ಚಿಕ್ಕಮಗಳೂರಿನ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಎತ್ತಿನಗಾಡಿ ಹರಿದು ಅವಘಡ ಸಂಭವಿಸಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಮಗಳೂರು (ಜ.30): ಕಾಫಿನಾಡ ಬಯಲುಸೀಮೆ ಭಾಗದ ಅತ್ಯಂತ ದೊಡ್ಡ ಜಾತ್ರೆಯಾಗಿರುವ ಅಂತರಘಟ್ಟೆ ದುರ್ಗಾಂಬ ಜಾತ್ರಾ ಮಹೋತ್ಸವದಲ್ಲಿ ಇಂದು ಅನಿರೀಕ್ಷಿತ ಅವಘಡವೊಂದು ಸಂಭವಿಸಿದೆ. ಸಾವಿರಾರು ಎತ್ತಿನಗಾಡಿಗಳ ಮೂಲಕ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದ ವೇಳೆ, ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಎತ್ತಿನಗಾಡಿ ಹರಿದಿದೆ.

ತಮಟದಹಳ್ಳಿ ಗೇಟ್ ಬಳಿ ಘಟಿಸಿದ ಘಟನೆ

ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಜಾತ್ರೆಯ ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿದ್ದ ಅಜ್ಜಂಪುರ ಸರ್ಕಲ್ ಇನ್ಸ್‌ಪೆಕ್ಟರ್ (ಸಿಪಿಐ) ವೀರೇಂದ್ರ ಅವರು ರಸ್ತೆಯಲ್ಲಿ ವಾಹನಗಳ ನಿಯಂತ್ರಣ ಮಾಡುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಎತ್ತಿನಗಾಡಿಯನ್ನು ಕಂಡು ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸಿದ್ದಾರೆ. ಆದರೆ, ಓಡುವಷ್ಟರಲ್ಲಿ ನಿಯಂತ್ರಣ ತಪ್ಪಿದ ಎತ್ತಿನಗಾಡಿ ಅವರ ಮೈಮೇಲೆಯೇ ನುಗ್ಗಿದೆ.

ಪ್ರಾಣಾಪಾಯದಿಂದ ಜಸ್ಟ್ ಮಿಸ್!

ಇನ್ಸ್‌ಪೆಕ್ಟರ್ ವೀರೇಂದ್ರ ಅವರು ಕೆಳಗೆ ಬೀಳುತ್ತಿದ್ದಂತೆ ಎತ್ತಿನಗಾಡಿಯ ಚಕ್ರ ಅವರ ಮೇಲೆ ಹರಿದಿದೆ. ಅದೃಷ್ಟವಶಾತ್, ಅದು ಕಬ್ಬಿಣದ ಚಕ್ರದ ಗಾಡಿಯಾಗಿರದೆ ರಬ್ಬರ್ ಟೈರ್ ಗಾಡಿಯಾಗಿದ್ದರಿಂದ (ಟೈರ್ ಗಾಡಿ) ಇನ್ಸ್‌ಪೆಕ್ಟರ್ ಅವರಿಗೆ ಉಂಟಾಗಬಹುದಾದ ಭೀಕರ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಆದರೂ ಚಕ್ರ ಮೈಮೇಲೆ ಹರಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನೆ

ಘಟನೆ ನಡೆದ ತಕ್ಷಣವೇ ಸ್ಥಳೀಯರು ಸಹಾಯದಿಂದ ಗಾಯಾಳು ಸಿಪಿಐ ಅವರನ್ನು ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.