ಮಂಡ್ಯ ಜಿಲ್ಲೆಯ ನಾಗಮಂಗಲ ಬಳಿ ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿದ್ದ ಸ್ಕಾರ್ಪಿಯೋ ಕಾರು ಪಲ್ಟಿಯಾಗಿ 10ಕ್ಕೂ ಹೆಚ್ಚು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದು ಕಾರಿನಲ್ಲಿ 35 ಕರುಗಳನ್ನು ಬಾಯಿಗೆ ಬಟ್ಟೆ ಕಟ್ಟಿ ಅಮಾನವೀಯವಾಗಿ ಸಾಗಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಂಡ್ಯ (ಜ.30): ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿದ್ದ ಸ್ಕಾರ್ಪಿಯೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮಗುಚಿ ಬಿದ್ದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ಎಳೆ ಕರುಗಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಯರಗಟ್ಟಿ ಗೇಟ್ ಬಳಿ ನಡೆದಿದೆ
ಸ್ಕಾರ್ಪಿಯೋದಲ್ಲಿ 35 ಕರುಗಳ ತುರುಕಿದ್ದ ಕಟುಕರು!
ಕಟುಕರು ತಮ್ಮ ಕ್ರೌರ್ಯದ ಮಿತಿಯನ್ನೇ ಮೀರಿದ್ದು, ಕೇವಲ ಒಂದು ಸ್ಕಾರ್ಪಿಯೋ ಕಾರಿನಲ್ಲಿ ಬರೋಬ್ಬರಿ 35 ಎಳೆ ಕರುಗಳನ್ನು ಉಸಿರುಗಟ್ಟುವಂತೆ ತುರುಕಿದ್ದರು. ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಈ ಕರುಗಳನ್ನು ಕದ್ದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಓಡಿ ಬಂದಾಗ ಕಾರಿನೊಳಗಿದ್ದ ದೃಶ್ಯ ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಬಾಯಿಗೆ ಬಟ್ಟೆ ಕಟ್ಟಿ ನಡೆಸಿದ್ದ ಅಮಾನವೀಯ ಕೃತ್ಯ
ಸಾಗಾಣಿಕೆ ಮಾಡುವಾಗ ಕರುಗಳು ಕಿರುಚಬಾರದು ಮತ್ತು ಯಾರ ಗಮನಕ್ಕೂ ಬರಬಾರದು ಎಂಬ ಕಾರಣಕ್ಕೆ ನೀಚ ಕಟುಕರು ಪ್ರತಿ ಕರುವಿನ ಬಾಯಿಗೆ ಬಟ್ಟೆ ಕಟ್ಟಿದ್ದರು. ಉಸಿರಾಡಲು ಕಷ್ಟವಾಗುತ್ತಿದ್ದರೂ ಲೆಕ್ಕಿಸದೆ ಈ ರೀತಿ ಅಮಾನವೀಯವಾಗಿ ಸಾಗಾಟ ಮಾಡಲಾಗುತ್ತಿತ್ತು. ಅಪಘಾತದಲ್ಲಿ ಗಾಯಗೊಂಡಿರುವ ಉಳಿದ ಕರುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ಅವುಗಳ ನೆರವಿಗೆ ಧಾವಿಸಿದ್ದಾರೆ.
ಕಾರು ಬಿಟ್ಟು ಪರಾರಿಯಾದ ಕಟುಕರು, ಸ್ಥಳಕ್ಕೆ ಪೊಲೀಸರು ಭೇಟಿ
ಅಪಘಾತ ಸಂಭವಿಸುತ್ತಿದ್ದಂತೆ ಕರುಗಳ ಕಿರುಚಾಟಕ್ಕೆ ಹೆದರಿದ ಆರೋಪಿ, ಪೊಲೀಸರಿಗೆ ಸಿಕ್ಕಿಬೀಳುವ ಭೀತಿಯಿಂದ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿದ ತಕ್ಷಣ ನಾಗಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಾಯಗೊಂಡ ಕರುಗಳಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


