ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ರಾಟ್‌ವೀಲರ್ ನಾಯಿ ಮತ್ತು ನಾಗರಹಾವಿನ ನಡುವೆ ಭೀಕರ ಕಾಳಗ ನಡೆದಿದೆ. ತನ್ನ ಮಾಲೀಕರನ್ನು ರಕ್ಷಿಸಲು ಹೋರಾಡಿದ ನಾಯಿ, ಹಾವನ್ನು ಕೊಂದರೂ, ಹಾವಿನ ವಿಷದಿಂದ ತಾನೂ ಪ್ರಾಣ ಬಿಟ್ಟಿದೆ. ಈ ದುರಂತ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ರಾಟ್‌ವೀಲರ್ ತಳಿಯ ನಾಯಿಯೊಂದಕ್ಕೂ ಭಾರೀ ವಿಷಕಾರಿ ನಾಗರಹಾವಿನ ನಡುವೆ ನಡೆದ ಭೀಕರ ಕಾಳಗದಲ್ಲಿ, ಕೊನೆಗೆ ಎರಡೂ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಪೈಪೋಟಿ ಗ್ರಾಮಸ್ಥರಲ್ಲಿ ಆತಂಕ ಮತ್ತು ಅಚ್ಚರಿಯನ್ನು ಮೂಡಿಸಿದೆ.
ಪರಸ್ಪರ ಕಚ್ಚಾಡಿಕೊಂಡ ಹಾವು- ನಾಯಿ
ಗ್ರಾಮದ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಎದುರಾದ ನಾಗರಹಾವನ್ನು ಕಂಡ ರಾಟ್‌ವೀಲರ್ ನಾಯಿ, ತನ್ನ ಸ್ವಭಾವದಂತೆ ಹಾವಿನ ಮೇಲೆ ದಾಳಿ ನಡೆಸಿದೆ. ಇದರಿಂದ ಹಾವು ಕೂಡ ಪ್ರತಿದಾಳಿ ನಡೆಸಿ ನಾಯಿಯನ್ನು ಹಲವು ಬಾರಿ ಕಚ್ಚಿದೆ. ಎರಡೂ ಪ್ರಾಣಿಗಳ ಮಧ್ಯೆ ನಡೆದ ಈ ಭೀಕರ ಕಾಳಗವು ಸುಮಾರು ಒಂದು ಗಂಟೆಗಳ ಕಾಲ ಮುಂದುವರಿದಿದೆ.
ಹಾವನ್ನು ಕೊಂದ ನಾಯಿ
ಕಾಳಗದ ಅಂತ್ಯದಲ್ಲಿ ರಾಟ್‌ವೀಲರ್ ನಾಯಿ ತನ್ನ ಬಲಿಷ್ಠ ದವಡೆಯಿಂದ ನಾಗರಹಾವನ್ನು ಸಂಪೂರ್ಣವಾಗಿ ಕಚ್ಚಿ ಕೊಂದಿದೆ. ಆದರೆ ನಾಗರಹಾವಿನ ವಿಷಕಾರಿ ಕಡಿತದಿಂದ ನಾಯಿ ಕೂಡ ತೀವ್ರವಾಗಿ ಗಾಯಗೊಂಡಿತ್ತು. ಹಾವನ್ನು ಸಾಯಿಸಿದ ಬಳಿಕ ನಾಯಿ ತನ್ನ ಬೋನಿಗೆ ತೆರಳಿ ಮಲಗಿಕೊಂಡಿದ್ದು, ಸ್ವಲ್ಪ ಸಮಯದ ಬಳಿಕ ಅಲ್ಲಿಯೇ ಉಸಿರು ಚೆಲ್ಲಿದೆ. ಹಾವಿನ ವಿಷ ನಾಯಿಯ ದೇಹದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಚಿಕಿತ್ಸೆ ದೊರಕುವ ಮುನ್ನವೇ ನಾಯಿ ಮೃತಪಟ್ಟಿದೆ.
ಘಟನೆಯ ಬಳಿಕ ಮನೆಯವರು ನಾಗರಹಾವಿಗೆ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಾಯಿ ತನ್ನ ಮಾಲೀಕರನ್ನು ಹಾಗೂ ಮನೆ ಆವರಣವನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಾಣ ತ್ಯಾಗ ಮಾಡಿದೆ. ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಸಂಭವಿಸಿದ್ದು, ನಾಯಿ–ಹಾವು ನಡುವಿನ ದುಃಖಕರ ಕಾಳಗದ ವಿಡಿಯೋ ವೈರಲ್ ಆಗಿದೆ.


