Namma Clinic: ನಮ್ಮ ಕ್ಲಿನಿಕ್‌ಗೆ ಸಿಎಂ ಬೊಮ್ಮಾಯಿ ಚಾಲನೆ: ಏಕಕಾಲಕ್ಕೆ 114 ಕ್ಲಿನಿಕ್‌ ಆರಂಭ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ನಮ್ಮ ಕ್ಲಿನಿಕ್‌’ಗೆ ಬುಧವಾರ ಚಾಲನೆ ನೀಡಲಾಯಿತು. ಹುಬ್ಬಳ್ಳಿಯ ಬೈರಿದೇವರಕೊಪ್ಪದ ರೇಣುಕಾನಗರದಲ್ಲಿ ಸ್ಥಾಪನೆಯಾಗಿರುವ ಕ್ಲಿನಿಕ್‌ಗೆ ಖುದ್ದಾಗಿ ಹಾಗೂ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಇತರೆ 113 ನಮ್ಮ ಕ್ಲಿನಿಕ್‌ಗಳಿಗೆ ವರ್ಚುವಲ್‌ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಕಕಾಲದಲ್ಲಿ ಚಾಲನೆ ನೀಡಿದರು. 

cm basavaraj bommai opening of namma clinic in hubblli gvd

ಹುಬ್ಬಳ್ಳಿ (ಡಿ.15): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ನಮ್ಮ ಕ್ಲಿನಿಕ್‌’ಗೆ ಬುಧವಾರ ಚಾಲನೆ ನೀಡಲಾಯಿತು. ಹುಬ್ಬಳ್ಳಿಯ ಬೈರಿದೇವರಕೊಪ್ಪದ ರೇಣುಕಾನಗರದಲ್ಲಿ ಸ್ಥಾಪನೆಯಾಗಿರುವ ಕ್ಲಿನಿಕ್‌ಗೆ ಖುದ್ದಾಗಿ ಹಾಗೂ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಇತರೆ 113 ನಮ್ಮ ಕ್ಲಿನಿಕ್‌ಗಳಿಗೆ ವರ್ಚುವಲ್‌ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಕಕಾಲದಲ್ಲಿ ಚಾಲನೆ ನೀಡಿದರು. ಜನವರಿ ಅಂತ್ಯದೊಳಗೆ ರಾಜ್ಯದೆಲ್ಲೆಡೆ ಇನ್ನಷ್ಟು ನಮ್ಮ ಕ್ಲಿನಿಕ್‌ಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಇದೇ ವೇಳೆ ಘೋಷಿಸಿದರು.

ಕ್ಲಿನಿಕ್‌ ಲೋಕಾರ್ಪಣೆಗೊಳಿಸಿ ಮಾತನಾಡಿದ ಬೊಮ್ಮಾಯಿ ಅವರು, ನಗರ ಪ್ರದೇಶದ ಬಡವರಿಗೆ, ಜನಸಾಮಾನ್ಯರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. ಹದಿನಾರು ಬಗೆಯ ಆರೋಗ್ಯ ತಪಾಸಣೆಗಳನ್ನು ಈ ಕ್ಲಿನಿಕ್‌ಗಳಲ್ಲಿ ಉಚಿತವಾಗಿ ಮಾಡಲಾಗುತ್ತಿದೆ ಎಂದರು. ಶ್ರೀಮಂತರೇನೋ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಬಡವರಿಗೆ ಖಾಸಗಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ಹೋದರೂ ರೋಗಿಯನ್ನು ಕರೆದುಕೊಂಡು ಹೋದವರಿಗೂ ಜ್ವರ ಬರುತ್ತದೆ. 

