Grama Vastavya: ಡಿ.17ರಂದು ಸ್ವಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ವಾಸ್ತವ್ಯ?
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಈ ಸಲ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಡಿ.17 ಮತ್ತು 18ರಂದು ನಡೆಯಲಿದೆ. ಈ ವೇಳೆ, ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರ ಗ್ರಾಮ ವಾಸ್ತವ್ಯ ನಡೆಯಲಿದೆ.
ನಾರಾಯಣ ಹೆಗಡೆ
ಹಾವೇರಿ (ಡಿ.08): ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಈ ಸಲ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಡಿ.17 ಮತ್ತು 18ರಂದು ನಡೆಯಲಿದೆ. ಈ ವೇಳೆ, ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರ ಗ್ರಾಮ ವಾಸ್ತವ್ಯ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಎರಡೂ ದಿನ ಸ್ವಕ್ಷೇತ್ರದಲ್ಲಿ ಇರಲಿದ್ದು, ಕಂದಾಯ ಸಚಿವರ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೂ ಗ್ರಾಮ ವಾಸ್ತವ್ಯದಲ್ಲಿ ಸಚಿವ ಅಶೋಕ್ ಜತೆಗೂಡಬಹುದು ಎಂದು ಹೇಳಲಾಗುತ್ತಿದೆ.
ಆದರೆ, ಮುಖ್ಯಮಂತ್ರಿಯವರು ಕಂದಾಯ ಸಚಿವರ ಜೊತೆ ಗ್ರಾಮ ವಾಸ್ತವ್ಯ ಮಾಡಲಿದ್ದಾರಾ, ಇಲ್ಲವಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಭದ್ರತಾ ಕಾರಣಗಳಿಂದಾಗಿ ಈ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹಾವೇರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಚಿವರ ಗ್ರಾಮ ವಾಸ್ತವ್ಯ ಕುರಿತು ಮಾಹಿತಿ ನೀಡಿದ ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ, ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವರು ಡಿ.17ರಂದು ಬಾಡದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಇದುವರೆಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ.
ಶಾಂತಿ ಕಾಪಾಡಲು ಸಿಎಂ ಬೊಮ್ಮಾಯಿ-ಮಹಾರಾಷ್ಟ್ರ ಸಿಎಂ ಶಿಂಧೆ ಸಮ್ಮತಿ
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ: ಕಂದಾಯ ಸಚಿವರು ಪ್ರತಿ ತಿಂಗಳ ಮೂರನೇ ಶನಿವಾರ ನಡೆಸುತ್ತಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಬಾರಿ ಸಿಎಂ ಅವರ ಸ್ವಕ್ಷೇತ್ರ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಡಿ.17ರಂದು ಅಶೋಕ್ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದು, ಬಾಡ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಅಹವಾಲು ಆಲಿಸಲಿದ್ದಾರೆ. ಬಾಡದ ಕನಕದಾಸರ ಅರಮನೆ ಆವರಣದಲ್ಲಿ ಸಾರ್ವಜನಿಕ ಸಭೆ ಕೂಡ ಆಯೋಜಿಸಲಾಗುತ್ತಿದೆ. ಬಳಿಕ, ರಾತ್ರಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಸ್ವಕ್ಷೇತ್ರ ಆಗಿರುವುದರಿಂದ ಕಂದಾಯ ಸಚಿವರೊಂದಿಗೆ ದಿನವಿಡೀ ಮುಖ್ಯಮಂತ್ರಿಯವರು ಇರಲಿದ್ದಾರೆ. ಡಿ.17 ಮತ್ತು 18 ಎರಡೂ ದಿನ ಸಿಎಂ ಅವರು ತವರು ಕ್ಷೇತ್ರದಲ್ಲೇ ಇರಲಿದ್ದಾರೆ. ಆದರೆ, ಸಿಎಂ ಅವರ ರಾತ್ರಿ ವಾಸ್ತವ್ಯದ ಬಗ್ಗೆ ಈವರೆಗೂ ಯಾವುದೇ ಖಚಿತತೆ ಇಲ್ಲ. ಭದ್ರತಾ ದೃಷ್ಟಿಯಿಂದ ಮುಖ್ಯಮಂತ್ರಿಯವರು ರಾತ್ರಿ ವಾಸ್ತವ್ಯ ಮಾಡುವ ಸಾಧ್ಯತೆ ಕಡಿಮೆ. ಒಂದು ವೇಳೆ, ಸಿಎಂ ಅವರು ಕಂದಾಯ ಸಚಿವರ ಜೊತೆ ಗ್ರಾಮ ವಾಸ್ತವ್ಯ ಮಾಡುವ ನಿರ್ಧಾರ ಕೈಗೊಂಡರೆ, ಆ ಬಗ್ಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತವರು ಕ್ಷೇತ್ರದತ್ತ ಸಿಎಂ ಗಮನ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರು ಸ್ವಕ್ಷೇತ್ರ ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಕ್ಷೇತ್ರ ಪ್ರವಾಸಕ್ಕೂ ಆದ್ಯತೆ ನೀಡುತ್ತಿದ್ದಾರೆ. ಕಳೆದ ಭಾನುವಾರ ಶಿಗ್ಗಾಂವಿಯಲ್ಲಿ ಇಡೀ ದಿನ ಕಳೆದಿದ್ದ ಸಿಎಂ ಬೊಮ್ಮಾಯಿ, ರಾತ್ರಿ 10 ಗಂಟೆವರೆಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದರು. ಮತ್ತೆ ಡಿ.17ಕ್ಕೆ ಕ್ಷೇತ್ರಕ್ಕೆ ಬರಲಿರುವ ಬೊಮ್ಮಾಯಿಯವರು, ಎರಡು ದಿನ ಕ್ಷೇತ್ರದಲ್ಲಿಯೇ ಇದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಾಧ್ಯತೆಯಿದೆ. ಡಿ.19ರಿಂದ ಬೆಳಗಾವಿ ಅಧಿವೇಶನ ಆರಂಭವಾಗಲಿದ್ದು, ತವರು ಕ್ಷೇತ್ರದಿಂದ ನೇರವಾಗಿ ಬೆಳಗಾವಿಗೆ ತೆರಳುವ ಸಾಧ್ಯತೆಯಿದೆ.
ಫೈನಲ್ ಆಗಿಲ್ಲ
- ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಅಶೋಕ್
- ಈ ಬಾರಿ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ವಾಸ್ತವ್ಯ
- ಡಿ.17, 18ರಂದು ಎರಡೂ ದಿನ ಹಳ್ಳಿಯಲ್ಲಿರುವ ಅಶೋಕ್
- ಅದೇ ವೇಳೆ ಶಿಗ್ಗಾಂವಿಯಲ್ಲೇ ಇರಲಿದ್ದಾರೆ ಸಿಎಂ ಬೊಮ್ಮಾಯಿ
- ಅಶೋಕ್ ಜತೆ ಅವರೂ ವಾಸ್ತವ್ಯ ಹೂಡಬಹುದು ಎಂಬ ಲೆಕ್ಕಾಚಾರ
- ಈ ಬಗ್ಗೆ ಖಚಿತ ಮಾಹಿತಿ ಇಲ್ಲ ಎನ್ನುವ ಹಾವೇರಿ ಜಿಲ್ಲಾಧಿಕಾರಿ
- ಭದ್ರತಾ ದೃಷ್ಟಿಯಿಂದ ಸಿಎಂ ವಾಸ್ತವ್ಯ ಹೂಡುವ ಸಾಧ್ಯತೆ ಕಡಿಮೆ
- ಹಾಗೊಂದು ವೇಳೆ ತಂಗಲು ನಿರ್ಧರಿಸಿದರೆ ಅಗತ್ಯ ವ್ಯವಸ್ಥೆ: ಡೀಸಿ
ರಾಜ್ಯದ ಸಾಧಕ ಕ್ರೀಡಾಳುಗಳಿಗೆ ಸರ್ಕಾರಿ ನೌಕರಿ: ಸಿಎಂ ಬೊಮ್ಮಾಯಿ
‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವರು ಡಿ.17ರಂದು ಶಿಗ್ಗಾಂವಿ ತಾಲೂಕು ಬಾಡದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಇದುವರೆಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಬಂದಿಲ್ಲ.
- ರಘುನಂದನಮೂರ್ತಿ ಜಿಲ್ಲಾಧಿಕಾರಿ ಹಾವೇರಿ