ನಗರದ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಬಜೆಟ್‌ನಲ್ಲಿ ಘೋಷಿಸಲಾದ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಬಿಬಿಎಂಪಿಯ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು (ಮಾ.12): ನಗರದ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಬಜೆಟ್‌ನಲ್ಲಿ ಘೋಷಿಸಲಾದ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಬಿಬಿಎಂಪಿಯ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿಬಿಎಂಪಿ ಹಾಗೂ ಬೆಂಗಳೂರು ಸ್ಮಾರ್ಟ್‌ ಸಿಟಿಯಿಂದ ಸದಾಶಿವನಗರದಲ್ಲಿ ನಿರ್ಮಿಸಲಾದ ಸ್ಮಾರ್ಟ್‌ ವರ್ಚುವಲ್‌ ಕ್ಲಿನಿಕ್‌ (ಎಸ್‌ವಿಸಿ) ಮತ್ತು ಸೆಂಟ್ರಲ್‌ ಕ್ಲಿನಿಕಲ್‌ ಕಮಾಂಡ್‌ ಸೆಂಟರನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ನಡುವೆ ಹಂಚಿ ಹೋಗಿರುವ ಬೆಂಗಳೂರಿನ ಆರೋಗ್ಯ ವ್ಯವಸ್ಥೆಯು ಬಿಬಿಎಂಪಿಯಡಿಗೆ ಬರಲಿದೆ ಎಂದರು.

ಎಸ್‌ವಿಸಿ ಯೋಜನೆಯಡಿ ಬೆಂಗಳೂರಿನಲ್ಲಿ 28 ಕಡೆಗಳಲ್ಲಿ ಕ್ಲಿನಿಕ್‌ ಆರಂಭಿಸಲಾಗಿದೆ. ಆನ್‌ಲೈನ್‌ ಮೂಲಕ ಎಸ್ವಿಸಿ ಸೇವೆಗಳು ಲಭ್ಯವಾಗಲಿದ್ದು, ಇಲ್ಲಿ ಅತ್ಯಾಧುನಿಕ ವೈದ್ಯಕೀಯ ಸಾಧನಗಳು ಇವೆ. ಹೃದಯ, ಶ್ವಾಸಕೋಶ, ಕಣ್ಣು, ಕಿವಿಗಳ ಸಂಕೀರ್ಣ ತಪಾಸಣೆ ಸೇರಿದಂತೆ ಹಲವು ಸೇವೆಗಳು ಇಲ್ಲಿ ಸಿಗಲಿವೆ. ಈ ಕೇಂದ್ರಗಳಿಗೆ ಡಿಜಿಟಲ್‌ ಸ್ಟೆಥೋಸ್ಕೋಪ್‌, ಗ್ಲೂಕೊ ಮೀಟರ್‌, ಡರ್ಮಾಸ್ಕೋಪ್‌, ಇಸಿಜಿ ಮುಂತಾದ ಅಗತ್ಯ ಸೌಲಭ್ಯಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ಅಥವಾ ಪರಿಣತ ವೈದ್ಯರ ಸಲಹೆ ಸಿಗುವುದಿಲ್ಲ ಎನ್ನುವ ಭಾವನೆಯಿಂದ ಜನರು ಹೊರಬರಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಿಸಿದ್ದು ಯಾರೆಂದು ಜನ ನಿರ್ಧರಿಸಲಿ: ಸಿಎಂ ಬೊಮ್ಮಾಯಿ

ಇದರಿಂದ ನಗರದ ಜನರಿಗೆ ಸುಗಮ ಆರೋಗ್ಯ ಸೇವೆಗಳು ಸಿಗಲಿವೆ. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದುಗಿಸುವುದು ನಮ್ಮ ಗುರಿ ಎಂದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಆಧುನಿಕ ಜೀವನ ಶೈಲಿಯಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಇನ್ನೊಂದೆಡೆಯಲ್ಲಿ, ಖಾಸಗಿ ಆಸ್ಪತ್ರೆಗಳು ಜನರಿಗೆ ಎಟುಕುತ್ತಿಲ್ಲ. ಇದನ್ನು ಮನಗಂಡು ಸ್ಮಾರ್ಟ್‌ ವರ್ಚುಯಲ್‌ ಕ್ಲಿನಿಕನ್ನು ಆರಂಭಿಸಲಾಗಿದೆ. ಇದು ರಾಜ್ಯ, ದೇಶಕ್ಕೆ ಮಾದರಿಯಾಗಲಿದೆ ಎಂದು ತಿಳಿಸಿದರು. ಎಸ್‌ವಿಸಿಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ ಸೌಲಭ್ಯವಿದ್ದು, ಡಿಜಿಟಲ್‌ ಪ್ರಿಸ್ಕಿ್ರಪ್ಶನ್‌ ಪಡೆದುಕೊಳ್ಳಬಹುದು. 

ವೈದ್ಯಕೀಯ ವರದಿಗಳ ಆನ್‌ಲೈನ್‌ ನಿರ್ವಹಣೆ ವ್ಯವಸ್ಥೆ ಇದ್ದು, ಮುಂದಿನ ಸುತ್ತಿನ ವೈದ್ಯಕೀಯ ಸಮಾಲೋಚನೆಯ ದಿನಾಂಕವನ್ನೂ ಕಾಯ್ದಿರಿಸಿ, ರೋಗಿಗಳಿಗೆ ಆನ್‌ಲೈನ್‌ ಮೂಲಕ ತಿಳಿಸುವ ವ್ಯವಸ್ಥೆಯಿದೆ ಎಂದು ತಿಳಿಸಿದರು. ಈ ವೇಳೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ, ಪಶ್ಚಿಮ ವಲಯ ಆಯುಕ್ತ ಡಾ.ಆರ್‌.ಎಲ್.ದೀಪಕ್‌, ಜಂಟಿ ಆಯುಕ್ತ ಲೋಕನಾಥ ಮತ್ತು ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಶ್ರೀನಿವಾಸ್‌ ಭಾಗವಹಿಸಿದ್ದರು.

28 ಕಡೆ ಸ್ಮಾರ್ಟ್‌ ಕ್ಲಿನಿಕ್‌: ಕೋಡಿಹಳ್ಳಿ, ಗಂಗಾನಗರ, ಲಿಂಗರಾಜಪುರ, ಸುಲ್ತಾನ್‌ ಪಾಳ್ಯ, ಅಶೋಕ ನಗರ, ವಸಂತ ನಗರ, ಬಾಪೂಜಿ ನಗರ, ಗವಿಪುರಂ ಗುಟ್ಟಹಳ್ಳಿ, ಎನ್‌. ಎಸ್‌.ಪಾಳ್ಯ, ಎನ್‌.ಆರ್‌.ಕಾಲೋನಿ, ಕುಮಾರಸ್ವಾಮಿ ಬಡಾವಣೆ, ಜೆ.ಪಿ.ನಗರ, ಪ್ಯಾಲೇಸ್‌ ಗುಟ್ಟಹಳ್ಳಿ, ಅಜಾದ್‌ ನಗರ, ಕೋದಂಡರಾಂಪುರ, ನಾಗಪ್ಪ ಬ್ಲಾಕ್‌, ಮಹಾಲಕ್ಷ್ಮಿ ಬಡಾವಣೆ. ಮೂಡಲಪಾಳ್ಯ, ನೇತಾಜಿ ವೃತ್ತ, ಕಾಮಾಕ್ಷಿ ಪಾಳ್ಯ, ಗಾಂಧಿ ಗ್ರಾಮ, ಸುಬೇದಾರ್‌ ಪಾಳ್ಯ, ಕೋಣನಕುಂಟೆ, ಮಾರತ್ತಹಳ್ಳಿ. ಉಲ್ಲಾಳು ಉಪ ನಗರ, ಸಹಕಾರ ನಗರ, ನೆಲಮಹೇಶ್ವರಿ ಮತ್ತು ಸುಬ್ರಹ್ಮಣ್ಯ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಮಾರ್ಟ್‌ ವರ್ಚುವಲ್‌ ಕ್ಲಿನಿಕ್‌ ಸೌಲಭ್ಯವಿದೆ.

