Asianet Suvarna News Asianet Suvarna News

ಮಳೆ ಹಾನಿ ಸ್ಥಳಕ್ಕೆ ಖುದ್ದು ಹೋಗಿ: ಡಿಸಿಗಳಿಗೆ ಸಿಎಂ ಬೊಮ್ಮಾಯಿ ಖಡಕ್‌ ಸೂಚನೆ

ಜಿಲ್ಲಾ ಕೇಂದ್ರ ಬಿಟ್ಟು ತಾಲೂಕುಗಳಿಗೆ ಹೊರಡಿ, ವಿಡಿಯೋ ಕಾನ್ಫರೆನ್ಸಲ್ಲಿ ಬೊಮ್ಮಾಯಿ ತಾಕೀತು

CM Basavaraj Bommai Instruct to DC's For Rain Damage in Karnataka grg
Author
First Published Oct 14, 2022, 6:27 AM IST

ಬೆಂಗಳೂರು/ಹೊಸಪೇಟೆ(ಅ.14):  ರಾಜ್ಯದಲ್ಲಿ ಮಳೆಯಿಂದಾಗಿ ಉಂಟಾದ ಅನಾಹುತಗಳ ಕುರಿತು ಜಿಲ್ಲಾ ಕೇಂದ್ರಗಳಲ್ಲಿ ಕುಳಿತು ಸಭೆ ಮಾಡುವುದಕ್ಕಿಂತ ಪ್ರತಿ ತಾಲೂಕಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗುರುವಾರ ಬೆಳಗ್ಗೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರದ ಖಾಸಗಿ ಹೋಟೆಲ್‌ನಲ್ಲಿ ಮಳೆ ಹಾನಿ ಸಂಭವಿಸಿದ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದರು.

ನಕಲಿ ಫಲಾನುಭವಿಗಳ ಹೆಸರನ್ನು ಸಂತ್ರಸ್ತರ ಪಟ್ಟಿಯಲ್ಲಿ ಸೇರಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ತಪ್ಪು ಮಾಡಿದರೆ ತಕ್ಷಣ ಅಮಾನತುಗೊಳಿಸಬೇಕು. ನಿಜವಾದ ಫಲಾನುಭವಿಗಳು ಪರಿಹಾರ ವಂಚಿತ ಆಗಬಾರದು. ಮಳೆಯಿಂದ ವಿದ್ಯುತ್‌ ಸಂಪರ್ಕ ಕಡಿತವಾದರೆ 24 ಗಂಟೆಯಲ್ಲಿ ಸಂಪರ್ಕ ಕಲ್ಪಿಸಬೇಕು. ಯಾವುದೇ ಹಳ್ಳಿಗೆ ಮಳೆಯಿಂದ ವಿದ್ಯುತ್‌ ಸಮಸ್ಯೆಯಾದರೆ ಸಹಿಸುವುದಿಲ್ಲ. ಕೆರೆ ಒಡೆದು ಯಾವುದಾದರೂ ಪ್ರಾಣ ಹಾನಿ, ಬೆಳೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಕಟುನಿಟ್ಟಿನ ಸೂಚನೆ ನೀಡಿದರು.

Davanagere Rains: ಭಾರೀ ಮಳೆಗೆ ಹಳ್ಳ, ರಸ್ತೆಗಳು ಮುಳುಗಡೆ

ರಾಜ್ಯದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಮಳೆ ಹಾನಿ ಸಂಭವಿಸಿದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸಬೇಕು. ಮಳೆಗೆ ಸಂಬಂಧಿಸಿದ ಹಾನಿಯನ್ನು ದಾಖಲಿಸುವ ಹಂತದಲ್ಲಿಯೇ ಕೆಲವೆಡೆ ಲೋಪಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಲೋಪವಾಗದಂತೆ ಜಿಲ್ಲಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ವಹಿಸಬೇಕು. ವಸ್ತುಸ್ಥಿತಿ ಆಧರಿಸಿ, ಪರಿಹಾರ ಕೋರಿ ಬಂದ ಮನವಿಗಳನ್ನು ದಾಖಲಿಸಬೇಕು. ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮನೆ ಹಾನಿಗೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸಬೇಕು. ಅಕ್ಟೋಬರ್‌ ತಿಂಗಳಲ್ಲಿ ಸಂಭವಿಸಿದ ಬೆಳೆಹಾನಿಯನ್ನು ಸಹ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಅನುದಾನ ಕೊರತೆ ಇಲ್ಲ:

