Asianet Suvarna News Asianet Suvarna News

ರಾಜ್ಯದ ಸಾಧಕ ಕ್ರೀಡಾಳುಗಳಿಗೆ ಸರ್ಕಾರಿ ನೌಕರಿ: ಸಿಎಂ ಬೊಮ್ಮಾಯಿ

ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ವಿಜೇತರನ್ನು ಸರ್ಕಾರಿ ಉದ್ಯೋಗಕ್ಕೆ ನೇರವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. 

Govt Jobs for Pro Sportspersons of Karnataka Says CM Basavaraj Bommai gvd
Author
First Published Dec 7, 2022, 7:44 AM IST

ಬೆಂಗಳೂರು (ಡಿ.07): ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ವಿಜೇತರನ್ನು ಸರ್ಕಾರಿ ಉದ್ಯೋಗಕ್ಕೆ ನೇರವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಮಂಗಳವಾರ ರಾಜಭವನದಲ್ಲಿ ಏರ್ಪಡಿಸಿದ್ದ ಕ್ರೀಡಾ ಸಾಧಕರಿಗೆ 2021ನೇ ಸಾಲಿನ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಹಾಗೂ 2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಅವರು ಮಾತನಾಡಿದರು.

ಪದವೀಧರರಾದ ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಗ್ರೂಪ್‌ ಎ ಉದ್ಯೋಗ, ಏಷ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ ಪದಕ ವಿಜೇತರಿಗೆ ಗ್ರೂಪ್‌ ಬಿ ಉದ್ಯೋಗ, ಇದಕ್ಕಿಂತ ಕಡಿಮೆ ಸ್ತರದ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ಗ್ರೂಪ್‌ ಸಿ ಹಾಗೂ ಡಿ ಉದ್ಯೋಗ ನೀಡಲಾಗುವುದು. ಕ್ರೀಡಾಪಟುಗಳಿಗೆ ಎಲ್ಲ ಇಲಾಖೆಯಲ್ಲೂ ಉದ್ಯೋಗ ನೀಡುವ ನೀತಿ ಕರ್ನಾಟಕದ ಹೊರತು ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ ಎಂದು ಸ್ಪಷ್ಪಡಿಸಿದರು.

ಶಾಲಾ ಮಕ್ಕಳಿಗೆ ವಿಶೇಷ ಬಸ್‌ ಸೌಲಭ್ಯ: ಸಿಎಂ ಬೊಮ್ಮಾಯಿ

ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಕ್ರೀಡಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ನೇತೃತ್ವದ ಆಯ್ಕೆ ಸಮಿತಿಯ ಮೂಲಕ ನೇಮಕ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಮಹತ್ವ ನೀಡುತ್ತಿದೆ. ಗೃಹ ಇಲಾಖೆ ಉದ್ಯೋಗಗಳಲ್ಲಿ ಈಗಾಗಲೇ ಶೇ.2 ಮೀಸಲಾತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಗ್ರಾಪಂ ಮಟ್ಟದಲ್ಲಿ ಕ್ರೀಡಾಕೂಟ: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತಿದ್ದು, ಬಳಿಕ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿ ರಾಜ್ಯಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಖೋಖೋ, ಕಬಡ್ಡಿ, ಕುಸ್ತಿ, ವಾಲಿಬಾಲ್‌, ಕಂಬಳ ಮತ್ತಿತರ ಆಟಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಆ.15ರಂದು 75 ಕ್ರೀಡಾಪಟುಗಳನ್ನು ಸರ್ಕಾರ ದತ್ತು ಪಡೆದಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ 10 ಲಕ್ಷ ರು. ನೀಡಿದ್ದು, ಅವಶ್ಯಕವಾದರೆ ಇನ್ನೂ ಹೆಚ್ಚಿನ ಹಣ ನೀಡಲು ಸಿದ್ಧ. ಮುಂದಿನ ದಿನಗಳಲ್ಲಿ ಯುವ ನೀತಿ ಜಾರಿಗೆ ತರಲಾಗುವುದು. ಯವಜನರ ಸಬಲೀಕರಣ ಮತ್ತು ಕ್ರೀಡೆಗೆ ಸಮಾನ ಮಹತ್ವ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್‌ ಗೆಹಲೋಥ್‌ ಮಾತನಾಡಿ, ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿ ನೀಡುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪರಿಚಯಿಸುವುದರ ಜೊತೆಗೆ ಕ್ರೀಡೆಯನ್ನು ಪಠ್ಯಕ್ರಮದ ಒಂದು ಭಾಗವನ್ನಾಗಿ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಾಸಕರಾದ ರಿಜ್ವಾನ್‌ ಅರ್ಷದ್‌, ಡಾ.ಕೆ.ಗೋವಿಂದರಾಜು, ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಆಯುಕ್ತ ಮುಲ್ಲೈ ಮುಹಿಲನ್‌ ಉಪಸ್ಥಿತರಿದ್ದರು.

