ನನ್ನ ವಿರುದ್ದದ ಷಡ್ಯಂತ್ರಕ್ಕೆ ಫಲ ದೊರಕುವುದಿಲ್ಲ, ಹೆಚ್‌ಡಿಕೆ ಆರೋಪಕ್ಕೆ ಚಲುವರಾಯಸ್ವಾಮಿ ಟ್ವೀಟ್ ಗುದ್ದು
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಸಚಿವ ಚಲುವರಾಯಸ್ವಾಮಿ ಖಾರವಾಗಿ ತಿರುಗೇಟು ನೀಡಿದ್ದಾರೆ. ನನ್ನ ವಿರುದ್ದ ನಡೆಯುವ ಷಡ್ಯಂತ್ರ, ಪಿತೂರಿಗಳಿಗೆ ಫಲ ದೊರಕುವುದಿಲ್ಲ ಎಂದಿದ್ದಾರೆ.
ಬೆಂಗಳೂರು (ಆ.8): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಸಚಿವ ಚಲುವರಾಯಸ್ವಾಮಿ ಖಾರವಾಗಿ ತಿರುಗೇಟು ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿರುವ ಸಚಿವ ಚಲುವರಾಯಸ್ವಾಮಿ, ನನ್ನ ವಿರುದ್ದ ನಡೆಯುವ ಷಡ್ಯಂತ್ರ, ಪಿತೂರಿಗಳಿಗೆ ಫಲ ದೊರಕುವುದಿಲ್ಲ. ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಕೃಷಿಯನ್ನೇ ನಂಬಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ.70 ರಷ್ಟು ಜನರು ಜೀವನ ನಡೆಸುತ್ತಿದ್ದಾರೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ಒಂದಷ್ಟು ಸೇವೆ ಮಾಡುವ ಅವಕಾಶ ನನಗೆ ರಾಜಕೀಯವಾಗಿ ದೊರೆತಿದೆ
ನಾನೂ ಸಹ ಕೃಷಿಕ ಕುಟುಂಬದ ಒಬ್ಬ ರೈತನ ಮಗನಾಗಿ ಬಂದವನಾಗಿದ್ದು ನನಗೆ ಲಭಿಸಿರುವ ಉತ್ತಮ ಅವಕಾಶವನ್ನು ಬಳಸಿಕೊಂಡು ಕರ್ನಾಟಕದ ರೈತರಿಗೆ ಕೃಷಿ ಮಂತ್ರಿಯಾಗಿ ಏನೆಲ್ಲಾ ಸೇವೆ ಮಾಡಲು ಸಾಧ್ಯವಿದೆಯೋ ಆ ಎಲ್ಲಾ ಸೇವೆ ಸಲ್ಲಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ಆದರೆ ಹೇಗಾದರೂ ಮಾಡಿ ನನ್ನನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಬಹಳ ವ್ಯವಸ್ಥಿತವಾಗಿ ಷಡ್ಯಂತ್ರ ಮತ್ತು ಪಿತೂರಿ ನಡೆಯುತ್ತಿದೆ. ನನ್ನನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಕುತಂತ್ರದ ಹಿಂದೆ ಯಾರಿರಬಹುದು ಎನ್ನುವ ಬಗ್ಗೆ ಹೆಸರು ಹೇಳುವ ಅವಶ್ಯಕತೆಯಿಲ್ಲ ನಿಮಗೆ ತಿಳಿದಿದೆ.
ಕುಮಾರಸ್ವಾಮಿ ಬಿಜೆಪಿ ವಕ್ತಾರರೇ?: ಸಚಿವ ಚಲುವರಾಯಸ್ವಾಮಿ
ಜನರು ರಾಜಕೀಯವಾಗಿ ಪ್ರಬುದ್ಧರಿದ್ದು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವುದು ಯಾರೆಂದು ಅವರೇ ನಿರ್ಧಾರ ಮಾಡುತ್ತಾರೆ. ಸರ್ಕಾರಗಳ ಬದಲಾವಣೆ ಆದಾಗ ಸರ್ಕಾರಿ ನೌಕರರ ವರ್ಗಾವಣೆ ಒಂದು ಸಾಮಾನ್ಯ ಪ್ರಕ್ರಿಯೆ. ಇದು ಎಲ್ಲಾ ಹೊಸ ಸರ್ಕಾರಗಳು ಬಂದಾಗಲೂ ಸಹಜವಾಗಿ ನಡೆದಿವೆ. ಆದರೆ ವೈಯಕ್ತಿಕವಾಗಿ ನಾನು ಮೊದಲಿನಿಂದಲೂ ಈ ಪ್ರಕ್ರಿಯೆಯಲ್ಲಿ ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟಿಲ್ಲ.
