ವಿಧಾನ ಪರಿಷತ್ ಸಭಾಪತಿ ಬದಲಾವಣೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ಒತ್ತಾಯಿಸುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಪರ ಒಲವು ತೋರಿದ್ದು, ಬೆಳಗಾವಿ ಅಧಿವೇಶನದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆಯಿದೆ.
ಬೆಂಗಳೂರು (ನ.22): ಸದ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬಣ ರಾಜಕೀಯದೊಳಗೆ ಇದೀಗ ವಿಧಾನ ಪರಿಷತ್ ಸಭಾಪತಿ ಮತ್ತು ಉಪಸಭಾಪತಿ ಬದಲಾವಣೆ ವಿಚಾರವೂ ಸೇರ್ಪಡೆಯಾಗಿದೆ.
ಕಾಂಗ್ರೆಸ್ ಪಕ್ಷದವರೇ ಸಭಾಪತಿ?
ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದವರನ್ನೇ ಸಭಾಪತಿ ಹಾಗೂ ಉಪಸಭಾಪತಿಯಾಗಿ ಆಯ್ಕೆ ಮಾಡಲು ಮುಂದಾಗುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಳಿ ಆಯ್ದ ಶಾಸಕರು ಚರ್ಚಿಸಿದ್ದಾರೆ. ಆದರೆ ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಮಾತ್ರ ಮುಗುಂ ಆಗಿದೆ.
ಡಿ.13ರಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬೆಳಗಾವಿಯಲ್ಲಿ ಸನ್ಮಾನಿಸುವ ಕಾರ್ಯಕ್ರಮವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭಾಗಿಯಾಗಲಿದ್ದಾರೆ. ಸಿದ್ದರಾಮಯ್ಯ ಸೇರಿ ಅನೇಕ ಶಾಸಕರು ಹೊರಟ್ಟಿ ಅವರ ಪರವಾಗಿದ್ದಾರೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿಯೇ ಅತ್ಯಂತ ಹಿರಿಯ ಸದಸ್ಯರಾಗಿರುವ ಅವರನ್ನು ಸಭಾಪತಿ ಸ್ಥಾನದಿಂದ ಏಕಾಏಕಿ ಕೆಳಗಿಳಿಸುವ ಸಾಧ್ಯತೆ ಕಡಿಮೆ. ಬದಲಾಗಿ ಮುಂದಿನ ವರ್ಷ ನಡೆಯಲಿರುವ ಮೊದಲ ಅಧಿವೇಶನದ ಹೊತ್ತಿಗೆ ಬದಲಾವಣೆ ಮಾಡುವ ಸಂಭವವಿದೆ. ಸಭಾಪತಿ ಸ್ಥಾನ ಬದಲಾವಣೆಗೆ ಮುಂದಾದರೆ ತಾವು ತಕ್ಷಣ ರಾಜೀನಾಮೆ ನೀಡುವುದಾಗಿ ಬಸವರಾಜ ಹೊರಟ್ಟಿ ಅವರು ಈಗಾಗಲೇ ಹಲವಾರು ಬಾರಿ ಹೇಳಿದ್ದಾರೆ.
ಒಂದು ಸಂಖ್ಯೆ ಕೊರತೆ:
75 ಸದಸ್ಯರನ್ನು ಹೊಂದಿರುವ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ 37, ಬಿಜೆಪಿ 29, ಜೆಡಿಎಸ್ 7 ಸದಸ್ಯರನ್ನು ಹೊಂದಿದೆ. ಪಕ್ಷೇತರ 1, ಸಭಾಪತಿ 1 ಇದ್ದಾರೆ. ಬಹುಮತ ಪಡೆಯಲು ಕಾಂಗ್ರೆಸ್‌ಗೆ ಒಬ್ಬ ಸದಸ್ಯರ ಬೆಂಬಲ ಬೇಕು. ಪಕ್ಷೇತರ ಸದಸ್ಯರಾಗಿರುವ ಲಖನ್ ಜಾರಕಿಹೊಳಿ ಅವರ ಬೆಂಬಲ ಪಡೆದರೆ ಸುಲಭವಾಗಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಪಡೆಯಬಹುದು.


