Asianet Suvarna News Asianet Suvarna News

Namma Clinic: ಕಲಬುರಗಿಯಲ್ಲಿ ಬಡವರ ಆರೋಗ್ಯ ಸಂಜೀವಿನಿ 'ನಮ್ಮ‌ ಕ್ಲಿನಿಕ್‌'ಗೆ ಚಾಲನೆ

ನಗರ ಪ್ರದೇಶಗಳಲ್ಲಿನ ಬಡವರಿಗೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವ 'ನಮ್ಮ ಕ್ಲಿನಿಕ್'ಗೆ ಕಲಬುರಗಿಯಲ್ಲೂ ಚಾಲನೆ ಸಿಕ್ಕಿದೆ.‌ ಕಲಬುರಗಿ ಜಿಲ್ಲಾಧಿಕಾರಿ ಯಶವಂತ‌ ವಿ.‌ಗುರುಕರ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಅವರು ಬುಧವಾರ ನಗರದ ಆಳಂದ ರಸ್ತೆಯ (ರಾಣೆಸ್ಪೀರ್ ದರ್ಗಾ ರಸ್ತೆಯ) ಶ್ರೀರಾಮ ನಗರದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. 

launched to namma clinic in Kalaburagi gvd
Author
First Published Dec 14, 2022, 3:59 PM IST

ಕಲಬುರಗಿ (ಡಿ.14): ನಗರ ಪ್ರದೇಶಗಳಲ್ಲಿನ ಬಡವರಿಗೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವ 'ನಮ್ಮ ಕ್ಲಿನಿಕ್'ಗೆ ಕಲಬುರಗಿಯಲ್ಲೂ ಚಾಲನೆ ಸಿಕ್ಕಿದೆ.‌ ಕಲಬುರಗಿ ಜಿಲ್ಲಾಧಿಕಾರಿ ಯಶವಂತ‌ ವಿ.‌ಗುರುಕರ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಅವರು ಬುಧವಾರ ನಗರದ ಆಳಂದ ರಸ್ತೆಯ (ರಾಣೆಸ್ಪೀರ್ ದರ್ಗಾ ರಸ್ತೆಯ) ಶ್ರೀರಾಮ ನಗರದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ ತಾಲೂಕಿನ ಬೈರಿದೇವರಕೊಪ್ಪದಲ್ಲಿ 'ನಮ್ಮ‌ ಕ್ಲಿನಿಕ್'ಗೆ ಚಾಲನೆ‌ ನೀಡಿದಲ್ಲದೆ ರಾಜ್ಯದಾದ್ಯಂತ‌ ಮೊದಲನೇ ಹಂತವಾಗಿ 114 ನಮ್ಮ‌ ಕ್ಲಿನಿಕ್‌ಗೆ ವರ್ಚುವಲ್‌ ಮೂಲಕ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ 2022-23ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದಾದ್ಯಂತ 438 ನಮ್ಮ ಕ್ಲಿನಿಕ್ ಸ್ಥಾಪನೆಗೆ ಘೋಷಿಸಿದ್ದು, ಇಂದು 114 ಕ್ಲಿನಿಕ್ ಮೂಲಕ ಅನುಷ್ಠಾನಕ್ಕೆ ತಂದಿದ್ದೇವೆ. ಬರುವ ಜನವರಿ ಅಂತ್ಯಕ್ಕೆ 438 ಕ್ಲಿನಿಕ್ ಕಾರ್ಯನಿರ್ವಹಿಸಲಿವೆ. 

Namma Clinic: ಬಡವರ ಆರೋಗ್ಯ ರಕ್ಷಣೆಗೆ ನಮ್ಮ ಕ್ಲಿನಿಕ್‌: ಸಚಿವ ಸುಧಾಕರ್‌

ದೇಶದ‌ ಪ್ರಗತಿಗೆ ಆರೋಗ್ಯವಂತ ವ್ಯಕ್ತಿಯ ಪಾತ್ರ ದೊಡ್ಡದಾಗಿದೆ. ಉತ್ತಮ ಆರೋಗ್ಯ ಹೊಂದಲು ಬಡತನ ಅಡ್ಡಿಯಾಗಬಾರದೆಂಬ ಸದಾಶಯದೊಂದಿಗೆ ನಮ್ಮ‌ ಕ್ಲಿನಿಕ್ ಆರಂಭಿಸಿದ್ದೇವೆ. ನಗರದ ಬಡಜನರು, ಕೂಲಿ ಕಾರ್ಮಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಅದರ ನಿವಾರಣೆಗೆ ರಾಜ್ಯದಾದ್ಯಾಂತ ಮಕ್ಕಳನ್ನು ತಪಾಸಣೆಗೆ ಒಳಪಡಿಸುವ ಅಭಿಯಾನ ಹಮ್ಮಿಕೊಳ್ಳಬೇಕು. ಹಿಂದೆ ತಾವು ಜಿಲ್ಲಾ ಉಸ್ತುವಾತಿ ಸಚಿವರಿದಗದಾಗ, ಹಾವೇರಿ, ಉಡುಪಿಯಲ್ಲಿ ತಪಾಸಣೆ ಮಾಡಲಾಗಿತ್ತು ಎಂದರು.