ಸ್ಮಾರ್ಟ್‌ ವರ್ಚುವಲ್‌ ಕ್ಲಿನಿಕ್‌ಗೆ ಭೇಟಿ ನೀಡುವ ರೋಗಿಯ ರೋಗಪತ್ತೆಯನ್ನು ವರ್ಚುವಲ್‌ ಮೂಲಕ ನೈಜ ಸಮಯದಲ್ಲೇ ಕಮಾಂಡ್‌ ಸೆಂಟರ್‌ನಲ್ಲಿ ಕುಳಿತಿರುವ ವೈದ್ಯರು ಮಾಡುತ್ತಾರೆ. ಆ ಬಳಿಕ ರೋಗಿಯೊಂದಿಗೆ ಸಮಾಲೋಚಿಸಿ, ರೋಗಿಯ ಸ್ಥಿತಿ ಆಧರಿಸಿ ಪ್ರಿಸ್ಕಿ್ರಪ್ಷನ್‌ನೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಆನ್‌ಲೈನ್‌ ಮೂಲಕ ಸಲಹೆ ನೀಡುತ್ತಾರೆ.

ಭೀಮಾತೀರದಲ್ಲಿ ಟಿಕೆಟ್‌ಗಾಗಿ ಕುಟುಂಬದೊಳಗೇ ಕಾದಾಟ: ಅಖಾಡಕ್ಕೆ ಎಸ್‌ಐ ಹಗರಣದ ಕಿಂಗ್‌ಪಿನ್‌ ಸಜ್ಜು

ಚರ್ಮದ ಸಮಸ್ಯೆ ಹೆಚ್ಚು: ಕಳೆದ 15 ದಿನದಲ್ಲಿ ಸ್ಮಾರ್ಟ್‌ ವರ್ಚುವೆಲ್‌ ಕ್ಲಿನಿಕ್‌ಗಳನ್ನು ಪ್ರಾಯೋಗಿಕವಾಗಿ ನಡೆಸಲಾಯಿತು. ಈ ವೇಳೆ ಚರ್ಮದ ಸಮಸ್ಯೆಯ ರೋಗಿಗಳು ಹೆಚ್ಚು ಸಂಖ್ಯೆಯಲ್ಲಿ ಬಂದಿದ್ದಾರೆ. ಸದ್ಯ 9 ವಿಭಾಗದಲ್ಲಿ ತಜ್ಞ ವೈದ್ಯರ ನೇಮಕ ಪ್ರಕ್ರಿಯೆ ನಡೆಸಿದ್ದು, ಆರು ವಿಭಾಗದಲ್ಲಿ ನೇಮಕಾತಿ ಪೂರ್ಣಗೊಂಡಿದೆ. ಕಣ್ಣು, ಕಿವಿ, ಮೂಗು, ಮಕ್ಕಳ ತಜ್ಞರು ಕೆಲಸ ಆರಂಭಿಸಿದ್ದಾರೆ. ಚರ್ಮದ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚಿದ್ದರಿಂದ ಚರ್ಮ ತಜ್ಞರನ್ನು ನೇಮಕ ಮಾಡಿದ್ದೇವೆ. ಹೃದ್ರೋಗ ತಜ್ಞರ ನೇಮಕಕ್ಕೆ ಜಯದೇವದ ಜತೆ ಮಾತುಕತೆ ನಡೆಸುತ್ತಿದ್ದೇವೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ತಜ್ಞರ ನೇಮಕ ಮಾಡುತ್ತೇವೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್‌.ಬಾಲಸುಂದರ್‌ ಮಾಹಿತಿ ನೀಡಿದರು.