕ ಪತ್ತೆ ಮತ್ತು ಕ್ವಾರಂಟೈನ್‌ಗೆ ಆದ್ಯತೆ ನೀಡಿದೆ. ಆದ್ದರಿಂದ ಸೋಂಕಿತರ ಸಂಪರ್ಕಿತರು ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಏಳು ದಿನಗಳ ಕ್ವಾರಂಟೈನ್ ನಿಯಮವನ್ನು ಪಾಲಿಸಿ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
Delmicron Variant: ಪಾಶ್ಚಿಮಾತ್ಯ ದೇಶಗಳಲ್ಲಿ ಹೊಸ ರೂಪಾಂತರಿ: ಕೋವಿಡ್ ಹೆಚ್ಚಳಕ್ಕೆ ಡೆಲ್ಮಿಕ್ರೋನ್ ಕಾರಣ!
ಸರ್ಕಾರ ಮತ್ತು ಬಿಬಿಎಂಪಿ(BBMP) ಪ್ರತಿ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡುತ್ತಿದೆ. ಕ್ವಾರಂಟೈನ್ ನಿಯಮ ಪಾಲನೆ ಆಗುತ್ತಿದೆಯೇ ಎಂದು ಪರಿಶೀಲಿಸಲು ಮನೆ ಭೇಟಿಯನ್ನು ಹೆಚ್ಚಿಸಲಾಗುವುದು ಎಂದು ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಮೂರು ತಿಂಗಳ ಬಳಿಕ 250+ ಕೊರೋನಾ ಕೇಸ್
ಬೆಂಗಳೂರು(Bengaluru) ನಗರದಲ್ಲಿ ಬರೋಬ್ಬರಿ ಮೂರು ತಿಂಗಳ ಬಳಿಕ ಅತೀ ಹೆಚ್ಚು ಕೊರೋನಾ(Coronavirus) ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ಒಂದೇ ದಿನ 254 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಸೆ.30ರಂದು ವರದಿಯಾಗಿದ್ದ 291 ಕೊರೋನಾ ಪ್ರಕರಣಗಳು ಈವರೆಗಿನ ಅತಿಹೆಚ್ಚು ಸೋಂಕಿತ ಪ್ರಕರಣವಾಗಿತ್ತು. ಆ ನಂತರ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಾ ಸಾಗಿ ಅ.18ರಂದು ಕೇವಲ 83 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ ಮೂರು ತಿಂಗಳಲ್ಲಿ 240ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರಲಿಲ್ಲ.
ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,61,156ಕ್ಕೆ ಏರಿಕೆಯಾಗಿದೆ. 128 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,38,908ಕ್ಕೆ ಏರಿಕೆಯಾಗಿದೆ. ಒಟ್ಟಮೃತರ ಸಂಖ್ಯೆ 16,381ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸದ್ಯ 5866 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.
ಕಳೆದ ಹತ್ತು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 3ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್‌ನಲ್ಲಿ 9, ದೊಡ್ಡನೆಕ್ಕುಂದಿ, ಬೇಗೂರು, ಸಿಂಗಸಂದ್ರ, ಗೊಟ್ಟಿಗೆರೆ, ಹಗದೂರು, ರಾಜರಾಜೇಶ್ವರಿನಗರ, ಎಚ್‌ಎಸ್‌ಆರ್ ಲೇಔಟ್, ಉತ್ತರಹಳ್ಳಿ ವಾರ್ಡ್‌ಗಳಲ್ಲಿ ತಲಾ 4, ಕೋರಮಂಗಲ ವಾರ್ಡ್‌ನಲ್ಲಿ ತಲಾ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
Covid Vaccination: ಬೆಂಗಳೂರು ನಗರ ಜಿಲ್ಲೆಯಲ್ಲಿ 100% ಲಸಿಕೆ
ಮೈಕ್ರೋ ಕಂಟೈನ್ಮೆಂಟ್ 97ಕ್ಕೆ ಏರಿಕೆ:
ಪಾಲಿಕೆ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ(Micro Containment) ಸಂಖ್ಯೆ 97ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 34, ದಕ್ಷಿಣ 18, ಪೂರ್ವ 12, ಪಶ್ಚಿಮ 9, ಮಹದೇವಪುರ 12, ಯಲಹಂಕ 6, ಆರ್‌ಆರ್ ನಗರ 5 ಮತ್ತು ದಾಸರಹಳ್ಳಿ 1 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ.
ಸಕ್ರಿಯ ಕೇಸ್: ಬೆಂಗ್ಳೂರು ದೇಶಕ್ಕೇ ನಂ.1..!
ದೇಶದ(India) ನಗರ ಮತ್ತು ಮಹಾನಗರಗಳ ಪೈಕಿ ಸದ್ಯ ಅತಿ ಹೆಚ್ಚು ಕೊರೋನಾ ಸಕ್ರಿಯ ಸೋಂಕಿತರಿರುವ ನಗರ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು! ಹೌದು. ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌ಗೆ ಹೋಲಿಸಿದರೆ ಅತಿ ಹೆಚ್ಚು 5,866 ಕೊರೋನಾ ಸಕ್ರಿಯ ಸೋಂಕಿತರು ಬೆಂಗಳೂರಿನಲ್ಲಿದ್ದು(Bengaluru), ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ/ ಆರೈಕೆಯಲ್ಲಿದ್ದಾರೆ. ಅಲ್ಲದೆ, ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ಅವಧಿಯಲ್ಲಿ ದೆಹಲಿ, ಹೈದರಾಬಾದ್, ಚೆನ್ನೈಗಿಂತಲೂ ಹೆಚ್ಚು ಜನರಿಗೆ ಬೆಂಗಳೂರಿನಲ್ಲಿ ಸೋಂಕು ತಗುಲಿದೆ.