ಚಿತ್ರದುರ್ಗದ ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಖಾಸಗಿ ಬಸ್ ಮತ್ತು ಕಂಟೇನರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಸಂಭವಿಸಿ, ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. 

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಹಾಗೂ ಜವನಗೊಂಡನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಸಂಭವಿಸಿದ ಬಸ್-ಲಾರಿ ಭೀಕರ ರಸ್ತೆ ದುರಂತ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 6, ಇದರಲ್ಲಿ ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ 5 ಮಂದಿ ಮತ್ತು ಟ್ಯಾಂಕರ್ ಡ್ರೈವರ್ ಓರ್ವ ಮೃತಪಟ್ಟಿದ್ದಾನೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಂಜೀತ್ ಬಂಡಾರು ಸ್ಪಷ್ಟಪಡಿಸಿದ್ದಾರೆ.

ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, ಬಸ್‌ನೊಳಗಿಂದ ಐದು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ಒಂದು ಮಗು ಹಾಗೂ ನಾಲ್ವರು ವಯಸ್ಕರ ಮೃತದೇಹಗಳಿವೆ. ಇನ್ನು ಕಂಟೇನರ್ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಮೃತಪಟ್ಟವರಲ್ಲಿ 8 ವರ್ಷದ ಪುಟ್ಟ ಮಗು ಶ್ರೀಯಾ ಹಾಗೂ ಆಕೆಯ ತಾಯಿ 34 ವರ್ಷದ ಬಿಂದು ಸೇರಿದ್ದಾರೆ. ಜೊತೆಗೆ ಬಟ್ಕಳದ ರಶ್ಮಿ, ಚನ್ನರಾಯಪಟ್ಟಣ ನವ್ಯಾ, ಹಾಗೂ ಮಾನಸ ಎಂಬ ಯುವತಿಯರೂ ಮೃತಪಟ್ಟಿದ್ದಾರೆ. ಆದರೆ ನವ್ಯಾ ಹಾಗೂ ಮಾನಸ ಅವರ ಮೃತದೇಹಗಳ ಗುರುತು ಕುರಿತು ಇನ್ನೂ ಗೊಂದಲವಿದ್ದು, ಅಂತಿಮ ದೃಢೀಕರಣ ಬಾಕಿಯಾಗಿದೆ. ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಚಿನ್ನದ ಸರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಧರಿಸುತ್ತಿದ್ದ ಕಾರಣ ಗುರುತು ಪತ್ತೆಯಲ್ಲಿ ಗೊಂದಲ ಉಂಟಾಗಿದೆ. ಘಟನೆಯಲ್ಲಿ ಹರಿಯಾಣ ಮೂಲದ ಲಾರಿ ಚಾಲಕ ಕುಲದೀಪ್ ಸ್ಥಳದಲ್ಲೇ ಸಾವು ಕಂಡಿದ್ದಾನೆ.

ಮೃತದೇಹ ಪತ್ತೆ ಹಚ್ಚುವಲ್ಲಿ ಗೊಂದಲ

ರಶ್ಮಿ ಅವರ ಮೃತದೇಹವನ್ನೂ ಈವರೆಗೆ ಪೋಷಕರು ಅಧಿಕೃತವಾಗಿ ಗುರುತಿಸಿಲ್ಲ. ಮೃತದೇಹದ ಕೊರಳಲ್ಲಿದ್ದ ಚಿನ್ನದ ಸರದ ಫೋಟೋವನ್ನು ಕುಟುಂಬಸ್ಥರಿಗೆ ಕಳುಹಿಸಲಾಗಿದ್ದು, ಗುರುತು ಪತ್ತೆ ಪ್ರಕ್ರಿಯೆ ಮುಂದುವರಿದಿದೆ. ಸಾಯಂಕಾಲದ ವೇಳೆಗೆ ಎಲ್ಲ ಮೃತದೇಹಗಳ ಗುರುತು ಪತ್ತೆಯಾಗುವ ನಿರೀಕ್ಷೆಯಿದ್ದು, ಅಗತ್ಯವಿದ್ದಲ್ಲಿ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕ ದೃಢೀಕರಣದ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುತ್ತದೆ ಎಂದು ಚಿತ್ರದುರ್ಗ ಎಸ್‌ಪಿ ರಂಜೀತ್ ಬಂಡಾರು ತಿಳಿಸಿದ್ದಾರೆ.

