2021ರ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳು ಕಳೆದ ಐದು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ರಾಜ್ಯ ಸರ್ಕಾರವು ಸಂತ್ರಸ್ತ ಕುಟುಂಬಗಳ ಅರ್ಹ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲು ಏ.21 ರಂದು ಸಿದ್ದರಾಮಯ್ಯ ನೇಮಕಾತಿ ಆದೇಶ ಪತ್ರ ವಿತರಿಸಲಿದ್ದಾರೆ.
ಚಾಮರಾಜನಗರ (ಏ.19): ಆ ಕರಾಳ ರಾತ್ರಿಯ ಘೋರ ದುರಂತ ನಡೆದು ಇಂದಿಗೆ ಸುಮಾರು 5 ವರ್ಷಗಳಾಗುತ್ತಾ ಬಂದಿವೆ. ಉಸಿರಾಡಲು ಆಕ್ಸಿಜನ್ ಸಿಗದೆ ಪ್ರಾಣಪಕ್ಷಿ ಹಾರಿಹೋದ ಆ ನೋವಿನ ನೆನಪುಗಳು ಇಂದಿಗೂ ಸಂತ್ರಸ್ತ ಕುಟುಂಬಗಳನ್ನು ಕಾಡುತ್ತಿವೆ. ಆದರೆ, ಸಂಕಷ್ಟದಲ್ಲಿದ್ದ ಆ ಕುಟುಂಬಗಳಿಗೆ ಇದೀಗ ಮರುಜೀವ ಸಿಕ್ಕಂತಾಗಿದೆ. ಕಳೆದ ಹಲವು ವರ್ಷಗಳಿಂದ ನಡೆಸುತ್ತಿದ್ದ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ರಾಜ್ಯ ಸರ್ಕಾರ ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ನೌಕರಿಯನ್ನು ನೀಡಲು ಮುಂದಾಗಿದೆ.
ಏಪ್ರಿಲ್ 21ಕ್ಕೆ ನೇಮಕಾತಿ ಆದೇಶ ವಿತರಣೆ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಏಪ್ರಿಲ್ 21ರಂದು ಆಯೋಜಿಸಲಾಗಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಅಧಿಕೃತವಾಗಿ ಸರ್ಕಾರಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಿದ್ದಾರೆ. ಮೊದಲ ಹಂತದಲ್ಲಿ ಅರ್ಹತೆ ಹೊಂದಿರುವ 21 ಮಂದಿಗೆ ಈ ಸರ್ಕಾರಿ ಉದ್ಯೋಗದ ಭಾಗ್ಯ ಸಿಗಲಿದೆ.
ಏನಿದು ಘಟನೆ? ಅಂದು ನಡೆದಿದ್ದೇನು?
2021ರ ಮೇ 2ರಂದು ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿತ್ತು. ಕೊರೋನಾ ಎರಡನೇ ಅಲೆಯ ವೇಳೆ ಆಕ್ಸಿಜನ್ ಕೊರತೆಯಿಂದಾಗಿ ಒಂದೇ ರಾತ್ರಿ ಸುಮಾರು 36ಕ್ಕೂ ಹೆಚ್ಚು ಮಂದಿ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕುಟುಂಬದ ಆಧಾರ ಸ್ತಂಭಗಳನ್ನೇ ಕಳೆದುಕೊಂಡ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಅಂದಿನಿಂದ ಇಂದಿನವರೆಗೆ ಈ ಕುಟುಂಬಗಳು ತಮಗೆ ನ್ಯಾಯ ಬೇಕು ಮತ್ತು ಜೀವನೋಪಾಯಕ್ಕಾಗಿ ಸರ್ಕಾರಿ ನೌಕರಿ ನೀಡಬೇಕು ಎಂದು ಸತತವಾಗಿ ಹೋರಾಟ ನಡೆಸುತ್ತಾ ಬಂದಿದ್ದರು.
ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನೀಡಿದ್ದ ಭರವಸೆ
ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮತ್ತು 'ಭಾರತ್ ಜೋಡೋ ಯಾತ್ರೆ'ಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ನೀಡಿದ ಮಾತಿನಂತೆ ಸಿದ್ದರಾಮಯ್ಯ ಸರ್ಕಾರ ತನ್ನ ಭರವಸೆಯನ್ನು ಈಡೇರಿಸುತ್ತಿದೆ.
ವಿದ್ಯಾರ್ಹತೆಗೆ ತಕ್ಕಂತೆ ನೌಕರಿ
ಸಂತ್ರಸ್ತ ಕುಟುಂಬದ ಸದಸ್ಯರ ವಿದ್ಯಾರ್ಹತೆಯನ್ನು ಪರಿಗಣಿಸಿ ಅವರಿಗೆ ಸೂಕ್ತವಾದ ಹುದ್ದೆಗಳನ್ನು ನೀಡಲಾಗುತ್ತಿದೆ. ಪ್ರಮುಖವಾಗಿ ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲೇ (CIMS) ಈ ಉದ್ಯೋಗಗಳನ್ನು ನೀಡಲಾಗುತ್ತಿದ್ದು, ಇದು ಸಂತ್ರಸ್ತರಿಗೆ ತಮ್ಮ ಸ್ವಂತ ಜಿಲ್ಲೆಯಲ್ಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಐದು ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಹೋರಾಟದ ನಂತರ ಸಂತ್ರಸ್ತರ ಕಣ್ಣೀರು ವೊರೆಸುವ ಕೆಲಸಕ್ಕೆ ಸರ್ಕಾರ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸರ್ಕಾರಿ ಉದ್ಯೋಗ ಪಡೆದವರ ಪಟ್ಟಿ ಇಲ್ಲಿದೆ ನೋಡಿ.




