ಹಾವೇರಿ(ಆ.03): ಕೊರೋನಾ ಹಿನ್ನೆಲೆಯಲ್ಲಿ ಈಗಾಗಲೇ ಆರಂಭವಾಗಿರುವ ಆನ್‌ಲೈನ್‌ ಶಿಕ್ಷಣ ಜಿಲ್ಲೆ​ಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಹಲವು ಬಡ ಮಕ್ಕಳಿಗೆ ಗಗನ ಕುಸುಮವಾಗುತ್ತಿ​ದೆ. ಶಾಲೆಗಳು ಬಂದ್‌ ಆಗಿರುವುದರಿಂದ ಮಕ್ಕಳು ಪಾಲಕರೊಂದಿಗೆ ಕೂಲಿಗೆ ಹೋಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಆನ್‌ಲೈನ್‌ನಲ್ಲೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

ನಗರ ಪ್ರದೇಶದ ಮಕ್ಕಳು ಪಾಲಕರ ನೆರವಿನಿಂದ ವಾಟ್ಸ್‌ಆ್ಯಪ್‌, ಇ-ಮೇಲ್‌, ಗೂಗಲ್‌, ಜೂಮ್‌ ಆ್ಯಪ್‌ನಂಥ ವಿಧಾನದ ಮೂಲಕ ಆನ್‌ಲೈನ್‌ ಕಲಿಕೆ ಶುರು ಮಾಡಿದ್ದಾರೆ. ಆದರೆ, ಗ್ರಾಮೀಣ ಭಾಗದ, ಅದರಲ್ಲೂ ಸರ್ಕಾರಿ ಶಾಲೆ ಮಕ್ಕಳು ಇವುಗಳಿಂದ ವಂಚಿತರಾಗಿ ಕೂಲಿಗೆ ಹೋಗುತ್ತಿದ್ದಾರೆ. ಜಿಲ್ಲೆ​ಯಲ್ಲಿ ಸರ್ಕಾರಿ ಶಾಲೆ​ಯಲ್ಲಿ ಓದು​ತ್ತಿ​ರುವ ಲಕ್ಷಕ್ಕೂ ಹೆಚ್ಚು ಮಕ್ಕ​ಳ ಪಾಲ​ಕ​ರಲ್ಲಿ ಸ್ಮಾರ್ಟ್‌ಪೋ​ನ್‌, ಟೀವಿ ಹೊಂದಿ​ರು​ವ​ವರು ಸುಮಾರು 50 ಸಾವಿರ ಮಂದಿ. ಹೀಗಾ​ಗಿ ಯಾವುದೇ ಸೌಲಭ್ಯ ಇಲ್ಲ​ದ ತೀರಾ ಹಳ್ಳಿ​ಗಾ​ಡಿನ ಮಕ್ಕ​ಳಂತು ಬುತ್ತಿ ಗಂಟು ಕಟ್ಟಿಕೊಂಡು, ನೀರಿನ ಕೊಡ ತಲೆಮೇಲಿಟ್ಟುಕೊಂಡು ಪಾಲಕರೊಂದಿಗೆ ಹೊಲದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಬಡ​ಕು​ಟುಂಬ​ದ ಮಕ್ಕಳ ಪಾಲಕರಲ್ಲೂ ಶಿಕ್ಷ​ಣದ ಕುರಿತು ಹೇಳಿ​ಕೊ​ಳ್ಳುವ ಅರಿ​ವಿ​ರು​ವು​ದಿ​ಲ್ಲ. ಹೀಗಾಗಿ ಕೃಷಿ​ಕರ ಮಕ್ಕಳಲ್ಲಿ ಕೆಲ​ವರು ಕುರಿ, ದನ ಕಾಯುತ್ತಿದ್ದರೆ, ಅನೇಕರು ಹೊಲದಲ್ಲಿ ಕಳೆ ಕೀಳುವುದರಲ್ಲಿ ನಿರತರಾಗಿದ್ದಾರೆ.