ಬೆಳೆಹಾನಿ ಮತ್ತು ಮನೆಹಾನಿಗೆ ಪರಿಹಾರ ನೀಡಲು ಅನುದಾನದ ಕೊರತೆ ಇಲ್ಲ. ಮೂಲಸೌಕರ್ಯ ಹಾನಿಗೆ ಬಿಡುಗಡೆ ಮಾಡಲಾದ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು. ಮೂಲಸೌಕರ್ಯ ಹಾನಿಗೆ ಸಂಬಂಧಿಸಿದಂತೆ ಮೂರು ದಿನಗಳ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ ಒಟ್ಟು 9,90,957 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 6,16,138 ಹೆಕ್ಟೇರ್‌ ಪ್ರದೇಶದ ಬೆಳೆಹಾನಿಗೆ 8.83 ಲಕ್ಷ ರೈತರಿಗೆ 947.8 ಕೋಟಿ ರು. ಪರಿಹಾರ ವಿತರಿಸಲಾಗಿದೆ. ಇನ್ನು ಎರಡು ದಿನದಲ್ಲಿ ಇನ್ನೊಂದು ಹಂತದಲ್ಲಿ ಸುಮಾರು ಎರಡು ಲಕ್ಷ ರೈತರಿಗೆ 250 ಕೋಟಿ ರು. ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೂ.1ರಿಂದ ಸೆ.30ರವರೆಗೆ 48,485 ಮನೆ ಹಾನಿ ಸಂಭವಿಸಿದ್ದು, 42,661 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಒಟ್ಟು 635.13 ಕೋಟಿ ರು. ಲಭ್ಯ ಇದೆ ಎಂದು ಮಾಹಿತಿ ನೀಡಿದರು.

ಮಳೆ ನಿಂತು ಹೋದ ಮೇಲೆ ಎಚ್ಚೆತ್ತ ಬಿಬಿಎಂಪಿ: ಬೆಂಗ್ಳೂರು ಪ್ರವಾಹ ನಿಯಂತ್ರಣಕ್ಕೆ ವಿಶ್ವ ಬ್ಯಾಂಕ್ ಎಂಟ್ರಿ..!

ಮೂಲಸೌಲಭ್ಯ ಹಾನಿಗೆ ಸಂಬಂಧಿಸಿದಂತೆ ಹಾನಿಯ ತೀವ್ರತೆಯನ್ನು ಆಧರಿಸಿ ಪ್ರಸ್ತಾವನೆ ಸಲ್ಲಿಸಬೇಕು. ಸಿ ವರ್ಗ- ಎನ್‌ಡಿಆರ್‌ಎಫ್‌ ಮಾರ್ಗಸೂಚಿಯನ್ವಯ ದುರಸ್ತಿ, ಬಿ ವರ್ಗ- ಸರ್ಕಾರದಿಂದ ಹೆಚ್ಚುವರಿ ನೆರವು ಅಗತ್ಯವಿರುವ ಕಾಮಗಾರಿಗಳು, ಎ ವರ್ಗ- ಸಂಪೂರ್ಣ ಪುನರ್‌ ನಿರ್ಮಾಣ ಅಗತ್ಯವಿರುವ ಕಾಮಗಾರಿಗಳು ಎಂದು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೆರೆಗಳು ದುರ್ಬಲವಾಗಿರುವುದು, ನೀರಿನ ಒತ್ತಡ ಹೆಚ್ಚಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಅವಲೋಕಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸೇತುವೆಗಳ ನಿರ್ಮಾಣದ ವಿಷಯದಲ್ಲಿಯೂ ಆದ್ಯತೆಯನ್ನು ಗುರುತಿಸಿ, ಅದರಂತೆ ದುರಸ್ತಿ, ಮರುನಿರ್ಮಾಣ ಮಾಡಬೇಕು ಎಂದರು.

ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಮುಖ್ಯಮಂತ್ರಿಗಳೊಂದಿಗೆ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.
ಸೆ.1ರಿಂದ ಈವರೆಗೆ ವರದಿಯಾಗಿರುವ ಮಳೆಹಾನಿಯ ವಿವರ:

* ಜೀವಹಾನಿ - 13
* ಜಾನುವಾರುಗಳ ಸಾವು - 28
* ಮನೆ ಹಾನಿ - 3309
* ಬೆಳೆ ಹಾನಿ - 6279 ಹೆಕ್ಟೇರ್‌
* ಕಾಳಜಿ ಕೇಂದ್ರಗಳ ಸ್ಥಾಪನೆ - 5
* ಆಶ್ರಯ ಪಡೆದವರ ಸಂಖ್ಯೆ - 1330

Follow Us:
Download App:
  • android
  • ios