ದಿಲ್ಲಿ ಭೇಟಿ ಬಳಿಕ ನಿಗಮ, ಮಂಡಳಿ ನೇಮಕ: ಸಿಎಂ ಬೊಮ್ಮಾಯಿ

ಶೀಘ್ರದಲ್ಲೇ ದೆಹಲಿ ಪ್ರವಾಸ ಕೈಗೊಳ್ಳಲಿದ್ದೇನೆ. ಆ ನಂತರ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮಾಡುತ್ತೇವೆ ಎಂದು ಹೇಳಿದ ಸಿಎಂ  

CM Basavaraj Bommai Talks Over Chairman of Boards and Corporation grg

ಕೆ.ಆರ್‌.ಪೇಟೆ/ಬೆಂಗಳೂರು(ಜು.22): ಕಳೆದ ವಾರ ಸರ್ಕಾರ ರದ್ದುಗೊಳಿಸಿದ್ದ 50ಕ್ಕೂ ಹೆಚ್ಚು ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಹೊಸಬರ ನೇಮಕಾತಿಯನ್ನು ದೆಹಲಿ ಭೇಟಿ ನಂತರ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಶೀಘ್ರದಲ್ಲೇ ದೆಹಲಿ ಪ್ರವಾಸ ಕೈಗೊಳ್ಳಲಿದ್ದೇನೆ. ಆ ನಂತರ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮಾಡುತ್ತೇವೆ ಎಂದು ಹೇಳಿದರು. ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತೂ ದೆಹಲಿ ಭೇಟಿ ವೇಳೆ ಚರ್ಚಿಸುತ್ತೇನೆ ಎಂದರು.

ಸದ್ಯಕ್ಕಿಲ್ಲ ಈಶ್ವರಪ್ಪಗೆ ಸ್ಥಾನ?: 

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿದ ಉಡುಪಿ ಪೊಲೀಸರು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣದ ತೀರ್ಪು ಹೊರಬೀಳಲಿ. ನಂತರ ಸಂಪುಟ ಸೇರ್ಪಡೆ ವಿಚಾರ ನೋಡೋಣ ಎಂದಷ್ಟೇ ಹೇಳಿದರು.

ನಿಗಮ-ಮಂಡಳಿ ಅಧ್ಯಕ್ಷ ನೇಮಕ ರದ್ದು: ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ..!

ಕೋವಿಂದ್‌ಗೆ ಬೀಳ್ಕೊಡಲು ಇಂದು ಬೊಮ್ಮಾಯಿ ದಿಲ್ಲಿಗೆ

ಬೆಂಗಳೂರು: ನಿರ್ಗಮಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಬೀಳ್ಕೊಡುಗೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆಯೋಜಿಸಿರುವ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣಿಸಲಿರುವ ಬೊಮ್ಮಾಯಿ ಅವರು ರಾತ್ರಿ ಚಾಣಕ್ಯಪುರಿಯ ಅಶೋಕ ಹೋಟೆಲ್‌ನಲ್ಲಿ ಆಯೋಜಿಸಿರುವ ಭೋಜನ ಕೂಟದಲ್ಲಿ ಪಾಲ್ಗೊಂಡು, ಮರುದಿನ ಶನಿವಾರ ಬೆಳಗ್ಗೆ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಬಳಿಕ ಭಾನುವಾರ ಸಂಜೆ ಮತ್ತೆ ಮೂರು ದಿನಗಳ ಭೇಟಿಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊಸ ರಾಷ್ಟ್ರಪತಿಗೆ ಸಿಎಂ ಅಭಿನಂದನೆ

ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಆಯ್ಕೆಯಾದ ದ್ರೌಪದಿ ಮುರ್ಮು ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ದ್ರೌಪದಿ ಮರ್ಮು ಅವರು ಭಾರೀ ಬಹುಮತ ಪಡೆಯುವುದರೊಂದಿಗೆ ಹೊಸ ದಾಖಲೆ ಬರೆದಿದ್ದಾರೆ. ಸಮಾಜದ ಕೆಳಸ್ತರದಿಂದ ಬಂದು ರಾಷ್ಟ್ರದ ಪರಮೋನ್ನತ ಹುದ್ದೆಯನ್ನು ಅವರು ಅಲಂಕರಿಸುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತ. ನೂತನ ಹುದ್ದೆಯಲ್ಲಿ ಅವರಿಗೆ ಸಕಲ ಯಶಸ್ಸು ಸಿಗಲಿ. ಅವರ ಅನುಭವ ಸಂಪತ್ತು, ಮುತ್ಸದ್ಧಿತನದ ಪ್ರಯೋಜನ ದೇಶಕ್ಕೆ ದೊರಕುವಂತಾಗಲಿ ಎಂದು ಆಶಿಸಿದ್ದಾರೆ.
 

Latest Videos
Follow Us:
Download App:
  • android
  • ios