ಮಳೆ ನಿಂತು ಹೋದ ಮೇಲೆ ಎಚ್ಚೆತ್ತ ಬಿಬಿಎಂಪಿ: ಬೆಂಗ್ಳೂರು ಪ್ರವಾಹ ನಿಯಂತ್ರಣಕ್ಕೆ ವಿಶ್ವ ಬ್ಯಾಂಕ್ ಎಂಟ್ರಿ..!
ಕಳೆದ ತಿಂಗಳು ಬೆಂಗಳೂರಿನಲ್ಲಿ ಭಾರೀ ಮಳೆಗೆ ನಗರದ ರಾಜಕಾಲುವೆಗಳ ನೀರು ರಸ್ತೆಗೆ ಬಂದಿತ್ತು. ಇದರಿಂದ ಬೆಂಗಳೂರಿನ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗಿತ್ತು.
ಬೆಂಗಳೂರು(ಅ.11): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರವಾಹ ಸ್ಥಳಗಳ ಅಭಿವೃದ್ಧಿಗೆ ಬಿಬಿಎಂಪಿ ವಿಶ್ವ ಬ್ಯಾಂಕ್ ಮೊರೆ ಹೋಗಿದೆ. ಹೌದು, ಕಳೆದ ತಿಂಗಳು ಬೆಂಗಳೂರಿನಲ್ಲಿ ಭಾರೀ ಮಳೆಗೆ ನಗರದ ರಾಜಕಾಲುವೆಗಳ ನೀರು ರಸ್ತೆಗೆ ಬಂದಿತ್ತು. ಇದರಿಂದ ಬೆಂಗಳೂರಿನ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗಿತ್ತು. ಇದರಿಂದ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ರಾಜ್ಯ ಸರ್ಕಾರ ರಾಜಕಾಲುವೆ ದುರಸ್ತಿಗೆ 1500 ಕೋಟಿ ಅನುದಾನ ನೀಡಿತ್ತು. ಆದ್ರೆ, 1500 ಕೋಟಿ ರೂ. ರಾಜಕಾಲುವೇ ದುರಸ್ಥಿಗೆ ಸಾಕಗೋದಿಲ್ಲ ಅಂತ ವಿಶ್ವ ಬ್ಯಾಂಕ್ ಬಳಿ ಸುಮಾರು 2000 ಕೋಟಿ ಅನುದಾನ ಕೇಳೋದಕ್ಕೆ ಬಿಬಿಎಂಪಿ ಮುಂದಾಗಿದೆ.
ಇತ್ತ ವಾತಾವರಣ ಸ್ಥಿತಿಸ್ಥಾಪಕತ್ವ ಅಧ್ಯಯನಕ್ಕೆ ವಿಶ್ವಬ್ಯಾಂಕ್ ತಂಡ ಬೆಂಗಳೂರಿಗೆ ಆಗಮಿಸಿದೆ. ಈ ನಿಟ್ಟಿನಲ್ಲಿ ನಿನ್ನೆ(ಸೋಮವಾರ) ಪಾಲಿಕೆ ಅಧಿಕಾರಿಗಳು, ವಿಶ್ವಬ್ಯಾಂಕ್ ಪ್ರತಿನಿಧಿಗಳ ತಂಡಕ್ಕೆ ಪ್ರವಾಹ ಪೀಡಿತ ಪ್ರದೇಶಗಳನ್ನು ತೋರಿಸಿದ್ದಾರೆ.
ಒತ್ತುವರಿ ತೆರವಿಗೆ ನಿರ್ಲಕ್ಷ್ಯದಿಂದಲೇ ಬೆಂಗಳೂರಲ್ಲಿ ಪ್ರವಾಹ ಸೃಷ್ಟಿ: ಹೈಕೋರ್ಟ್
ಇತ್ತೀಚೆಗೆ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಮಹದೇವಪುರ ಸೇರಿ ವಿವಿಧೆಡೆ ಪ್ರವಾಹ ಸೃಷ್ಟಿಯಾಗಿತ್ತು. ನಗರದ ಪಕ್ಕದಲ್ಲಿ ಯಾವುದೇ ನದಿ ಮತ್ತು ಸಮುದ್ರ ಇಲ್ಲದಿದ್ದರೂ ಪ್ರವಾಹ ಉಂಟಾಗಿರುವ ವಿಚಾರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು. ಜತೆಗೆ, ಸರ್ಕಾರದ ಒದಗಿಸಿದ ಕಳಪೆ ಮೂಲ ಸೌಕರ್ಯದ ಬಗ್ಗೆಯೂ ಜಗಜ್ಜಾಹೀರಾಗಿತ್ತು. ಆದರೆ, ವಿಶ್ವಬ್ಯಾಂಕ್ ಪ್ರತಿನಿಧಿಗಳ ನಿಯೋಗವೊಂದು ರಾಜ್ಯದ ವಿವಿಧ ವಲಯಗಳಲ್ಲಿರುವ ವಾತಾವರಣದ ಸ್ಥಿತಿಸ್ಥಾಪಕತ್ವ ಪರಿಶೀಲನೆ ಬಂದಿದೆ. ಈ ತಂಡದ ಮುಂದೆ ಪಾಲಿಕೆ ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.
