ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ರಸಗೊಬ್ಬರ ತಯಾರಿಕಾ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಪೊಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ದರ ಗಣನೀಯವಾಗಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಸಬ್ಸಿಡಿಯಿಂದ ಯೂರಿಯಾ ಮತ್ತು ಡಿಎಪಿ ದರ ನಿಯಂತ್ರಣದಲ್ಲಿದ್ದರೂ, ಉಳಿದವು ಏರಿಕೆಯಾಗಿವೆ.

ಸೋಮರಡ್ಡಿ ಅಳವಂಡಿ

Add Asianetnews Kannada as a Preferred SourcegooglePreferred

 ಕೊಪ್ಪಳ ಮೇ.21: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ರಸಗೊಬ್ಬರ ದರದ ಮೇಲೆಯೂ ಭಾರಿ ಪರಿಣಾಮ ಬೀರಿದೆ. ರಸಗೊಬ್ಬರದ ಅಭಾವದ ಜತೆಗೆ ದರ ಏರಿಕೆ ಆಗಿರುವುದು ರೈತ ಸಮುದಾಯಕ್ಕೆ ಬರೆ ಎಳೆದಂತಾಗಿದೆ.

ಯೂರಿಯಾ ಮತ್ತು ಡಿಎಪಿ ದರದಲ್ಲಿ ಭಾರಿ ಏರಿಕೆಯಾಗಿದ್ದರೂ ಕೇಂದ್ರ ಸರ್ಕಾರ ಭಾರಿ ಪ್ರಮಾಣದ ಸಬ್ಸಿಡಿ ನೀಡುವ ಮೂಲಕ ದರವನ್ನು ನಿಯಂತ್ರಣದಲ್ಲಿಟ್ಟಿದೆ. ಆದರೆ, ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರದ ನಿಯಂತ್ರಣ ಇರದೇ ಇರುವುದರಿಂದ ಇವುಗಳ ದರ ತಿಂಗಳಲ್ಲಿಯೇ ಎರಡು ಬಾರಿ ಏರಿಕೆಯಾಗಿದೆ.

ಕಾಂಪ್ಲೆಕ್ಸ್ ಮತ್ತು ಪೋಟ್ಯಾಷ್‌ ರಸಗೊಬ್ಬರ ಮೇ ತಿಂಗಳ ಆರಂಭದಲ್ಲಿ ₹1,400 (50 ಕೆ.ಜಿ. ಚೀಲ) ಇದ್ದಿದ್ದು, ಈಗಾಗಲೇ ₹1,700 ಆಗಿದೆ. ಹೊಸ ದಾಸ್ತಾನು ₹2,200ಕ್ಕೆ ಹೆಚ್ಚಳವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದರ ಏರಿಕೆಯಲ್ಲಿ ಆಯಾ ಕಂಪನಿಗಳು ವಿಭಿನ್ನವಾಗಿ ಏರಿಕೆ ಮಾಡುತ್ತಿದ್ದು, ಮಧ್ಯಪ್ರಾಚ್ಯ ಯುದ್ಧವೇ ಇದೆಲ್ಲಕ್ಕೂ ಕಾರಣ ಎನ್ನುತ್ತಾರೆ ರಸಗೊಬ್ಬರ ತಯಾರಿಕಾ ಕಂಪನಿಯ ಪ್ರತಿನಿಧಿಗಳು.

ಯೂರಿಯಾ ಮತ್ತು ಡಿಎಪಿಗೆ ಕೊಡುವ ಸಬ್ಸಿಡಿಯನ್ನು ಸರ್ಕಾರ ಏರಿಕೆ ಮಾಡಿ ದರವನ್ನು ನಿಯಂತ್ರಣದಲ್ಲಿ ಇರಿಸಿದೆಯಾದರೂ ಇದು ಬಹಳ ದಿನಗಳ ಕಾಲ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಇನ್ನು, ಪೊಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳಿಗೂ ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ಇದು ಮಿತಿ ಪ್ರಮಾಣದಲ್ಲಿದ್ದು, ದರ ಏರಿಕೆಯಾದಾಗಲೆಲ್ಲ ಸಬ್ಸಿಡಿ ಏರಿಸದೆ ಇರುವುದರಿಂದ ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿ, ಮುಂಗಾರು ಬಿತ್ತನೆಯ ಸಿದ್ಧತೆಯಲ್ಲಿರುವ ರೈತರು ರಸಗೊಬ್ಬರ ಏರಿಕೆ ಮತ್ತು ಅಭಾವದಿಂದ ತತ್ತರಿಸಿ ಹೋಗಿದ್ದಾರೆ.

ಎಫ್ಐಡಿ ಕಡ್ಡಾಯ:

ಯೂರಿಯಾ ಮತ್ತು ಇತರೆ ರಸಗೊಬ್ಬರ ಕೊಳ್ಳಲು ಈಗ ಎಫ್ಐಡಿ (ರೈತರ ಗುರುತಿನ ಸಂಖ್ಯೆ) ಕಡ್ಡಾಯ. ಎಫ್‌ಐಡಿ ಹೊಂದಿದ ರೈತರಿಗೆ, ‘ಕೆ ಕಿಸಾನ್’ ಆ್ಯಪ್ ಮೂಲಕ ನೋಂದಣಿ ಮಾಡಿ, ಎಕರೆಗೆ ಕೇವಲ 1 ಚೀಲ ಮಾತ್ರ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚಿಗೆ ಖರೀದಿ ಮಾಡಲು ಸಾಧ್ಯವಿಲ್ಲ. ಎಫ್ಐಡಿಯಲ್ಲಿ ನೋಂದಣಿ ಮಾಡಿಯೇ ಕೊಡಬೇಕಾಗಿದ್ದರಿಂದ ಎಲ್ಲಿಯೇ ಖರೀದಿ ಮಾಡಿದರೂ ಅದು ಎಕರೆಗೆ ಒಂದು ಚೀಲ ಖರೀದಿಯಾಗುತ್ತಿದ್ದಂತೆ ಲಾಕ್ ಆಗುತ್ತದೆ. ಇನ್ನು, 20 ಎಕರೆಗಿಂತಲೂ ಹೆಚ್ಚು ಭೂಮಿ ಇದ್ದ ರೈತರು, ಬೆಳೆ ದೃಢೀಕರಣ ಪ್ರಮಾಣ ಪತ್ರ ನೀಡಿ, ಹೆಚ್ಚುವರಿಯಾಗಿ ಯೂರಿಯಾ ರಸಗೊಬ್ಬರ ಪಡೆಯಬಹುದಾಗಿದೆ.

ಗೊಬ್ಬರ ಕಳೆದ ವರ್ಷ ಈ ವರ್ಷ

ಪೊಟ್ಯಾಷ್ ₹1800 ₹1975

ಡಿಎಪಿ ₹1350 ₹1350

ಎನ್‌ಪಿಕೆ ₹1350 ₹1550

10.26.26 ₹2025 ₹2250

14 35 14 ₹2175 ₹2400

ಸಬ್ಸಿಡಿ ಯಾವುದಕ್ಕೆ ಎಷ್ಟೆಷ್ಟು. (ಪ್ರತಿ ಚೀಲಕ್ಕೆ).

ಡಿಎಪಿ ₹1490

ಎನ್‌ಪಿಕೆ ₹1045

ಎಂಎಪಿ ₹1484

ಯೂರಿಯಾ ₹1900 (45 ಕೆಜಿ)==:

ಮಧ್ಯಪ್ರಾಚ್ಯ ಯುದ್ಧದಿಂದ ರಸಗೊಬ್ಬರ ತಯಾರಿಕೆಯ ಕಚ್ಚಾವಸ್ತುಗಳ ಬೆಲೆ ವಿಪರೀತ ಹೆಚ್ಚಳವಾಗಿರುವುದರಿಂದ ದರ ಏರಿಕೆ ಮಾಡಲಾಗಿದೆ. ಯೂರಿಯಾ ಮತ್ತು ಡಿಎಪಿ ಮಾತ್ರ ಅಷ್ಟೇ ಇದ್ದು, ಉಳಿದವುಗಳ ದರ ಹೆಚ್ಚಳವಾಗಿದೆ.

- ಕೃಷ್ಣಮೂರ್ತಿ, ಜೆಡಿ ಕೃಷಿ ಇಲಾಖೆ.

ನಮ್ಮ ಪಾಡು ಹೇಳತೀರದು. ರಸಗೊಬ್ಬರವೇ ಸಿಗುತ್ತಿಲ್ಲ. ಈಗ ದರ ಏರಿಕೆ ಬೇರೆ. ಹೀಗಾದರೆ, ಕೃಷಿ ಮಾಡುವುದೇ ಕಷ್ಟವಾಗುತ್ತದೆ.

- ಸಿದ್ದಪ್ಪ ಯಡ್ರಮನಳ್ಳಿ, ರೈತ.