ದೆಹಲಿ ಬಾಂಬ್ ಸ್ಫೋಟದಲ್ಲಿಯೂ ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ಸೇರಿದಂತೆ ಅನೇಕ ನಾಯಕರು ರಾಜಕೀಯ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತೀವ್ರ ವಾಗ್ದಾಳಿ ಮಾಡಿದ್ದಾರೆ.
ಕೊಪ್ಪಳ (ನ.14): ದೆಹಲಿ ಬಾಂಬ್ ಸ್ಫೋಟದಲ್ಲಿಯೂ ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ಸೇರಿದಂತೆ ಅನೇಕ ನಾಯಕರು ರಾಜಕೀಯ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತೀವ್ರ ವಾಗ್ದಾಳಿ ಮಾಡಿದ್ದಾರೆ. ಮುನಿರಾಬಾದ್ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ವಿಧ್ವಂಸಕ ಕೃತ್ಯ ಪತ್ತೆ ಮಾಡಿ ತಡೆದಿದ್ದು, ಅದರಲ್ಲಿ ತಪ್ಪಿಸಿಕೊಂಡು ಬಂದಿರುವ ಓರ್ವನಿಂದ ದೆಹಲಿಯಲ್ಲಿ ಸ್ಫೋಟವಾಗಿದೆ. ಇಡೀ ಪ್ರಕರಣವನ್ನು 24 ಗಂಟೆಯಲ್ಲಿ ಜಾಲಾಡಿದ್ದಾರೆ. ಇಂಥ ಸ್ಥಿತಿಯಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೇಂದ್ರದ ಕುರಿತು ಮಾತನಾಡುವುದು ಬಿಟ್ಟು ಬೇರೆ ವಿಷಯ ಇಲ್ಲ. ಪದೇ ಪದೇ ಕೇಂದ್ರದ ಮೇಲೆಯೇ ಗೂಬೆ ಕೂರಿಸುವುದಕ್ಕಾಗಿ ನೋಡುತ್ತಾರೆಯೇ ಹೊರತು ತಮ್ಮದೇನು ತಪ್ಪು ಎನ್ನುವ ಅರಿವಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕುರಿತು ಮಾತನಾಡುವುದನ್ನು ಬಿಡಲಿ ಎಂದರು. ರಾಜ್ಯದಲ್ಲಿನ ಪರಪ್ಪನ ಅಗ್ರಹಾರದಲ್ಲಿ ಏನಾಗುತ್ತಿದೆ ಎನ್ನುವುದು ಜಗತ್ತಿಗೆ ಗೊತ್ತಾಗಿದೆ. ರಾಯರಡ್ಡಿ ಅವರು ಈ ವಿಷಯದ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಜೈಲಿನಲ್ಲಿದ್ದವರು ರೆಸಾರ್ಟ್‌ನಲ್ಲಿ ಕುಣಿದು ಕುಪ್ಪಳಿಸಿದಂತೆ ಕುಣಿಯುತ್ತಿದ್ದಾರೆ. ಇದ್ಯಾವುದೂ ಅವರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.
ರಾಜಕೀಯ ಮಾಡಬಾರದು
ದೆಹಲಿ ಬಾಂಬ್ ಸ್ಫೋಟದಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮುನಿರಾಬಾದ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆ ಗೊತ್ತಿದ್ದರೆ ಮತ್ತು ಅದನ್ನು ನಮ್ಮ ಗೃಹ ಇಲಾಖೆಯ ಪತ್ತೆ ಮಾಡಿದ ರೀತಿ ಗೊತ್ತಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ ಎಂದರು. ಈ ಹಿಂದೆ ತಾಜ್ ಹೋಟೆಲ್‌ನಲ್ಲಿ ದಾಳಿಯಾದಾಗ ಯಾವ ಸರ್ಕಾರ ಇತ್ತು? ಆಗ ಯಾರು ರಾಜೀನಾಮೆ ನೀಡಿದ್ದರು? ದೇಶದ ವಿಷಯದಲ್ಲಿಯೂ ರಾಜಕೀಯ ಮಾಡುವುದನ್ನು ಬಿಡಬೇಕು. ಉಗ್ರರನ್ನು ಮಟ್ಟ ಹಾಕಲು ಈಗಾಗಲೇ ಕೇಂದ್ರ ಸರ್ಕಾರ ದೃಢ ನಿರ್ಧಾರ ಮಾಡಿದೆ. ವಿಧ್ವಂಸಕ ಕೃತ್ಯಗಳನ್ನು ಮೊದಲೇ ಪತ್ತೆ ಮಾಡಿ, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ ಎಂದರು.
