ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಏ.16 ಮತ್ತು 17ರಂದು ನಡೆದ ಸಿಇಟಿ ಪರೀಕ್ಷೆ ವೇಳೆ ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದ ರೀತಿಯಲ್ಲಿಯೇ ಧಾರವಾಡದಲ್ಲೂ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ (ಏ.21): ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಏ.16 ಮತ್ತು 17ರಂದು ನಡೆದ ಸಿಇಟಿ ಪರೀಕ್ಷೆ ವೇಳೆ ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದ ರೀತಿಯಲ್ಲಿಯೇ ಧಾರವಾಡದಲ್ಲೂ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿಯ ರಾಘವೇಂದ್ರ ನಗರದ ನಂದನ್ ಏರಿ ಎಂಬ ವಿದ್ಯಾರ್ಥಿ ಏ.16ರಂದು ಹುರಕಡ್ಲಿ ಅಜ್ಜ ಕಾನೂನು ಕಾಲೇಜಿಗೆ ಸಿಇಟಿ ಬರೆಯಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುವಾಗ ನಂದನ್ ಧರಿಸಿದ್ದ ಜನಿವಾರ ತೆಗೆಯಲು ಹೇಳಿದ್ದಾರೆ. ಆದರೆ, ನಂದನ್ ಇದಕ್ಕೆ ಒಪ್ಪದಿದ್ದಾಗ, ಅದನ್ನು ಧರಿಸಿದರೆ ಪರೀಕ್ಷಾ ಕೊಠಡಿಗೆ ಬಿಡುವುದಿಲ್ಲ ಎಂದಿದ್ದಾರೆ. ಅಷ್ಟರಲ್ಲೇ ಜನಿವಾರ ಕತ್ತರಿಸಲು ಸಿಬ್ಬಂದಿ ಮುಂದಾದಾಗ, ಬೇಡ ಬ್ಯಾಗ್ನಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿದರೂ ಸ್ಪಂದಿಸದೆ ಜನಿವಾರ ಕತ್ತರಿಸಿ ಮರಳಿ ನಂದನ್ ಕೈಗೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ: ಪೇಜಾವರ ಶ್ರೀ ಸೇರಿ ನಾಲ್ವರು ಶ್ರೀಗಳು ಏನು ಹೇಳಿದ್ರು?
ನಂದನ್, ಈ ವಿಚಾರವನ್ನು ಯಾರ ಬಳಿಯೂ ಹೇಳಿರಲಿಲ್ಲ. 2ನೇ ದಿನವೂ ಜನಿವಾರ ಇಲ್ಲದೆ ಪರೀಕ್ಷೆಗೆ ಬಂದಿದ್ದ. ಆದರೆ, ರಾಜ್ಯದ ವಿವಿಧ ಕಡೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಈ ವಿಚಾರವನ್ನು ತಂದೆ ಮುಂದೆ ಪ್ರಸ್ತಾಪಿಸಿದ್ದಾನೆ. ತಂದೆ ವಿವೇಕ ಏರಿ, ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ.
ಹಿಂದೂ ಸಂಘಟನೆಗಳ ಕಿಡಿ:
ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ವಿಷಯ ಗೊತ್ತಾಗುತ್ತಿದ್ದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರು ಭಾನುವಾರ ಮಧ್ಯಾಹ್ನ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಸಂಬಂಧ ವಿದ್ಯಾರ್ಥಿಗಳ ತಂದೆ-ತಾಯಿ ಬಳಿ ಕ್ಷಮೆ ಕೇಳಬೇಕು. ಹಿಂದೂ ವಿದ್ಯಾರ್ಥಿಗಳನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ. ಹಿಜಾಬ್, ಬುರ್ಖಾಗೆ ಅವಕಾಶ ಕೊಡುವ ಸರ್ಕಾರಕ್ಕೆ, ಆ ಧರ್ಮದ ಬಗ್ಗೆ ಮಾತನಾಡುವ ಧೈರ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿದರೆ ಶಿಕ್ಷೆ : ಡಿಸಿಎಂ
ಬೆಳ್ತಂಗಡಿ : ಧರ್ಮಾಚರಣೆಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಹಿರಿಯರು ಮಾಡಿರುವ ಆಚರಣೆಗಳಿಗೆ ಅಡ್ಡಿ ಮಾಡಿದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸರ್ಕಾರ ಬದ್ಧವಿದೆ. ಆಚರಣೆಗಳನ್ನು ಅನುಸರಿಸಲು ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸಿಇಟಿ ಪರೀಕ್ಷೆ ವೇಳೆ ಜನಿವಾರ ಧರಿಸಿದ ಅಭ್ಯರ್ಥಿಗಳಿಗೆ ಅಡ್ಡಿಪಡಿಸಿದ ವಿಚಾರ ಕುರಿತು ಮಾತನಾಡಿ, ಧರ್ಮ, ಧರ್ಮಾಚರಣೆ ಉಳಿಸಲು ಸರ್ಕಾರ ಸದಾ ಬದ್ಧವಾಗಿದೆ. ಇದನ್ನು ಶೃಂಗೇರಿ ಶ್ರೀಗಳ ಪಾದಾರವಿಂದಗಳಲ್ಲಿ ಹೇಳುತ್ತಿದ್ದೇನೆ. ಸರ್ಕಾರದ ಪ್ರತಿನಿಧಿಯಾಗಿ ನಾನು ಧರ್ಮರಕ್ಷಣೆಗೆ ತಯಾರಿದ್ದೇನೆ ಎಂದು ಸ್ಪಷ್ಟಪಡಿಸಿದರು.
