Asianet Suvarna News Asianet Suvarna News

ರೈಲು ಯೋಜನೆಗಳ ಜಾರಿಗೆ ಜಂಟಿ ತಂಡ: ಸಿಎಂ, ರೈಲ್ವೆ ಸಚಿವ ನಿರ್ಧಾರ

ರಾಜ್ಯದ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತೀರ್ಮಾನಿಸಿದ್ದಾರೆ.

cm basavaraj bommai and union minister ashwini vaishnaw reviewed railway project gvd
Author
First Published Nov 20, 2022, 2:05 PM IST

ಬೆಂಗಳೂರು (ನ.20): ರಾಜ್ಯದ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತೀರ್ಮಾನಿಸಿದ್ದಾರೆ. ಶನಿವಾರ ರೇಸ್‌ಕೋರ್ಸ್‌ ರಸ್ತೆಯಲ್ಲಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಬೊಮ್ಮಾಯಿ ಮತ್ತು ಅಶ್ವಿನಿ ವೈಷ್ಣವ್‌ ಅವರು ರೈಲ್ವೆ ಯೋಜನೆಗಳ ಕುರಿತು ಪರಿಶೀಲನಾ ಸಭೆ ನಡೆಸಿದರು. ರಾಜ್ಯದಲ್ಲಿ ಕೇಂದ್ರ ಸರ್ಕಾರದೊಂದಿಗೆ 50:50ರ ವೆಚ್ಚ ಹಂಚಿಕೆ ಆಧಾರದಲ್ಲಿ ಒಂಭತ್ತು ಹೊಸ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 

ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಉತ್ತಮ ಸಮನ್ವಯ ಸಾಧಿಸುವ ಮತ್ತು ತೊಡಕುಗಳನ್ನು ತ್ವರಿತವಾಗಿ ನಿವಾರಿಸುವ ಉದ್ದೇಶದಿಂದ ಅಧಿಕಾರಿಗಳ ತಂಡ ರಚಿಸುವ ಬಗ್ಗೆ ನಿರ್ಧರಿಸಲಾಯಿತು. ಈ ವೇಳೆ ಮುಖ್ಯಮಂತ್ರಿಗಳು, ರೈಲ್ವೆ ಯೋಜನೆಗಳಿಗೆ ಅಗತ್ಯ ಇರುವ ಭೂ ಸ್ವಾಧೀನಕ್ಕೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅತಿ ಹೆಚ್ಚು ಬೇಡಿಕೆಯ ಮತ್ತು ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಆದ್ಯತೆಯ ಮೇರೆಗೆ ಭೂಸ್ವಾಧೀನ ಮಾಡಬೇಕು ಎಂದು ನಿರ್ದೇಶನ ನೀಡಿದರು. 

ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಬೆಂಗ್ಳೂರಲ್ಲಿ ಸ್ಮಾರಕ: ಸಿಎಂ ಬೊಮ್ಮಾಯಿ

ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರ ರೈಲ್ವೆ ಯೋಜನೆಗಳಿಗೆ ಪರಸ್ಪರ ಪೂರಕವಾಗಿ ಅನುದಾನ ಬಿಡುಗಡೆ ಮಾಡಬೇಕು. ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡುವುದರಿಂದ ನಿಗದಿತ ಕಾಲಾವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯ ಎಂದರು. ಒಂಭತ್ತು ರೈಲ್ವೆ ಯೋಜನೆಗಳಿಗೆ ಒಟ್ಟು 15 ಸಾವಿರ ಎಕರೆ ಭೂಮಿಯ ಅಗತ್ಯವಿದ್ದು, ಈವರೆಗೆ ಒಂಭತ್ತು ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಆರು ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಡಬೇಕಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮಾತನಾಡಿ, ರೈಲ್ವೆ ಯೊಜನೆಗಳ ತ್ವರಿತ ಅನುಷ್ಠಾನ ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಹೆಚ್ಚಿನ ಸಮನ್ವಯದೊಂದಿಗೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದರು. ಇದೇ ವೇಳೆ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗದಗ-ವಾಡಿ, ರಾಯದುರ್ಗ-ತುಮಕೂರು, ಗಿಣಿಗೇರಾ-ರಾಯಚೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ಬಾಗಲಕೋಟೆ-ಕುಡಚಿ, ಕಡೂರು-ಚಿಕ್ಕಮಗಳೂರು-ಬೇಲೂರು, ಹಾಸನ-ಬೇಲೂರು, ಶಿವಮೊಗ್ಗ-ರಾಣೆಬೆನ್ನೂರು, ಮಾರಿಕುಪ್ಪಂ-ಕುಪ್ಪಂ, ಬೆಳಗಾವಿ-ಧಾರವಾಡ ಸೇರಿದಂತೆ ಇತರೆ ಹೊಸ ರೈಲು ಮಾರ್ಗಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲಾಯಿತು. 

ಮತ ಪಟ್ಟಿ ಪರಿಷ್ಕರಣೆ ಚಿಲುಮೆಗೆ ಸರ್ಕಾರ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

ಅಲ್ಲದೇ, ಬೆಂಗಳೂರು ಸಬ್‌ ಅರ್ಬನ್‌ ರೈಲು ಮಾರ್ಗ, ರೈಲು ಮಾರ್ಗಗಳ ವಿದ್ಯುದೀಕರಣ ಮೊದಲಾದ ವಿಷಯಗಳ ಕುರಿತು ಸಹ ಚರ್ಚಿಸಲಾಯಿತು. 2023ರ ಮಾರ್ಚ್‌ನಲ್ಲಿ ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ಗುರಿ ಇದ್ದು, ಇದಕ್ಕೆ ಪೂರಕವಾಗಿ ರೈಲು ಮಾರ್ಗ ವಿದ್ಯುದೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕೆಪಿಟಿಸಿಎಲ್‌ಗೆ ಸೂಚನೆ ನೀಡಲಾಯಿತು.

Follow Us:
Download App:
  • android
  • ios