ನಾಳೆ ಜಾಮೀನು ಅರ್ಜಿ ವಿಚಾರಣೆ; ನಟ ದರ್ಶನ್ ಭೇಟಿ ಮಾಡಿದ ವಕೀಲರು!
ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಜೈಲಿಗೆ ಆಗಮಿಸಿದ್ದ ಮೂವರು ವಕೀಲರು, ಸುಮಾರು ಅರ್ಧಗಂಟೆ ಕಾಲ ಚರ್ಚಿಸಿದರು.
ಬಳ್ಳಾರಿ (ಸೆ.26): ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಜೈಲಿಗೆ ಆಗಮಿಸಿದ್ದ ಮೂವರು ವಕೀಲರು, ಸುಮಾರು ಅರ್ಧಗಂಟೆ ಕಾಲ ಚರ್ಚಿಸಿದರು.
ಹೈ ಸೆಕ್ಯೂರಿಟಿ ಸೆಲ್‌ನಿಂದ ವಿಜಟರ್ ರೂಂ ಕಡೆ ನಟ ದರ್ಶನ್‌ನನ್ನು ಕರೆ ತಂದ ಜೈಲು ಸಿಬ್ಬಂದಿ, ವಕೀಲರ ಜೊತೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಬಳಿಕ ಭದ್ರತಾ ಸಿಬ್ಬಂದಿ ಜೊತೆ ನಟ ದರ್ಶನ್ ಸೆಲ್‌ಗೆ ತೆರಳಿದರು. ಸೆ. 27ರಂದು ನಟ ದರ್ಶನ್ ಜಾಮೀನು ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಕೀಲರು ಆಗಮಿಸಿ ನ್ಯಾಯಾಂಗ ಹೋರಾಟ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್‌ಗೆ ಇದೆಲ್ಲಾ ಬೇಕಿತ್ತಾ? ಪ್ರಪಂಚದಲ್ಲಿ ಮಾಡೋಕೆ ಸಾಕಷ್ಟು ಕೆಲಸಗಳು ಇದೆ: 'ಕರಿಯಾ' ನಟಿ ಟಾಂಗ್
ಜೈಲಿನಲ್ಲಿ ದರ್ಶನ್‌ಗೆ ಬೆಡ್, ದಿಂಬು ಕೊಡುತ್ತಿಲ್ಲ?:
ನಟ ದರ್ಶನ್ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ದರ್ಶನ್ ಪರ ವಕೀಲ ಸುನಿಲ್, ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಕೆಲವೊಂದಷ್ಟು ಚರ್ಚಿಸುವುದಿತ್ತು. ಹೀಗಾಗಿಯೇ ನಟ ದರ್ಶನ್ ಭೇಟಿ ಮಾಡಿದೆವು ಎಂದರು. ಜೈಲಿನ ನಿಯಮ ಪ್ರಕಾರ ದರ್ಶನ್‌ಗೆ ಅಗತ್ಯ ಸೌಕರ್ಯಗಳನ್ನು ನೀಡುತ್ತಿಲ್ಲ ಎಂದು ಗೊತ್ತಾಗಿದ್ದು, ಅಧೀಕ್ಷಕರ ಜೊತೆ ಮಾತನಾಡಿದ್ದೇವೆ. 2021ರ ಹೊಸ ನಿಯಮದ ಆದೇಶವನ್ನು ಅವರಿಗೆ ತಿಳಿಸಲಾಗಿದೆ. ಹೊಸ ಮ್ಯಾನುವಲ್ ಪ್ರಕಾರ ಬೆಡ್, ದಿಂಬು ಕೊಡಲು ಅವಕಾಶವಿದೆ. ಇನ್ನು ಮೂರು ದಿನಗಳ ಕಾಲ ನೋಡುತ್ತೇವೆ. ಜೈಲಿನ ನಿಯಮ ಪಾಲಿಸದಿದ್ದರೆ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿಕೊಳ್ಳುವ ಯೋಚನೆಯಿದೆ. ದರ್ಶನ್ ಗೆ ಬೆನ್ನುನೋವು ಇದ್ದು ಚಿಕಿತ್ಸೆ ನೀಡುವಂತೆ ಕೋರಲಾಗಿದೆ. ನಮ್ಮ ಬೇಡಿಕೆಗಳನ್ನು ತಿರಸ್ಕರಿಸಿದರೆ ಮೇಲಧಿಕಾರಿಗಳ ಜೊತೆ ಮಾತನಾಡುತ್ತೇವೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ಸೆಷನ್ಸ್ ಕೋರ್ಟ್‌ನಲ್ಲಿ ನಟ ದರ್ಶನ್ ಅವರಿಗೆ ಜಾಮೀನು ಸಿಗುವ ವಿಶ್ವಾಸವಿದೆ. ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದರು.