ಮೈಸೂರು ಜಿಲ್ಲೆಯ ಟಿ.ನರಸೀಪುರದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ(ಕೆಎಸ್ಐಸಿ) ಫಿಲೇಚರ್ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣದ ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ವಿಧಾನಸಭೆ (ಮಾ.10): ಮೈಸೂರು ಜಿಲ್ಲೆಯ ಟಿ.ನರಸೀಪುರದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ(ಕೆಎಸ್ಐಸಿ) ಫಿಲೇಚರ್ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣದ ಪ್ರಸ್ತಾಪವನ್ನು ಕೈಬಿಡಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿಯ ಟಿ.ಎಸ್.ಶ್ರೀವತ್ಸ ಅವರ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸುವಾಗ, ಈ ವಿಚಾರ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕ್ರೀಡಾಂಗಣ ನಿರ್ಮಾಣಕ್ಕೆ ಕಾರ್ಖಾನೆ ಜಾಗ ನೀಡದಂತೆ ಆಗ್ರಹಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವರು, ‘ಈ ಕಾರ್ಖಾನೆ ಜಾಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಜಾಗದ ವಿಚಾರದಲ್ಲಿ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಹೀಗಾಗಿ ಆ ಪ್ರಸ್ತಾವವನ್ನು ಕೈಬಿಡಲಾಗಿದೆ’ ಎಂದು ಹೇಳಿದರು.
ಮೈಸೂರು ಸಿಲ್ಕ್‌ಗೆ ಭಾರೀ ಬೇಡಿಕೆ: ಮೈಸೂರು ಸಿಲ್ಕ್ ಸೀರೆಗಳಿಗೆ ಇರುವ ಬೇಡಿಕೆ ಬಗ್ಗೆ ಮಾತನಾಡಿದ ಸಚಿವರು, ‘ಪ್ರಸ್ತುತ ದಿನಕ್ಕೆ 350-450 ಸೀರೆ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಯಾರಿಕೆ ಹೆಚ್ಚಿಸುವ ಚಿಂತನೆಯಿದೆ. ಸ್ಥಳೀಯರಿಗೆ ಮೊದಲು ಸೀರೆಗಳು ಸಿಗುವಂತೆ ಮಾಡಲು ಆನ್‌ಲೈನ್ ಬುಕಿಂಗ್ ಸ್ಥಗಿತಗೊಳಿಸಲು ಚಿಂತಿಸಲಾಗಿದೆ. ಬೇಡಿಕೆಯಷ್ಟು ಸೀರೆಗಳನ್ನು ಪೂರೈಸಿಲು ಕಾರ್ಖಾನೆ ವಿಸ್ತರಿಸುವ ಆಲೋಚನೆಯೂ ಇದೆ’ ಎಂದು ತಿಳಿಸಿದರು. ಕೆಎಸ್‌ಐಸಿಯಿಂದ 2022-23, 2023-24, 2024-25 ಸಾಲಿನಲ್ಲಿ ಒಟ್ಟು 3,10,667 ಸೀರೆಗಳನ್ನು ತಯಾರಿಸಲಾಗಿದೆ. ಈ ಪೈಕಿ 3,09,659 ಸೀರೆಗಳನ್ನು ಮಾರಾಟ ಮಾಡಲಾಗಿದೆ. ಈ ಮೂರು ವರ್ಷಗಳ ಸೀರೆ ಮಾರಾಟದಿಂದ 101.15 ಕೋಟಿ ರು. ನಿವ್ವಳ ಲಾಭ ಗಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ತಿಂಗಳಿಗೆ 7,500 ಮೀ ಹೆಚ್ಚು ಉತ್ಪಾದನೆ: ಮೈಸೂರು ರೇಷ್ಮೆ ಸೀರೆ ಮಾರಾಟ ಸರಳಗೊಳಿಸಲು ಮತ್ತು ಗ್ರಾಹಕರಿಗೆ ಸೀರೆಗಳನ್ನು ದೊರಕಿಸಿಕೊಡಲು ರೇಷ್ಮೆ ನೇಯ್ಗೆ ಕಾರ್ಖಾನೆಯ ಸಂಯೋಜಿತ ರೇಷ್ಮೆ ನೇಯ್ಗೆ ಘಟಕ-2ರಲ್ಲಿ 10 ಇ-ಜಕಾರ್ಡ್ ಮಗ್ಗಗಳನ್ನು ಹಾಕಲಾಗಿದೆ. ರೇಷ್ಮೆ ನೇಯ್ಗೆ ಘಟಕ ಚನ್ನಪಟ್ಟಣದಲ್ಲಿ 20 ಇ-ಜಕಾರ್ಡ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಪ್ರತಿ ತಿಂಗಳು 7,500 ಮೀಟರ್ ಹೆಚ್ಚುವರಿ ಉತ್ಪಾದಿಸಲಾಗುತ್ತಿದೆ ಎಂದು ಹೇಳಿದರು.