ಸಾರ್ವಜನಿಕರೊಂದಿಗೆ ಸಿಎಂ ಸಂವಾದ: ಇದೇ ಸಂದರ್ಭದಲ್ಲಿ ರಾಯಚೂರು, ಚಾಮರಾಜನಗರ, ಕಾರವಾರ ಜಿಲ್ಲೆಯ ನಮ್ಮ‌ ಕ್ಲಿನಿಕ್ ಫಲಾನುಭವಿಗಳೊಂದಿಗೆ ಸಿಎಂ ಸಂವಾದ ನಡೆಸಿದರು. 

ಜಿಲ್ಲೆಯಲ್ಲಿ 11 ಕ್ಲಿನಿಕ್‌ಗಳು: ಕಲಬುರಗಿ ನಗರದ 7 ಕಡೆ (ಶ್ರೀರಾಮ ನಗರ, ಸಂತ್ರಾಸವಾಡಿ ಪ್ರದೇಶದ ನಯಾ ಮೊಹಲ್ಲಾ, ಕಪನೂರ ಕೈಗಾರಿಕೆ ಪ್ರದೇಶ, ಹಾಗರಗಾ ಕ್ರಾಸ್ ಬಳಿಯ ರಾಮಜಿ ನಗರ, ರಾಜಾಪೂರ, ಕೋಟನೂರ ಹಾಗೂ ಬಂಬೂ ಬಜಾರ್) ಶಹಾಬಾದ, ಜೇವರ್ಗಿ, ಚಿಂಚೋಳಿ, ಅಫಜಲಪೂರನಲ್ಲಿ 'ನಮ್ಮ ಕ್ಲಿನಿಕ್' ತೆರೆಯಲಾಗುತ್ತಿದ್ದು, ಉಚಿತ ಅರೋಗ್ಯ ಸೇವೆ ದೊರಕಲಿದೆ. 

ನಮ್ಮ ಕ್ಲಿನಿಕ್‌ನಲ್ಲಿ ತಲಾ ಓರ್ವ ಎಂ.ಬಿ.ಬಿ.ಎಸ್. ವೈದ್ಯ, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಗ್ರೂಪ್ 'ಡಿ' ಇರಲಿದ್ದು, ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ‌ 4.30 ಗಂಟೆವರೆಗೆ ಸೇವೆ ನೀಡಲಿದ್ದಾರೆ. ಮುಖ್ಯವಾಗಿ ಇಲ್ಲಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ಪ್ರಾಥಮಿಕ ಆರೋಗ್ಯ ತಪಾಸಣೆ, ಸ್ಕ್ರೀನಿಂಗ್ ಎಲ್ಲವು ಉಚಿತವಾಗಿ ಮಾಡಲಾಗುತ್ತಿದೆ. ನಮ್ಮ ಕ್ಲಿನಿಕ್ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗಶಾಲೆ, ಯೋಗ ಕೊಠಡಿ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಛೇರಿ ಹೊಂದಿದೆ. 

ಕ್ಲಿನಿಕ್‌ನಲ್ಲಿ ಲಭ್ಯ ಸೇವೆಗಳು: ಗರ್ಭಿಣಿ ಮತ್ತು ಜನನ ಸಮಯದ ಆರೈಕೆ ಮತ್ತು ಬಾಣಂತಿ ಸೇವೆಗಳು, ನವಜಾತ ಶಿಶು ಆರೈಕೆ ಮತ್ತು ಚುಚ್ಚುಮದ್ದು, ಮಕ್ಕಳ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು, ಕುಟುಂಬ ಕಲ್ಯಾಣ ಅನುಷ್ಠಾನ ಸೇವೆಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿರ್ವಹಣೆ,  ಹಿರಿಯ ನಾಗರಿಕರ ಆರೈಕೆ ಮತ್ತು  ಉಪಶಾಮಕ ಆರೈಕೆ, ಕಣ್ಣು, ದಂತ ಹಾಗೂ ತುರ್ತು ವೈದ್ಯಕೀಯ ಸೇವೆ, ಮಾನಸಿಕ ಅರೋಗ್ಯ ಸೇವೆಗಳನ್ನು ಇಲ್ಲಿ ನೀಡಲಾಗುತ್ತಿದೆ. ಅಗತ್ಯ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ರೆಫರಲ್ ಸಹ ಮಾಡಲಾಗುತ್ತಿದೆ.

ನಮ್ಮ ಕ್ಲಿನಿ​ಕ್‌​ನಲ್ಲಿ ಎಲ್ಲರಿಗೂ ಶುಗರ್‌ ಟೆಸ್ಟ್‌: ಸಚಿವ ಸುಧಾಕರ್‌

ಕಾರ್ಯಕ್ರಮದಲ್ಲಿ ಡಿ.ಹೆಚ್.ಓ ಡಾ.ರಾಜಶೇಖರ ಮಾಲಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಪ್ರಭುಲಿಂಗ‌ ಮಾನಕರ್, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ, ಡಿ.ಎಲ್.ಓ ಡಾ.ರಾಜಕುಮಾರ, ಡಿ.ಟಿ.ಓ ಡಾ.ಚಂದ್ರಕಾಂತ‌ ನರಬೋಳಿ, ನಮ್ಮ‌ ಕ್ಲಿನಿಕ್ ಡಾ.ಸೌಬಿಯಾ ಮುಲ್ಲಾ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

Follow Us:
Download App:
  • android
  • ios