ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15,000 ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡಿದ್ದಾರೆ. ಇದರ ಜೊತೆಗೆ, ₹3500 ಕೋಟಿ ವೆಚ್ಚದಲ್ಲಿ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (ಕೆಪಿಎಸ್‌) ಉನ್ನತೀಕರಿಸುವ ಯೋಜನೆಗೂ ಚಾಲನೆ ನೀಡಲು ನಿರ್ದೇಶಿಸಿದ್ದಾರೆ.

ಬೆಂಗಳೂರು (ಮೇ.21): 15 ಸಾವಿರ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದು, ಈ ಸಂಬಂಧ ಶೀಘ್ರ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಲ್ಲದೆ, ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ (ಎಡಿಬಿ) ₹2000 ಕೋಟಿ ನೆರವಿನಿಂದ 500 ಶಾಲೆಗಳು ಸೇರಿ ಮುಂದಿನ ಮೂರು ವರ್ಷಗಳಲ್ಲಿ ₹3500 ಕೋಟಿ ವೆಚ್ಚದಲ್ಲಿ ಒಟ್ಟು 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ (ಕೆಪಿಎಸ್‌) ಉನ್ನತೀಕರಿಸುವ ಯೋಜನೆಗೆ ತಕ್ಷಣ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಿದರು. ಈ ನಿಟ್ಟಿನಲ್ಲಿ ಜೂ.1ರಂದು ಶಿವಮೊಗ್ಗದಲ್ಲಿ ಕೆಪಿಎಸ್‌ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲು ಸಮ್ಮತಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಇಲಾಖಾ ವಿಷಯಗಳ ಕುರಿತು ಮುಖ್ಯಮಂತ್ರಿ ಸಭೆ ನಡೆಸಿದರು.