ವೇತನ ಹೆಚ್ಚಳಕ್ಕೆ ಆಗ್ರಹ: ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ‘ಮೈಸೂರು ಸಿಲ್ಕ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಆರಂಭದ 11 ತಿಂಗಳು ಮಾಸಿಕ ಕೇವಲ 3 ಸಾವಿರ ರು.ವೇತನ ಕೊಡಲಾಗುತ್ತಿದೆ. ಕನಿಷ್ಠ ವೇತನವೇ 18 ಸಾವಿರ ರು. ಇದೆ. ಈ ವರ್ಷವೇ ಕೆಎಸ್ಐಸಿ 96 ಕೋಟಿ ರು. ಲಾಭದಲ್ಲಿದೆ. ಇದರಲ್ಲಿ 1 ಕೋಟಿ ರು. ತೆಗೆದರೂ ನೌಕರರಿಗೆ ಕನಿಷ್ಠ ವೇತನ ನೀಡಬಹುದು’ ಎಂದು ಹೇಳಿದರು.
ಕಾರ್ಖಾನೆ ಮುಚ್ಚಬೇಡಿ
‘ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಲಾಭದಲ್ಲಿರುವುದು ಅಪರೂಪ. ಲಾಭದಲ್ಲಿರುವ ಕೆಎಸ್‌ಐಸಿ ಸಂಸ್ಥೆ ಮುಚ್ಚಲು ಹೊರಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಮುಚ್ಚಬಾರದು. 12 ಎಕರೆ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಕೊಡಲು ಮುಂದಾಗಿದ್ದಾರೆ. ಇದನ್ನು ಕೂಡಲೇ ರದ್ದು ಮಾಡಬೇಕು’ ಎಂದು ಆಗ್ರಹಿಸಿದರು. ಸಚಿವ ಬೈರತಿ ಸುರೇಶ್ ಸಹ ಕಾರ್ಖಾನೆ ಮುಚ್ಚದಂತೆ ಮತ್ತು ನೌಕರರಿಗೆ ಹೆಚ್ಚಿನ ವೇತನ ಕೊಡುವಂತೆ ಒತ್ತಾಯಿಸಿದರು. ಇದಕ್ಕೆ ಸಚಿವ ಕೆ.ವೆಂಕಟೇಶ್, ಕೆಎಸ್‌ಐಸಿ ನೌಕರಿರಗೆ ತರಬೇತಿ ವೇಳೆ ಮಾಸಿಕ 3 ಸಾವಿರ ರು. ಕೊಡುತ್ತೇವೆ. ಬಳಿಕ 15 ಸಾವಿರ ರು. ವೇತನ ನೀಡಲಾಗುತ್ತಿದೆ. ಇನ್ನು ಕಾರ್ಖಾನೆ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ನೀಡುವ ಪ್ರಸ್ತಾಪ ಕೈಬಿಡಲಾಗಿದೆ ಎಂದು ಹೇಳಿದರು. ಈ ತೀರ್ಮಾನಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಧನ್ಯವಾದ ಹೇಳಿದರು.