ಈ ಮೂಲಕ ಮಳೆ ನೀರು ಸಮರ್ಪಕವಾಗಿ ಹರಿಯಲು ರಾಜಕಾಲುವೆ ಅಭಿವೃದ್ಧಿ, ಕೆರೆಗಳ ನೀರಿನ ಸಮರ್ಪಕ ಬಳಕೆ ಮತ್ತು ಮೂಲ ಸೌಕರ್ಯಗಳನ್ನು ಬಲಪಡಿಸಲು ವಿಶ್ವ ಬ್ಯಾಂಕ್‌ಗೆ ನೆರವು ಕೇಳುವುದಕ್ಕೆ ಬಿಬಿಎಂಪಿ ಮುಂದಾಗಿದೆ. ವಿಶ್ವ ಬ್ಯಾಂಕ್‌ನ ಪ್ರತಿನಿಧಿಗಳಿಗೆ ಬೆಂಗಳೂರಿನ ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ. ನಗರದ ರಾಜಕಾಲುವೆ ವ್ಯವಸ್ಥೆ, ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳ ವಿವರ, ಪ್ರವಾಹ ನಿಯಂತ್ರಣಕ್ಕೆ ಬಿಬಿಎಂಪಿ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಲಾಗಿದ್ದು ಜತೆಗೆ ಕೋರಮಂಗಲದ ಕೆ-100 ರಾಜಕಾಲುವೆ ಅಭಿವೃದ್ಧಿ ಯೋಜನೆ ಅನುಷ್ಠಾನದ ಪ್ರದೇಶ ಹಾಗೂ ಕಳೆದ ತಿಂಗಳು ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದ್ದ ಹೊರ ವರ್ತುಲ ರಸ್ತೆಗೂ ಕರೆದುಕೊಂಡು ಹೋಗಿ ಪರಿಸ್ಥಿತಿ ಕುರಿತು ವಿವರಣೆ ನೀಡಲಾಗಿದೆ.
Bengaluru Flood: ಬೆಂಗಳೂರಿನ ನೆರೆಪೀಡಿತ ಪ್ರದೇಶಗಳಲ್ಲಿ ಸಿದ್ದು ಸಂಚಾರ, ಸಮೀಕ್ಷೆ
ಒಂದು ವೇಳೆ ವಿಶ್ವ ಬ್ಯಾಂಕ್‌ನಿಂದ ನೆರವು ನೀಡುವುದಾದರೆ ನಗರದ ಕೆ-100 ಯೋಜನೆ ಮಾದರಿಯಲ್ಲಿ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲಿದೆ. ಇಂದು(ಮಂಗಳವಾರ೦ ನಗರದ ವಿವಿಧೆಡೆ ವಿಶ್ವಬ್ಯಾಂಕ್ ನಿಯೋಗವು ಭೇಟಿ ನೀಡಲಿದ್ದು ಮತ್ತೊಂದು ಸುತ್ತಿನ ಸಭೆ ನಡೆಸಿದಲ್ಲಿ, ಆರ್ಥಿಕ ನೆರವು ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ವಿಶ್ವ ಬ್ಯಾಂಕ್ ನೆರವು ನೀಡಿದ್ರೆ ಅಭಿವೃದ್ಧಿ ಕಾರ್ಯಗಳನ್ನು ನೋಡೋದಾದ್ರೆ
* ರಾಜಕಾಲುವೆ(ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.6 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಜಲಮಾರ್ಗ ಯೋಜನೆ
* ರಾಜಕಾಲುವೆಯನ್ನು ಜಲಮಾರ್ಗವನ್ನಾಗಿ ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ
ಇದೇ ರೀತಿ ಬೆಂಗಳೂರಿನ ಬೇರೆಡೆ ರಾಜಕಾಲುವೆ ಅಭಿವೃದ್ಧಿ ಮಾಡಲು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ. ಈ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯ ಪ್ರತಿಯನ್ನು ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ ಅಂತ ತಿಳಿದು ಬಂದಿದೆ.