ನರೇಗಾ ಯೋಜನೆ ಕುರಿತು ವಿಪಕ್ಷಗಳು ನೀಡಿದ ಬಹಿರಂಗ ಚರ್ಚೆಯ ಸವಾಲನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವೀಕರಿಸಿದ್ದಾರೆ. ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ಧವಿದ್ದು, ಮೊದಲು ಕುಮಾರಸ್ವಾಮಿಯವರು ಬಂದರೆ ಉತ್ತಮ ಎಂದು ಅವರು ಆಹ್ವಾನ ನೀಡಿದ್ದಾರೆ.

ಬೆಂಗಳೂರು: ನರೇಗಾ ವಿಚಾರವಾಗಿ ಬಹಿರಂಗ ಚರ್ಚೆಯ ವಿಪಕ್ಷಗಳ ಪಂಥಾಹ್ವಾನವನ್ನು ನಾನು ಸ್ವೀಕರಿಸುವೆ. ಸಾರ್ವಜನಿಕ ವೇದಿಕೆ, ಅಧಿವೇಶನ ಅಥವಾ ಮಾಧ್ಯಮ ವೇದಿಕೆಯಾದರೂ ಸರಿ. ಚರ್ಚೆಗೆ ನಾನು ಸಿದ್ಧ. ಮೊದಲು ‘ಡೈಲಾಗ್‌ ವೀರ ಕುಮಾರಸ್ವಾಮಿ’ ಅವರು ಬಂದರೆ ಒಳ್ಳೆಯದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿರೋಧ ಪಕ್ಷದವರು ನರೇಗಾ ವಿಚಾರವಾಗಿ ಚರ್ಚೆಗೆ ಸಿದ್ಧ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಯಾರು ಬೇಕಾದರೂ ಬರಲಿ. ಅವರ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ. ಅವರು ಯಾವುದೇ ಮಾಧ್ಯಮ, ವೇದಿಕೆ, ಇಲ್ಲವೇ ಅಧಿವೇಶನದಲ್ಲಿ ಚರ್ಚಿಸುವುದಾದರೂ ನಾನು ಆ ಚರ್ಚೆಗೆ ಸಿದ್ಧ ಎಂದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಚರ್ಚೆಗೆ ಸಿದ್ಧ ಎಂದಿದ್ದಾರಲ್ಲ ಎಂದು ಕೇಳಿದಾಗ, ನಾನು ಅವರನ್ನೂ ಸ್ವಾಗತಿಸುತ್ತೇನೆ. ಮೊದಲು ಅವರೇ ಬಂದರೆ ಬಹಳ ಒಳ್ಳೆಯದು ಎಂದರು.

ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ‘ಲೀಸ್ಡ್ ಸಿಎಂ’ ಎಂದು ಟೀಕಿಸಿರುವ ಬಗ್ಗ ಪ್ರತಿಕ್ರಿಯಿಸಿದ ಶಿವಕುಮಾರ್‌, ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಮೊದಲಿನಿಂದ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆದು ಹೋಗುವುದನ್ನು ನೋಡಿದ್ದೇವೆ. ಅವರ ಟೀಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡುತ್ತಾರೆ. ಆ ಸಾಮರ್ಥ್ಯ ಅವರಿಗಿದೆ ಎಂದರು.

ಅವರೇ ಸಮಯ ನಿಗದಿ ಮಾಡಲಿ:

ಬಹಿರಂಗ ಚರ್ಚೆಗೆ ಯಾವಾಗ ಸಮಯ ನಿಗದಿ ಮಾಡುತ್ತೀರಾ ಹೇಳಿ. ಇಂದು ಸಂಜೆಯಿಂದಲೇ ಚರ್ಚೆಗೆ ಸಿದ್ಧ. ನರೇಗಾ ವಿಚಾರದಲ್ಲಿ ನನಗೆ ಚರ್ಚೆ ಮಾಡಲು ಯಾವ ತಯಾರಿಯೂ ಬೇಕಾಗಿಲ್ಲ. ಎಲ್ಲಾ ಮಾಹಿತಿಗಳು ನನ್ನ ಬೆರಳ ತುದಿಯಲ್ಲಿವೆ. ನರೇಗಾ ಯೋಜನೆಯಲ್ಲಿ ನಮ್ಮ ಕನಕಪುರ ತಾಲೂಕಿನಲ್ಲಿ ಎಷ್ಟು ಕೆಲಸ ಆಗಿದೆ ಎಂದು ನಮಗೆ ಗೊತ್ತಿದೆ. ನರೇಗಾ ಯೋಜನೆ ಜಾರಿಯಲ್ಲಿ ಕನಕಪುರ ನಂ.1 ಎಂದು ಬಿಜೆಪಿಯ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ಈ ವಿಚಾರ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಜಯೇಂದ್ರ ಅವರಿಗೆ ಗೊತ್ತಿದೆಯೋ, ಇಲ್ಲವೋ?. ನಮ್ಮ ತಾಲೂಕಿನಲ್ಲಿ ಅವ್ಯವಹಾರ ಆಗಿದೆಯೇ, ಇಲ್ಲವೇ ಎಂದು ಕೇಂದ್ರ ಸರ್ಕಾರ ಹತ್ತು ತಂಡ ಕಳುಹಿಸಿ ತನಿಖೆ ಮಾಡಿಸಿದೆ ಎಂದು ತಿಳಿಸಿದರು.