ಬೆಂಗಳೂರಿನ ಸರ್ಜಾಪುರ ರಸ್ತೆಯ ಅಪೊಲೊ ಆಸ್ಪತ್ರೆಯಲ್ಲಿ, ಗರ್ಭಿಣಿ ಮಹಿಳೆಯೊಬ್ಬರ ಖಾಸಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ಹಿಡಿಯಲಾಗಿದೆ. ಆರೋಪಿಯ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಫೋಟೋಗಳು ಪತ್ತೆಯಾಗಿದ್ದು, ವರ್ತೂರು ಪೊಲೀಸರು ಆತನನ್ನು ಬಂಧಿಸಿ ದೂರು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು (ಮೇ 25): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುವ ಮುನ್ನ ರೋಗಿಗಳು ಹಾಗೂ ಅವರ ಕುಟುಂಬಸ್ಥರು ನೂರು ಬಾರಿ ಯೋಚನೆ ಮಾಡಬೇಕಾದ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. 'ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಎಷ್ಟು ಸೇಫ್?' ಎಂಬ ಗಂಭೀರ ಪ್ರಶ್ನೆಯೊಂದು ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ಯಡವಟ್ಟು, ನಿರ್ಲಕ್ಷ್ಯ ಹಾಗೂ ಅಪರಾಧ ಕೃತ್ಯಗಳ ಮೂಲಕವೇ ಸುದ್ದಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಸಾಲಿಗೆ ಈಗ ಮತ್ತೊಂದು ಆಘಾತಕಾರಿ ಘಟನೆ ಸೇರ್ಪಡೆಯಾಗಿದೆ.

ಕೆಲವೇ ದಿನಗಳ ಹಿಂದೆ ಒಂದು ಆಸ್ಪತ್ರೆಯಲ್ಲಿ ರೋಗಿಯ ಚಿನ್ನಾಭರಣ ಕಳ್ಳತನವಾಗಿದ್ದರೆ, ಮತ್ತೊಂದು ಆಸ್ಪತ್ರೆಯಲ್ಲಿ ಬರೋಬ್ಬರಿ 1.8 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ‘ರಾಡೋ’ (Rado) ವಾಚ್ ಕಳ್ಳತನವಾಗಿತ್ತು. ಈ ಕಳ್ಳತನದ ಬೆನ್ನಲ್ಲೇ, ಇದೀಗ ಆಸ್ಪತ್ರೆಯ ಶೌಚಾಲಯದಲ್ಲೇ ಗರ್ಭಿಣಿ ಮಹಿಳೆಯೊಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿರುವ ಅತ್ಯಂತ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ!
ಸರ್ಜಾಪುರ ಮುಖ್ಯರಸ್ತೆಯ ಆಸ್ಪತ್ರೆಯಲ್ಲಿ ನಡೆದಿದ್ದೇನು?
ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಪ್ರಸಿದ್ಧ 'ಅಪೊಲೊ ಬೆಲ್ಲೆಸನ್ ಚಾಂಪಿಯನ್ ಆಸ್ಪತ್ರೆ'ಯಲ್ಲಿ (Apollo Belleson Champion Hospital) ಈ ಘಟನೆ ನಡೆದಿದೆ. ಕಳೆದ ಮೇ 21 ರಂದು ಗರ್ಭಿಣಿ ಮಹಿಳೆಯೊಬ್ಬರು ತಪಾಸಣೆಗಾಗಿ ಈ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಆಸ್ಪತ್ರೆಯ ಶೌಚಾಲಯಕ್ಕೆ ತೆರಳಿದ್ದಾಗ, ಅಲ್ಲಿ ಹೊಂಚು ಹಾಕಿ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕಿಟಕಿಯ ಸಂದಿನಿಂದ ತನ್ನ ಮೊಬೈಲ್ ಮೂಲಕ ಗರ್ಭಿಣಿಯ ಫೋಟೋ ಹಾಗೂ ವಿಡಿಯೋ ಕ್ಲಿಕ್ ಮಾಡಿದ್ದಾನೆ.
