2019ರಲ್ಲಿ ಚಿತ್ತಾಪುರದಲ್ಲಿ ಅಕ್ರಮ ಹಸು ಸಾಗಾಟದ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗಲಭೆಕೋರರ ವಿರುದ್ಧದ ಪ್ರಕರಣವನ್ನು ಹಿಂಪಡೆಯುವ ಮ್ಯಾಜಿಸ್ಟ್ರೇಟ್ ಆದೇಶಕ್ಕೆ ಕಲಬುರಗಿ ಹೈಕೋರ್ಟ್ ಪೀಠ ತಡೆ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಮನವಿ ಮೇರೆಗೆ ಕೇಸ್ ವಾಪಸ್ ಪಡೆಯಲಾಗಿದೆ ಎಂಬ ಆರೋಪವಿದೆ.

ಕಲಬುರಗಿ (ನ.19): 2019ರಲ್ಲಿ ಚಿತ್ತಾಪುರ‌ದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಸುಗಳನ್ನು ಸೀಜ್ ಮಾಡಿದ ಪೊಲೀಸರ ಮೇಲೆ ಕಲ್ಲು ತೂರಿದ ಗಲಭೆಕೋರರ ವಿರುದ್ಧದ ಪ್ರಕರಣ ವಾಪಸ್‌ ಪಡೆದ ಮ್ಯಾಜಿಸ್ಟ್ರೇಟ್ ಆದೇಶಕ್ಕೆ ಹೈಕೋರ್ಟ್‌ನ ಕಲಬುರಗಿ ಪೀಠ ತಡೆ ನೀಡಿದೆ. ಜೊತೆಗೆ, ಆದೇಶದ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿದೆ. 

ಚಿತ್ತಾಪುರ ಗಲಭೆಕೋರರ ವಿರುದ್ಧ ಕೇಸ್ ಹಿಂಪಡೆದ ಸರ್ಕಾರಕ್ಕೆ ಹಿನ್ನಡೆ:

ಇದರಿಂದಾಗಿ ಚಿತ್ತಾಪುರ ಗಲಭೆಕೋರರ ವಿರುದ್ಧದ ಕೇಸ್ ಹಿಂಪಡೆದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಘಟನೆಗೆ ಸಂಬಂಧಿಸಿ 30 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಗಲಭೆಕೋರರ ವಿರುದ್ಧದ ಕೇಸ್‌ಗಳನ್ನು ವಾಪಸ್‌ ಪಡೆಯಲಾಗಿತ್ತು. ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ಗಿರೀಶ್ ಭಾರಧ್ವಾಜ್ ಎಂಬುವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸರ್ಕಾರದ ಆದೇಶದನ್ವಯ ಮ್ಯಾಜಿಸ್ಟ್ರೇಟ್ ಈ ಆದೇಶ ಹೊರಡಿಸಿದ್ದರು. ಈ ವೇಳೆ, ಸಚಿವ ಪ್ರಿಯಾಂಕ್‌ ಖರ್ಗೆಯವರ ಮನವಿ ಮೇರೆಗೆ ಈ ಕೇಸ್‌ ವಾಪಸ್‌ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಪ್ರಕರಣ ಹಿಂಪಡೆಯಲು ಯೋಗ್ಯವಲ್ಲ

ಈ ಪ್ರಕರಣದ ವಿಚಾರಣೆ ಮಂಗಳವಾರ ಹೈಕೋರ್ಟ್‌ ನ ಕಲಬುರಗಿ ವಿಭಾಗೀಯ ಪೀಠದಲ್ಲಿ ಆರಂಭವಾಯಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್ ದಳವಾಯಿ, ಈ ಪ್ರಕರಣ ಹಿಂಪಡೆಯಲು ಯೋಗ್ಯವಲ್ಲ ಎಂದು ವಾದಿಸಿದರು. ವಾದ ಆಲಿಸಿದ ನ್ಯಾಯಪೀಠ, ಪ್ರಕರಣ ಹಿಂಪಡೆದ ಮ್ಯಾಜಿಸ್ಟ್ರೇಟ್ ಆದೇಶಕ್ಕೆ ತಡೆ ನೀಡಿತು. ಅಲ್ಲದೆ, ಮ್ಯಾಜಿಸ್ಟ್ರೇಟ್ ಮಾಡಿದ ಆದೇಶ ಹಾಗೂ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿ, ಮುಂದಿನ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿತು.

- ಕೇಸ್‌ ವಾಪಸ್‌ ಪಡೆದ ಮ್ಯಾಜಿಸ್ಟ್ರೇಟ್ ಆದೇಶಕ್ಕೆ ಹೈಕೋರ್ಟ್‌ ತಡೆ

- 2019ರಲ್ಲಿ ನಡೆದ ಅಕ್ರಮ ಹಸು ಸಾಗಾಟ, ಚಿತ್ತಾಪುರ‌ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ

2019ರ ಆ.11ರಂದು ಚಿತ್ತಾಪುರ‌ದಲ್ಲಿ ಹಸುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೆಲ ಯುವಕರು, ವಾಹನ ತಡೆದು, ಗೋವುಗಳನ್ನು ರಕ್ಷಿಸಿ, ಚಿತ್ತಾಪುರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಅನ್ಯಕೋಮಿನ ಯುವಕರು ಗೋವು ರಕ್ಷಕರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ತಡೆಯಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.