Namma Clinic: ಕಲಬುರಗಿಯಲ್ಲಿ ಬಡವರ ಆರೋಗ್ಯ ಸಂಜೀವಿನಿ 'ನಮ್ಮ‌ ಕ್ಲಿನಿಕ್‌'ಗೆ ಚಾಲನೆ

ಯಾಕೆಂದರೆ ಅಲ್ಲಿನ ಚಿಕಿತ್ಸೆ ಅಷ್ಟೊಂದು ದುಬಾರಿಯಾಗಿದೆ. ಇನ್ನು ಸಣ್ಣ ಪುಟ್ಟ ಪರೀಕ್ಷೆಗೂ ಜಿಲ್ಲಾ, ತಾಲೂಕು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅದಕ್ಕಾಗಿ ಬಹುದೂರ ಪ್ರಯಾಣಿಸಬೇಕು. ಅದಕ್ಕಾಗಿಯೇ ನಗರದಲ್ಲಿ ಬಡವರು, ದುರ್ಬಲರು ಹೆಚ್ಚಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ನಮ್ಮ ಕ್ಲಿನಿಕ್‌ ಪ್ರಾರಂಭಿಸಲಾಗಿದೆ. ಸದ್ಯ 114 ಕ್ಲಿನಿಕ್‌ಗಳಿಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಒಟ್ಟು 438 ಕ್ಲಿನಿಕ್‌ ಮಾಡಲಾಗುತ್ತಿದೆ. ಜನವರಿ ಅಂತ್ಯದೊಳಗೆ ಉಳಿದೆಲ್ಲ ಕ್ಲಿನಿಕ್‌ಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಕ್ಕಳ ಆರೋಗ್ಯ ತಪಾಸಣೆ: ಬಡತನ ಮತ್ತು ಆರೋಗ್ಯ ಎರಡು ಶತ್ರುಗಳು. ಬಡತನದಿಂದಾಗಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ. ಅದಕ್ಕಾಗಿ ಪ್ರತಿಜಿಲ್ಲೆಯಲ್ಲಿ ಪ್ರತಿ ಮಗುವಿನ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ. ಈ ಮೂಲಕ ಅಪೌಷ್ಟಿಕ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಅನುಕೂಲವಾಗುತ್ತದೆ. ಜತೆಗೆ ಅಪೌಷ್ಟಿಕ ಮಕ್ಕಳ ಡಾಟಾವನ್ನು ಒಂದೆಡೆ ಸಲೀಸಾಗಿ ಸಂಗ್ರಹಿಸಿಡುವ ವ್ಯವಸ್ಥೆ ಮಾಡಿದಂತೆಯೂ ಆಗುತ್ತದೆ. ಆ ಪ್ರದೇಶದಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಯೋಜನೆ ರೂಪಿಸಲು ಇದು ಸಹಕಾರಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತಗಳು ಕ್ರಮಕೈಗೊಳ್ಳಬೇಕು ಎಂದು ಇದೇ ವೇಳೆ ಬೊಮ್ಮಾಯಿ ಸೂಚಿಸಿದರು.

ಹನೂರಿಂದ ಮಹದೇಶ್ವರ ಬೆಟ್ಟದ ರಸ್ತೆ ಅಭಿವೃದ್ಧಿಗೆ 100 ಕೋಟಿ: ಸಿಎಂ ಬೊಮ್ಮಾಯಿ

ಆರೋಗ್ಯ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ .10 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಕೊರೋನಾ ಅವಧಿ ಹೊರತುಪಡಿಸಿ ಆರೋಗ್ಯ ಕ್ಷೇತ್ರಕ್ಕೆ ಇಷ್ಟೊಂದು ಅನುದಾನ ನೀಡಿರುವುದು ಇದೇ ಮೊದಲು. ರಾಜ್ಯದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. 30 ಹಾಸಿಗೆಯುಳ್ಳ ಈ ಆಸ್ಪತ್ರೆಗಳು ಜನರಿಗೆ ಇನ್ನಷ್ಟು ಸಹಕಾರಿಯಾಗಲಿವೆ ಎಂದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ 45 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಕಣ್ಣು ತಪಾಸಣೆ, ಅಗತ್ಯವಿದ್ದವರಿಗೆ ಶಸ್ತ್ರ ಚಿಕಿತ್ಸೆ ಮಾಡಿ ಉಚಿತ ಕನ್ನಡಕ ವಿತರಿಸುವ ಯೋಜನೆ ಹಾಕಿಕೊಳ್ಳಲಾಗುತ್ತಿದೆ ಎಂದ ಅವರು, .500 ಕೋಟಿ ವೆಚ್ಚದಲ್ಲಿ ಕಿವುಡರಿಗೆ ಶ್ರವಣ ಸಲಕರಣೆ ವಿತರಿಸಲಾಗುವುದು ಎಂದರು.

ಶ್ರೀಮಂತರೇನೋ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಬಡವರು ಎಲ್ಲಿಗೆ ಹೋಗಬೇಕು? ಖಾಸಗಿ ಆಸ್ಪತ್ರೆಗಳು ಅವರಿಗೆ ಬಹಳ ದುಬಾರಿ. ಅದಕ್ಕಾಗಿಯೇ ನಗರಗಳಲ್ಲಿ ಬಡವರು, ದುರ್ಬಲರು ಹೆಚ್ಚಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ನಮ್ಮ ಕ್ಲಿನಿಕ್‌ ಪ್ರಾರಂಭಿಸಲಾಗುತ್ತಿದೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Latest Videos
Follow Us:
Download App:
  • android
  • ios