ತಕ್ಷಣ ಎಚ್ಚೆತ್ತುಕೊಂಡ ಮಹಿಳೆ, ಹೊರಗೆ ಬರುತ್ತಿದ್ದಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ (Management) ಘಟನೆಯ ಬಗ್ಗೆ ಮಾಹಿತಿ ನೀಡಿ ತರಾಟೆಗೆ ತಗೆದುಕೊಂಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ತಕ್ಷಣವೇ ಆ ವ್ಯಕ್ತಿಯನ್ನು ಹಿಡಿದು, ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಅಲ್ಲಿ ಇಡೀ ಆಸ್ಪತ್ರೆಯ ಸಿಬ್ಬಂದಿಯನ್ನೇ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ.
ಮೊಬೈಲ್ ಫೋಲ್ಡರ್‌ನಲ್ಲಿ ಲಾಕ್ ಆಗಿದ್ದವು ಹಲವು ಮಹಿಳೆಯರ ಫೋಟೋಗಳು!
ಹಿಡಿಯಲ್ಪಟ್ಟ ವ್ಯಕ್ತಿಯ ಮೊಬೈಲ್ ಪರಿಶೀಲಿಸಿದಾಗ, ಆತ ತನ್ನ ಫೋನ್‌ನಲ್ಲಿ ಪ್ರತ್ಯೇಕ 'ಫ್ಲೋಲ್ಡರ್' ಒಂದನ್ನು ಸೃಷ್ಟಿಸಿ ಅದಕ್ಕೆ ರಹಸ್ಯ ಲಾಕ್ ಹಾಕಿಕೊಂಡಿದ್ದ. ಅದನ್ನು ಅನ್‌ಲಾಕ್ ಮಾಡಿ ನೋಡಿದಾಗ, ಕೇವಲ ಈ ಗರ್ಭಿಣಿ ಮಹಿಳೆ ಮಾತ್ರವಲ್ಲದೆ, ಆಸ್ಪತ್ರೆಗೆ ಬಂದಿದ್ದ ಇನ್ನೂ ಹಲವು ಮಹಿಳೆಯರ ರಹಸ್ಯ ಫೋಟೋಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಗರ್ಭಿಣಿ ಮಹಿಳೆ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಆರೋಪಿಯ ಗುರುತು ಪತ್ತೆ: ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತಂದ ಈ ವಿಕೃತ ಮನಸ್ಸಿನ ಕಾಮುಕನನ್ನು ಕೃಷ್ಣ ಪರಾಗಿ ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲೇ ಈತ ಇಂತಹ ನೀಚ ಕೃತ್ಯ ಎಸಗುತ್ತಿರುವುದು ಸ್ಪಷ್ಟವಾಗಿದೆ.
ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು, ಆರೋಪಿ ಬಂಧನ
ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ತಕ್ಷಣವೇ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ವಿಕೃತಕಾಮಿ ಕೃಷ್ಣ ಪರಾಗಿ ಮಾತ್ರವಲ್ಲದೆ, ರೋಗಿಗಳಿಗೆ ಹಾಗೂ ಮಹಿಳೆಯರಿಗೆ ಸೂಕ್ತ ಭದ್ರತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಬೆಲ್ಲೆಸನ್ ಚಾಂಪಿಯನ್ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧವೂ ದೂರು ದಾಖಲಿಸಲಾಗಿದೆ.
ದೂರನ್ನು ಗಂಭೀರವಾಗಿ ಪರಿಗಣಿಸಿರುವ ವರ್ತೂರು ಠಾಣೆಯ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ಕೃಷ್ಣ ಪರಾಗಿಯನ್ನು ಬಂಧಿಸಿ ಕಠಿಣ ತನಿಖೆಗೆ ಒಳಪಡಿಸಿದ್ದಾರೆ. ಆತನ ಮೊಬೈಲ್ ಅನ್ನು ಜಪ್ತಿ ಮಾಡಲಾಗಿದ್ದು, ಆತ ಇದುವರೆಗೆ ಎಷ್ಟು ಮಹಿಳೆಯರ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾನೆ ಮತ್ತು ಅವುಗಳನ್ನು ಬೇರೆಲ್ಲೂ ಶೇರ್ ಮಾಡಿದ್ದಾನೆಯೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ. ಈ ಘಟನೆ ಬೆಂಗಳೂರಿನ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