ಆನ್‌ಲೈನ್‌ನಲ್ಲೇ ಡಿಗ್ರಿ ಕಾಲೇಜಿಗೆ ಪ್ರವೇಶ ನಡೆ​ಸ​ಲು ಸರ್ಕಾರ ಸೂಚ​ನೆ

ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಎಲ್ಲ ತರಗತಿಗಳಿಗೆ ದೂರದರ್ಶನ ಚಂದನ ವಾಹಿನಿ ಮೂಲಕ ಬೋಧನೆಯೇನೋ ಶುರು ಮಾಡಿದೆ. ಆದರೆ, ಹಳ್ಳಿ ಮಕ್ಕಳು ಇದಕ್ಕೆ ಒಗ್ಗಿ​ಕೊ​ಳ್ಳು​ತ್ತಿಲ್ಲ ಎಂಬ ಆರೋ​ಪವೂ ಇದೆ. ಬೆಳಗ್ಗೆದ್ದು ಮನೆಯಿಂದ ಹೊಲದತ್ತ ಹೋಗುವ ಮಕ್ಕಳು ಮತ್ತೆ ಮನೆ ಸೇರುವ ವೇಳೆಗೆ ಸಂಜೆಯಾಗುತ್ತದೆ. ಇಂಥ ಪರಿ​ಸ್ಥಿ​ತಿ​ಯ​ಲ್ಲಿ ಟೀವಿ ನೋಡು​ವುದು ಅಷ್ಟ​ರಲ್ಲೇ ​ಇದೆ. ಇನ್ನು ಉಳಿದ ಮನೆ​ಗ​ಳಲ್ಲಿ ಟಿವಿ ಇದ್ದರೂ ವಿದ್ಯುತ್‌ ಸಮಸ್ಯೆಯಿಂದ ಪಾಠ ತಪ್ಪು​ತ್ತಿದೆ. ಹೀಗಾಗಿ ಟೀವಿ ಇದ್ದರೂ ನಾಲ್ಕೈದು ಸಾವಿರ ವಿದ್ಯಾ​ರ್ಥಿ​ಗಳು ಚಂದ​ನ​ವಾ​ಹಿ​ನಿ​ಯಲ್ಲಿ ಬರುವ ಪಾಠ ಕೇಳು​ವು​ದ​ರಿಂದ ವಂಚಿ​ತ​ರಾ​ಗು​ತ್ತಿ​ದ್ದಾರೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

10 ಸಾವಿರ ಮಕ್ಕಳ ಪಾಲ​ಕ​ರಲ್ಲಿ ಬೇಸಿಕ್‌ ಸೆಟ್‌

ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗಿನ 2.73 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 1.53 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಅವರಲ್ಲಿ 1 ಲಕ್ಷಕ್ಕೂ ಅಧಿಕ ಮಕ್ಕಳು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಅವರಲ್ಲಿ ಟಿವಿ, ಸ್ಮಾರ್ಟ್‌ ಫೋನ್‌ ಇದ್ದವರು 50 ಸಾವಿರದಷ್ಟಿದ್ದರೆ, ಇನ್ನುಳಿದ 50 ಸಾವಿರ ಮಕ್ಕಳ ಪಾಲಕರು ಇವೆರಡರಲ್ಲಿ ಒಂದು ಸೌಲಭ್ಯ ಹೊಂದಿದ್ದಾರೆ. ಆದರೆ, ಕೆಲವರಲ್ಲಿ ಸ್ಮಾರ್ಟ್‌ ಫೋನ್‌ ಇದ್ದರೂ ಕೆಲವರು ಇಂಟರ್‌ನೆಟ್‌ ಸೌಲಭ್ಯ ಹೊಂದಿಲ್ಲ. ಇವೆಲ್ಲವನ್ನು ಹೊರತುಪಡಿಸಿದ ತೀರಾ ಬಡ ವರ್ಗದ ಸುಮಾರು 10 ಸಾವಿರ ಪಾಲಕರು ಬೇಸಿಕ್‌ ಮೊಬೈಲ್‌ ಹೊಂದಿದ್ದು, ಅವರ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಅಸಾಧ್ಯವಾದ ಮಾತು.

ಮಾಸ್ತರು ಶಾಲೆ ಶುರು ಮಾಡಿದ್ರ ಶಾಲೆಗೆ ಹೋಗಿ ಕಲೀತೀವಿ. ಅವರು ಮೊಬೈಲ್‌ದಾಗ ಹೇಳತಾರ. ಮೊಬೈಲ್‌ ತಗೋಳ್ಳೋಕೆ ನಮ್ಮತ್ರ ರೊಕ್ಕ ಇಲ್ಲ. ಶಾಲೆ ಚಾಲು ಮಾಡಿದ್ರ ಹೋಕ್ಕೀವಿ. ಇಲ್ಲಾಂದ್ರ ಅಪ್ಪ ಅವ್ವರ ಜೊತೀಗಿ ಕೂಲಿ ಹೋಗ್ತೇವ್ರಿ.

-ರವಿ ಕುಬ್ಸ​ದ್‌, ಕೋಡಬಾಳ ಗ್ರಾಮ, ಹಾವೇ​ರಿ

ಕೊರೋನಾ ಹೆಚ್ಚುತ್ತಿರುವುದರಿಂದ ಸರ್ಕಾರ ಇನ್ನೂ ಶಾಲೆ ಆರಂಭಿಸಿಲ್ಲ. ಆದರೆ, ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಗ್ರಾಮಗಳ ವಿಶಾಲವಾದ ಸ್ಥಳದಲ್ಲಿ ಸಾಮಾಜಿಕ ಅಂತರದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಿಸುವ ಕುರಿತು ಚಿಂತನೆ ನಡೆಸಲಾಗಿದೆ. ಕೆಲ ಶಾಲೆ ಶಿಕ್ಷಕರು ಈಗಾಗಲೇ ಈ ರೀತಿ ಬೋಧನೆ ಆರಂಭಿಸಿದ್ದಾರೆ.

- ಅಂದಾನೆಪ್ಪ ವಡಗೇರಿ ಡಿಡಿಪಿಐ ಹಾವೇರಿ