ನನ್ನ ಬಗ್ಗೆ ಬಹಳ ದ್ವೇಷ ಹೊಂದಿರುವ ಜನ ಹೇಗಾದರೂ ಸರಿ ನನ್ನ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನದ ಭಾಗವಾಗಿ ನಕಲಿ ಪತ್ರಗಳನ್ನು ಸೃಷ್ಟಿಸಿ ಸದರಿ ನಕಲಿ ಪತ್ರಗಳ ಆಧಾರದ ಮೇಲೆ ನೌಕರರನ್ನು ನೆಪವಾಗಿಸಿ ಷಡ್ಯಂತ್ರ ರೂಪಿಸುತ್ತಿದ್ದಾರೆ.
ಈ ಷಡ್ಯಂತ್ರದ ಹಿಂದಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಲಿದೆ. ಈಗಾಗಲೇ ರಾಜ್ಯದ ಜನತೆಗೆ ನನ್ನ ವಿರುದ್ಧ ಯಾರೆಲ್ಲ ಏನೇನು ರಾಜಕೀಯ ಮಸಲತ್ತು ನಡೆಸಿದ್ದಾರೆಂಬುದು ತಿಳಿದಿದೆ. ಇದು ಸಹ ಅಂತಹುದೇ ಮುಂದುವರಿದ ಭಾಗ ಭಾಗವಷ್ಟೇ. ನೇರವಾಗಿ ನನ್ನನ್ನು ಎದುರಿಸಲಾಗದೆ ನನ್ನ ವಿರುದ್ಧ ಈ ರೀತಿಯ ಕ್ಷುಲ್ಲಕ ರಾಜಕೀಯ ಮಾಡಲಾಗುತ್ತಿದೆ.
ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ನೀಡಿರುವ ದೂರು ನಮ್ಮದಲ್ಲ; ಜಂಟಿ ಕೃಷಿ ನಿರ್ದೇಶಕ ಸ್ಪಷ್ಟನೆ
ಕೃಷಿ ಖಾತೆಯ ಸಚಿವನಾಗಿ ರಾಜ್ಯದಲ್ಲಿ ಮಾಡಬಹುದಾದ ಬಹಳಷ್ಟು ಕೆಲಸವಿದ್ದು ಆ ಬಗ್ಗೆ ನನಗೆ ನನ್ನದೇ ಆದ ಕನಸುಗಳಿವೆ. ನನ್ನ ಖಾತೆಯ ಇತಿ ಮಿತಿಯೊಳಗೆ ನಾನು ರೈತರಿಗೆ ನೆರವಾಗಬಹುದಾದ ಅನೇಕ ಕಾರ್ಯಕ್ರಮಗಳನ್ನು ಮಾಡಲು ಯೋಜಿಸಲಾಗಿದೆ.
ಇಂತಹ ಸಂದರ್ಭದಲ್ಲಿ ನನಗೆ ಮತ್ತಷ್ಟು ಹೆಸರು ಬರುವುದೆಂಬ ಭಯ ಮತ್ತು ಹತಾಶೆಯಿಂದ ಕೆಲವರು ಈ ಷಡ್ಯಂತ್ರದ ರಾಜಕಾರಣ ನಡೆಸುತ್ತಿದ್ದಾರೆ. ಸತ್ಯಕ್ಕೆ ದೂರವಾಗಿರುವ ಅವರ ಈ ಯಾವ ಕುತಂತ್ರಗಳು ಫಲ ನೀಡುವುದಿಲ್ಲ ಎಂದು ಟ್ವೀಟ್ ಚಲುವರಾಯಸ್ವಾಮಿ ಮಾಡಿದ್ದಾರೆ.
ಚಲುವರಾಯ ವಿರುದ್ಧದ ಪತ್ರ ನಕಲಿ: ಸಿಎಂ ಸಿದ್ದು
ಮಂಡ್ಯ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಕೃಷಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದು ಸಾಬೀತಾಗಿದೆ. ಆದರೂ ಈ ಸಂಬಂಧ ಅಗತ್ಯವೆನಿಸಿದರೆ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂಬುದು ಬಯಲಾಗಿದೆ. ಅಂತಹ ಅಧಿಕಾರಿಗಳು ಯಾರೂ ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯದ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕಂಡುಬಂದಲ್ಲಿ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.