ಈ ಭೀಕರ ಅಪಘಾತವು ಇಂದು ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ಜವನಗೊಂಡನಹಳ್ಳಿ ಸಮೀಪದ ಗೊರ್ಲಡ್ಕು ಗೇಟ್ ಬಳಿ ನಡೆದಿದೆ. ಹಿರಿಯೂರಿನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಹರಿಯಾಣ ಮೂಲದ ಕಂಟೇನರ್ ಲಾರಿ ಹಾಗೂ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಂಟೇನರ್ ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಕಂಟೈನರ್‌ ಲಾರಿಯದ್ದೇ ತಪ್ಪೆಂದು ಪ್ರಾಥಮಿಕ ಮಾಹಿತಿ

ಪೊಲೀಸ್ ವಿವರಗಳ ಪ್ರಕಾರ, ಲಾರಿ ಚಾಲಕ ರಸ್ತೆ ಡಿವೈಡರ್ ದಾಟಿ ತಪ್ಪು ದಾರಿಗೆ ಪ್ರವೇಶಿಸಿದ ಪರಿಣಾಮ, ಬಲಭಾಗದಲ್ಲಿ ಸಾಗುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ತೀವ್ರತೆಗೆ ಬಸ್‌ನ ಡೀಸೆಲ್ ಟ್ಯಾಂಕ್ ಸ್ಪೋಟಗೊಂಡು, ಕ್ಷಣಾರ್ಧದಲ್ಲಿ ಸಂಪೂರ್ಣ ಬಸ್ ಬೆಂಕಿಗಾಹುತಿಯಾಗಿದೆ. ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಬಸ್ ಧಗಧಗನೆ ಹೊತ್ತಿ ಉರಿದ ದೃಶ್ಯಗಳು ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳುವಂತೆ ಮಾಡಿವೆ.

ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 32 ಮಂದಿ ಪ್ರಯಾಣಿಸುತ್ತಿದ್ದರು. ಕೆಲವರು ಸಮಯಪ್ರಜ್ಞೆ ತೋರಿಸಿ ಬಸ್‌ನ ಕಿಟಕಿಗಳ ಮೂಲಕ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬೆಂಕಿಯ ತೀವ್ರತೆಯಿಂದ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಆರಂಭದಲ್ಲಿ ಬಹುತೇಕ ಎಲ್ಲರೂ ಮೃತಪಟ್ಟಿರಬಹುದೆಂಬ ಗೊಂದಲ ಉಂಟಾಗಿತ್ತು.

ಶಿವಮೊಗ್ಗ ಮೂಲದ ಮಸ್ರತುನ್ನಿಸಾ ಸುರಕ್ಷಿತ

ಇನ್ನೊಂದೆಡೆ, ಅಪಘಾತದ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದ್ದ ಶಿವಮೊಗ್ಗ ಮೂಲದ ಮಸ್ರತುನ್ನಿಸಾ ಸೈಯ್ದ್ ಜಮೀರ್ ಗೌಸ್ ಅವರು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಅವರು ಶಿರಾ ಕಡೆಗೆ ತೆರಳಿದ್ದೇವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ. ಈ ಅಪಘಾತದಲ್ಲಿ ಗಾಯಗೊಂಡಿರುವ 25 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ, ಹಿರಿಯೂರು, ಶಿರಾ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ, ಚಿತ್ರದುರ್ಗ ಎಸ್‌ಪಿ ರಂಜೀತ್ ಬಂಡಾರು, ತುಮಕೂರು ಎಸ್‌ಪಿ ಅಶೋಕ್, ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹಾಗೂ ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.