ಯಾವ ನೌಕರಿಗೆ ನೇಮಕ?
ಗ್ರೂಪ್‌ ಎ:
ಜಿಲ್ಲಾಧಿಕಾರಿ, ಎಸ್‌ಪಿ, ಇಲಾಖೆಗಳ ಮುಖ್ಯಸ್ಥರು, ಸಿಇಒಗಳು, ಪ್ರೊಫೆಸರ್‌, ಅಸಿಸ್ಟೆಂಟ್‌ ಪ್ರೊಫೆಸರ್‌, ಮೆಡಿಕಲ್‌ ಆಫೀಸರ್‌, ಸಹಾಯಕ ಆಯುಕ್ತ, ಅಸಿಸ್ಟೆಂಟ್‌ ಲೇಬರ್‌ ಕಮಿಷನರ್‌, ಇನ್ಷೂರೆನ್ಸ್‌ ಮೆಡಿಕಲ್‌ ಆಫೀಸರ್‌, ಸೀನಿಯರ್‌ ಅಸಿಸ್ಟೆಂಟ್‌ ಡೈರೆಕ್ಟರ್‌ ಆಫ್‌ ಹೆಲ್ತ್‌ ಸೇರಿದಂತೆ ಉಪ ನಿರ್ದೇಶಕರು ಮತ್ತು ನಂತರದ ಹುದ್ದೆಗಳು.

ಗ್ರೂಪ್‌ ಬಿ: ತಹಶೀಲ್ದಾರ್‌, ಅಸಿಸ್ಟೆಂಟ್‌ ಡೈರೆಕ್ಟರ್‌, ಪೊಲೀಸ್‌ ಇನ್ಸ್‌ಪೆಕ್ಟರ್‌, ಭಾಷಾಂತರಕಾರ, ನಗರ ಯೋಜನಾಧಿಕಾರಿ, ಕಾರ್ಮಿಕ ಅಧಿಕಾರಿ, ಅಬಕಾರಿ ಉಪ ಅಧೀಕ್ಷಕ, ಉದ್ಯೋಗಾಧಿಕಾರಿ, ಸಹಾಯಕ ಖಜಾನೆ ಅಧಿಕಾರಿ, ವಿಭಾಗಾಧಿಕಾರಿ.

ಗ್ರೂಪ್‌ ಸಿ: ಜೂನಿಯರ್‌ ಎಂಜಿನಿಯರ್‌, ಎಲೆಕ್ಟ್ರಿಷಿಯನ್‌, ಹೆಲ್ತ್‌ ಇನ್ಸ್‌ಪೆಕ್ಟರ್‌, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಶಿಕ್ಷಕ, ಚಾಲಕ, ನಿರ್ವಾಹಕ.

ಗ್ರೂಪ್‌ ಡಿ: ಅಟೆಂಡರ್‌ಗಳು

ಆಯುಷ್ಮಾನ್‌ ಐಡಿ ಕಾರ್ಡ್‌ಗೆ ನಾಳೆ ಸಿಎಂ ಚಾಲನೆ: ಸಚಿವ ಸುಧಾಕರ್‌

ಅತ್ಯುತ್ತಮ 15 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ, 8 ಕ್ರೀಡಾರತ್ನ, 6 ಜನರಿಗೆ ಜೀವಮಾನ ಸಾಧನೆ ಪ್ರಶಸ್ತಿ ಮತ್ತು 3 ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಈಗಾಗಲೇ ಕ್ರೀಡೆಗಾಗಿ 504 ಕೋಟಿ ರು. ಬಿಡುಗಡೆ ಮಾಡಿದೆ.
- ಡಾ.ಕೆ.ಸಿ.ನಾರಾಯಣಗೌಡ, ಕ್ರೀಡಾ ಸಚಿವ

ಏಕಲವ್ಯ ಪ್ರಶಸ್ತಿಗೆ ಭಾಜನವಾಗಿದ್ದನ್ನು ಮರೆಯಲು ಸಾಧ್ಯವಿಲ್ಲ. ತುಂಬಾ ಸಂತೋಷವಾಗಿದೆ. ನನ್ನ ಈ ಸಾಧನೆಗೆ ಪ್ರೋತ್ಸಾಹ ನೀಡಿದ ಅಪ್ಪ-ಅಮ್ಮ, ಸ್ನೇಹಿತರು, ತರಬೇತುದಾರರು ಸೇರಿದಂತೆ ಎಲ್ಲರಿಗೂ ಧನ್ಯವಾದಗಳು.
- ಸಾಕ್ಷತ್‌, ನೆಟ್‌ಬಾಲ್‌ನಲ್ಲಿ ಏಕಲವ್ಯ ಪ್ರಶಸ್ತಿಗೆ ಭಾಜನರಾದವರು

Follow Us:
Download App:
  • android
  • ios