ಕಾರ್ಮಿಕರ ಧನ ಸಹಾಯ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಾರಿ ಮಾಡಲಾಗಿರುವ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುವ ಧನ ಸಹಾಯದಲ್ಲಿ ಏರಿಕೆ ಮಾಡಿರುವುದರ ಜತೆಗೆ ನೋಂದಣಿ ವಂತಿಗೆ ರಿಯಾಯಿತಿ, ಜ್ಯೇಷ್ಠತೆ ಆಧಾರದಲ್ಲಿ ಟೂಲ್ ಕಿಟ್ ವಿತರಣೆ ಸೇರಿದಂತೆ ಹಲವು ಮಹತ್ವ ತೀರ್ಮಾನಗಳನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ.
ಬೆಂಗಳೂರು (ಜು.23): ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಾರಿ ಮಾಡಲಾಗಿರುವ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುವ ಧನ ಸಹಾಯದಲ್ಲಿ ಏರಿಕೆ ಮಾಡಿರುವುದರ ಜತೆಗೆ ನೋಂದಣಿ ವಂತಿಗೆ ರಿಯಾಯಿತಿ, ಜ್ಯೇಷ್ಠತೆ ಆಧಾರದಲ್ಲಿ ಟೂಲ್ ಕಿಟ್ ವಿತರಣೆ ಸೇರಿದಂತೆ ಹಲವು ಮಹತ್ವ ತೀರ್ಮಾನಗಳನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ. ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಂಡಿಸಿದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು.
ಶ್ರಮಿಕ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು ಎರಡು ಸಾವಿರ ರು.ನಿಂದ ಮೂರು ಸಾವಿರಕ್ಕೆ ಏರಿಕೆ, ಫಲಾನುಭವಿಗಳ ನೋಂದಣಿ ವೇಳೆ ಮಂಡಳಿಗೆ ಪಾವತಿಸಬೇಕಿರುವ ವಂತಿಗೆ ಹಣ ಸಂಪೂರ್ಣ ಮನ್ನಾ ಮಾಡುವ, ಶ್ರಮ ಸಾಮರ್ಥ್ಯ ಸೌಲಭ್ಯದಡಿ ಮಂಡಳಿಯ ಫಲಾನುಭವಿಗಳು ತರಬೇತಿ ಪಡೆಯದೆಯೇ ಜ್ಯೇಷ್ಠತೆ ಆಧಾರದಲ್ಲಿ ಟೂಲ್ ಕಿಟ್ ಪಡೆಯಲು ಗೃಹ ಭಾಗ್ಯ ಸೌಲಭ್ಯದಡಿ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಲು ನೀಡುವ ಧನ ಸಹಾಯ 10 ಕಂತುಗಳಲ್ಲಿ ನೀಡಲು ಸರಳೀಕರಿಸಿ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಲಾಯಿತು.
ದಿಲ್ಲಿ ಭೇಟಿ ಬಳಿಕ ನಿಗಮ, ಮಂಡಳಿ ನೇಮಕ: ಸಿಎಂ ಬೊಮ್ಮಾಯಿ
ಹೆರಿಗೆ ಸೌಲಭ್ಯದಡಿ ಹೆರಿಗೆ ಸಹಾಯಧನವನ್ನು ಗಂಡು-ಹೆಣ್ಣು ಎಂಬ ಭೇದ-ಭಾವ ಇಲ್ಲದೆ 50 ಸಾವಿರ ರು.ಗೆ ಹೆಚ್ಚಿಸುವ ಮತ್ತು ಅಂತಿಮ ಸಂಸ್ಕಾರ ವೆಚ್ಚ ಸೌಲಭ್ಯದಡಿ ನೀಡಲಾಗುತ್ತಿರುವ ಸಹಾಯಧನ ಮೊತ್ತವನ್ನು 50 ಸಾವಿರ ರು.ನಿಂದ 71 ಸಾವಿರ ರು. ನೀಡುವುದು, ಕೋವಿಡ್‌ನಿಂದ ಫಲಾನುಭವಿ ಮೃತಪಟ್ಟಸಂದರ್ಭದಲ್ಲಿ ಮೃತರ ಅವಲಂಬಿತರಿಗೆ 2 ಲಕ್ಷ ರು. ಸಹಾಯಧನ ನೀಡಲು ಸಂಪುಟದ ಎದುರು ಮಂಡಿಸಲಾಗಿದ್ದ ತಿದ್ದುಪಡಿಗೆ ಅನುಮೋದನೆ ದೊರಕಿದೆ.
ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ: ಶಾಲಾ ಮಕ್ಕಳಿಗೆ ಸಿಕ್ತು ಗುಡ್ ನ್ಯೂಸ್
ಕಾರ್ಮಿಕ ವರ್ಗ ಮತ್ತು ಅವರ ಅವಲಂಬಿತರ ಶ್ರೇಯೋಭಿವೃದ್ಧಿಗೆ ಹೊಸ ಯೋಜನೆಗಳ ಜಾರಿಗೆ, ಯೋಜನೆಗಳನ್ನು ಇನ್ನಷ್ಟುಸಶಕ್ತಗೊಳಿಸುವ ತಿದ್ದುಪಡಿಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ಉದಾರತೆ ಮರೆದಿದೆ. ಈ ತಿದ್ದುಪಡಿ ಕ್ರಮಗಳಿಂದ ರಾಜ್ಯದ ಕಾರ್ಮಿಕ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
-ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವ