ಪ್ರಕರಣವನ್ನು ಮೊದಲು ಪೊಲೀಸ್‌ ತನಿಖೆಗೆ ಸೂಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಸಿಐಡಿ ತನಿಖೆಗೆ ವಹಿಸಲು ಸೂಚನೆ ನೀಡಿದ್ದಾರೆ. ಬಳಿಕ ಈ ಕುರಿತು ಅವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು(ಆ.09): ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮಂಡ್ಯದ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ರಾಜ್ಯಪಾಲರಿಗೆ ಬರೆಯಲಾದ ಪತ್ರದ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪ್ರಕರಣವನ್ನು ಮೊದಲು ಪೊಲೀಸ್‌ ತನಿಖೆಗೆ ಸೂಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಸಿಐಡಿ ತನಿಖೆಗೆ ವಹಿಸಲು ಸೂಚನೆ ನೀಡಿದ್ದಾರೆ. ಬಳಿಕ ಈ ಕುರಿತು ಅವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ, ಚೆಲುವರಾಯ ಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ ಎಂದು ಹೇಳಲಾಗಿರುವ ದೂರು ಪತ್ರದಲ್ಲಿ 7 ಅಧಿಕಾರಿಗಳ ಸಹಿಯಿದೆ. ಆದರೆ, ಸಂಬಂಧಪಟ್ಟಅಧಿಕಾರಿಗಳು ಈಗಾಗಲೇ ತಾವು ಅಂತಹ ಯಾವುದೇ ಪತ್ರ ಬರೆದಿಲ್ಲ ಎಂದು ಸರ್ಕಾರಕ್ಕೆ ಹೇಳಿದ್ದಾರೆ. ಹಾಗಾಗಿ ಆ ಸಹಿಗಳು ಅಸಲಿಯೇ, ನಕಲಿಯೇ ಎಂಬುದು ತಿಳಿಯಬೇಕಿದೆ. ಅಲ್ಲದೆ, ಆ ಎಲ್ಲಾ ಸಹಿಗಳನ್ನು ಒಬ್ಬರೇ ಮಾಡಿರುವ ಶಂಕೆಯಿದೆ. ಇನ್ನು ದೂರಿನಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸುವುದು ಸೂಕ್ತ ಎಂದು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.

ನನ್ನ ವಿರುದ್ದದ ಷಡ್ಯಂತ್ರಕ್ಕೆ ಫಲ ದೊರಕುವುದಿಲ್ಲ, ಹೆಚ್‌ಡಿಕೆ ಆರೋಪಕ್ಕೆ ಚಲುವರಾಯಸ್ವಾಮಿ ಟ್ವೀಟ್ ಗುದ್ದು

ಸತ್ಯ ಬಯಲಿಗೆ ತರಲು ತನಿಖೆ- ಸಿಎಂ:

ಪ್ರಕರಣ ಸಂಬಂಧ ಮಂಗಳವಾರ ಬೆಳಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧದ ಪತ್ರ ನಕಲಿಯಲ್ಲ ಅಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. ಆದರೆ, ರಾಮನಗರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್‌ ಕುಮಾರ್‌ ಅವರು ಪತ್ರವನ್ನು ನಮ್ಮ ಅಧಿಕಾರಿಗಳು ಬರೆದಿಲ್ಲ ಎಂದು ಹೇಳಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯ ಬಯಲಿಗೆಳೆಯಲು ಸೂಚಿಸಲಾಗಿದೆ ಎಂದು ಹೇಳಿದರು.

ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಈ ಪತ್ರ ಪ್ರಕರಣ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.