ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಬೆಂಗ್ಳೂರಲ್ಲಿ ಸ್ಮಾರಕ: ಸಿಎಂ ಬೊಮ್ಮಾಯಿ
ತೆರೆಮರೆಯಲ್ಲೇ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸಂಖ್ಯೆ ದೊಡ್ಡದಿದೆ. ಇಂಥ ಜಗತ್ತಿಗೆ ಪರಿಚಿತರಲ್ಲದ ಸ್ವಾತಂತ್ರ್ಯಹೋರಾಟಗಾರರಿಗಾಗಿ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳೂರು (ನ.20): ತೆರೆಮರೆಯಲ್ಲೇ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸಂಖ್ಯೆ ದೊಡ್ಡದಿದೆ. ಇಂಥ ಜಗತ್ತಿಗೆ ಪರಿಚಿತರಲ್ಲದ ಸ್ವಾತಂತ್ರ್ಯಹೋರಾಟಗಾರರಿಗಾಗಿ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಬಾವುಟಗುಡ್ಡೆಯಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಇದಕ್ಕೂ ಮೊದಲು ಸುದ್ದಿಗಾರರ ಜತೆಗೆ ಮಾತನಾಡಿ ಈ ವಿಚಾರ ತಿಳಿಸಿದರು.
ಸದ್ದಿಲ್ಲದೆ ಸ್ವಾತಂತ್ರ್ಯ ಹೋರಾಟ ನಡೆಸಿದವರ ಬಗ್ಗೆ ಯಾರೂ ಬರೆಯಲಿಲ್ಲ. ಇತಿಹಾಸದಲ್ಲಿ ಇಲ್ಲದಿರುವ ಅಂಥವರಲ್ಲಿ ನಮ್ಮ ಕೆದಂಬಾಡಿ ರಾಮಯ್ಯ ಗೌಡರು ಕೂಡ ಒಬ್ಬರು. ಇಂಥ ನೂರಾರು ಜನ ನಮ್ಮ ರಾಜ್ಯದಲ್ಲಿ ಇದ್ದಾರೆ. ಅವರ ಹೋರಾಟ ನಮಗೆ ಪ್ರೇರಣೆಯಾಗಬೇಕು. ಇಂಥವರಿಗಾಗಿ ಸ್ಮಾರಕ ಮಾಡಲು ನನಗೆ ಸ್ಪೂರ್ತಿ ಬಂದಿದೆ. ಬೆಂಗಳೂರಿನಲ್ಲಿ ಇಂಥವರಿಗಾಗಿಯೇ ಸ್ಮಾರಕ ನಿರ್ಮಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನೂ ಬೆಂಗಳೂರಿನಲ್ಲಿ ನಿರ್ಮಾಣ ಮಾಡುವ ಜತೆಗೆ ಅವರ ಹೋರಾಟದ ವಿಚಾರವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದರು.
ಮತ ಪಟ್ಟಿ ಪರಿಷ್ಕರಣೆ ಚಿಲುಮೆಗೆ ಸರ್ಕಾರ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ
ಸಾರ್ವರ್ಕರ್ ಕಾಲಪಾನಿಯ ಕ್ರೂರ ಶಿಕ್ಷೆಗೆ ಒಳಗಾಗಿದ್ದರು. ಅಲ್ಲೂ ಅವರನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಅಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ನಾವು ಯಾವತ್ತೂ ಮರೆಯಬಾರದು. ಅದನ್ನ ಮರೆತವರು ದೇಶ ಭಕ್ತರಲ್ಲ ಎಂದು ಅವರು ಹೇಳಿದರು. ಕರಾವಳಿ ಭಾಗದ ಜನರ ನಿರೀಕ್ಷೆಯಂತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ರಾಣಿ ಹಾಗೂ ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಾಮಕರಣ ಬಗ್ಗೆಯೂ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಚಿವರಾದ ಡಾ.ಅಶ್ವತ್ಥ ನಾರಾಯಣ್, ಅಂಗಾರ, ಸಂಸದ ಡಿ.ವಿ.ಸದಾನಂದ ಗೌಡ ಇತರರಿದ್ದರು.
ಶಾಸಕ ಖಾದರ್ ಮಾತಿಗೆ ಸಿಎಂ ಟಾಂಗ್!: ವಿಧಾನಸಭಾ ವಿಪಕ್ಷ ಉಪ ನಾಯಕ ಹಾಗೂ ಶಾಸಕ ಯು.ಟಿ.ಖಾದರ್ ಭಾಷಣದಲ್ಲಿ ಹೇಳಿದ ಮಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ ಟಾಂಗ್ ನೀಡಿದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ಹಾಗೂ ಮಂಗಳೂರು ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿಡುವ ಬೇಡಿಕೆಯನ್ನು ಈಡೇರಿಸಬೇಕು ಎಂದು ಯು.ಟಿ.ಖಾದರ್ ಭಾಷಣದಲ್ಲಿ ಆಗ್ರಹಿಸಿದ್ದರು. ಅಲ್ಲದೆ ಜಾತಿ, ಧರ್ಮ ಮೀರಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಾತಿನಿಧ್ಯ ಸಿಗಬೇಕು ಎಂದಿದ್ದರು.
ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದೆ ನಿಮ್ಮದೇ ಆಡಳಿತ ಇತ್ತು. ನೀವೇ ಮಾಡಿ ಅದರ ಲಾಭವನ್ನು ಸುಲಭವಾಗಿ ಪಡೆಯಬಹುದಿತ್ತಲ್ಲ. ಯಾಕೆ ಮಾಡಿಲ್ಲ, ಪುಕ್ಕಟೆಯಾಗಿ ಸಿಗುವುದು ಸಲಹೆ ಸೂಚನೆ ಮಾತ್ರ ಎಂದು ಸಿಎಂ ಟಾಂಗ್ ನೀಡಿದರು. ಯು.ಟಿ.ಖಾದರ್ ಒಳ್ಳೆಯ ಭಾಷಣ ಮಾಡುತ್ತಾರೆ, ಅವರ ಭಾಷಣದಲ್ಲಿ ಒಳಾರ್ಥ ಇರುತ್ತದೆ. ಖಾದರ್‌ರ ಆತ್ಮೀಯ ಸ್ನೇಹಿತನಾಗಿ ನನಗೆ ಅವರ ಒಳಾರ್ಥ ಗೊತ್ತು. ವಿಧಾನಸಭೆಯಲ್ಲಿ ಕೆಲವು ಮಾತನಾಡಬೇಕು, ಆದರೆ ಈ ಸಭೆ ಅತ್ಯಂತ ಪವಿತ್ರವಾದ್ದು. ಇಲ್ಲಿ ಎಲ್ಲ ವರ್ಗದವರೂ ಇದ್ದಾರೆ ಎಂದರು.
ವಾಟರ್‌ಗೇಟ್ ರೀತಿ ವೋಟರ್‌ಗೇಟ್ ಹಗರಣ: ಸಿದ್ದರಾಮಯ್ಯ
ಏನಿದು ಶೌರ್ಯದ ಪ್ರತಿಮೆ?: 1837ರಲ್ಲಿ ದ.ಕ. ಜಿಲ್ಲೆಯ ಸುಳ್ಯದ ಕೆದಂಬಾಡಿ ರಾಮಯ್ಯ ಗೌಡರು ರೈತರ ಸೈನ್ಯದೊಂದಿಗೆ ಮಂಗಳೂರಿಗೆ ಬಂದು, ಇಲ್ಲಿನ ಬಾವುಟಗುಡ್ಡೆಯಲ್ಲಿ ಬ್ರಿಟಿಷ್ ಧ್ವಜ ಇಳಿಸಿ, ನಮ್ಮದೇ ಧ್ವಜ ಅರಳಿಸಿ 13 ದಿನಗಳ ಕಾಲ ಅಧಿಕಾರ ನಡೆಸಿದರು. ಬಳಿಕ ಮತ್ತಷ್ಟುಬ್ರಿಟಿಷ್ ಸೈನ್ಯ ಆಗಮಿಸಿ, ರಾಮಯ್ಯ ಗೌಡ ಮತ್ತಿತರರನ್ನು ಹಿಮ್ಮೆಟ್ಟಿಸಿ, ಅವರನ್ನು ಬಂಧಿಸಿ, ಸಹಚರರ ಜತೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಅವರನ್ನು ನೇಣಿಗೆ ಏರಿಸಲಾಯಿತು. ಬಳಿಕ ಶವವನ್ನು ಹಾಗೆಯೇ ಬಿಡಲಾಯಿತು. ರೈತ ಯೋಧರನ್ನು ಗಲ್ಲಿಗೇರಿಸಿದ ಸ್ಥಳವನ್ನು ಭೀಕರ ರಣಕಟ್ಟೆಎಂದು ಕರೆಯುತ್ತಿದ್ದುದು ಈಗ ಬಿಕರ್ನಕಟ್ಟೆಎಂದಾಗಿದೆ. ಜಿಲ್ಲೆಯಲ್ಲಿ ಬ್ರಿಟಿಷರನ್ನು ಓಡಿಸಿ ಕೆಲವು ದಿನಗಳ ಮಟ್ಟಿಗೆ ಅಧಿಕಾರ ನಡೆಸಿದ ಕೆದಂಬಾಡಿ ರಾಮಯ್ಯ ಗೌಡರ ನೆನಪಿನಲ್ಲಿ ಬಾವುಟಗುಡ್ಡೆಯಲ್ಲಿ ಅವರದೇ ಕಂಚಿನ ಶೌರ್ಯ ಪ್ರತಿಮೆ ಸ್ಥಾಪಿಸಲಾಗಿದೆ.