Karnataka Flood Effect : ‘ರೈತ್ರು ಭಿಕ್ಷುಕರಲ್ರಿ, ನಿಮ್ಮ ಪರಿಹಾರ ಕೂಲಿಗೂ ಸಾಲಲ್ಲ’
- ‘ರೈತ್ರು ಭಿಕ್ಷುಕರಲ್ರಿ, ನಿಮ್ಮ ಪರಿಹಾರ ಕೂಲಿಗೂ ಸಾಲಲ್ಲ’
- ಕೇಂದ್ರದ ಬೆಳೆ ನಷ್ಟ ಪರಿಹಾರ ಕುರಿತು ರೈತರಿಂದ ತೀವ್ರ ಆಕ್ರೋಶ
- ಐದು ಪಟ್ಟು ಹೆಚ್ಚು ಪರಿಹಾರ ನೀಡಿ ಎಂದು ರೈತರಿಂದ ಒತ್ತಾಯ
- ಧಾರವಾಡ, ತುಮಕೂರು, ಹಾಸನದಲ್ಲಿ ಕೇಂದ್ರ ತಂಡ ಪರಿಶೀಲನೆ , ಆರು ಮಂದಿಯ ಮೂರು ತಂಡದಿಂದ ರೈತರ ಹೊಲಗಳಿಗೆ ಭೇಟಿ
ಹುಬ್ಬಳ್ಳಿ/ಹಾಸನ/ತುಮಕೂರು (ಡಿ.18): ಕಳೆದ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ (Rain) ಸಂಭವಿಸಿದ ಬೆಳೆ ನಷ್ಟ (Crop Loss) ಪರಿಶೀಲನೆಗೆ ಕೇಂದ್ರದಿಂದ ಆಗಮಿಸಿದ್ದ ಕೇಂದ್ರದ ಆರು ಅಧಿಕಾರಿಗಳ ತಂಡ ಧಾರವಾಡ (Dharwad), ತುಮಕೂರು (Tumakur) ಹಾಗೂ ಹಾಸನ (Hassan) ಜಿಲ್ಲೆಗಳಲ್ಲಿ ಮೂರು ತಂಡಗಳಾಗಿ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿತು. ರೈತರ (Farmers) ಹೊಲಗಳಿಗೆ ಭೇಟಿ ನೀಡಿ, ಬೆಳೆಹಾನಿ ಪರಿಶೀಲನೆ ನಡೆಸಿತು. ಈ ವೇಳೆ ಬೆಳೆ ಹಾನಿಗೆ ಸಂಬಂಧಿಸಿ ಕೇಂದ್ರ ಸರ್ಕಾರ (Govt Of India) ನೀಡುತ್ತಿರುವ ಪರಿಹಾರಕ್ಕೆ ಸಂಬಂಧಿಸಿ ಅಧಿಕಾರಿಗಳು ರೈತರಿಂದ ತೀವ್ರ ವಿರೋಧ ಎದುರಿಸಬೇಕಾಯಿತು. ಈಗ ನೀಡುತ್ತಿರುವ ಬೆಳೆ ಹಾನಿ ಪರಿಹಾರ ಕಾರ್ಮಿಕರ ಕೂಲಿಗೂ ಸಾಲದು, ಬೆಳೆನಷ್ಟಕ್ಕೆ ಪೂರ್ಣ ಪರಿಹಾರ ನೀಡಬೇಕು, ಈಗ ನೀಡುವುದಕ್ಕಿಂತ 5 ಪಟ್ಟು ಹೆಚ್ಚು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಭಿಕ್ಷುಕರಲ್ರೀ: ಧಾರವಾಡ (Dharwad) ಜಿಲ್ಲೆಯ ನವಲಗುಂದದ ರೈತ ಹನುಮರಡ್ಡಿ ನಿಂಗರಡ್ಡಿ ಅವರ ಹೊಲದಲ್ಲಿ ಮಳೆಹಾನಿ (Rain) ಕುರಿತು ಪರಿಶೀಲನೆ ನಡೆಸುತ್ತಿದ್ದ ವೇಳೆ ಬೆಳೆ ಹಾನಿ ಪರಿಹಾರ ಕುರಿತು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರೈತರು (Farmers) ಭಿಕ್ಷುಕರಲ್ರಿ, ಯಾವ ಆಧಾರದ ಮೇಲೆ ಎನ್‌ಡಿಆರ್‌ಎಫ್ ಪರಿಹಾರ ನಿಗದಿ ಮಾಡ್ತಿರ್ರಿ? ನೀವು ಕೊಡೋ ಪರಿಹಾರ ಒಬ್ಬ ಆಳಿಗೆ ಕೊಡುವ ಕೂಲಿಗೂ ಹೊಂದಂಗಿಲ್ಲ. ಪರಿಹಾರವನ್ನು ಮೂರರಿಂದ-ಐದು ಪಟ್ಟು ಹೆಚ್ಚಿಸಿ ಕೊಟ್ರ ನಾವು ಬದ್ಕೊಳ್ತೀವಿ ಎಂದು ಕಿಡಿಕಾರಿದರು.
ಒಂದು ಎಕರೆ ಹತ್ತಿಗೆ .50ಸಾವಿರ ವರೆಗೆ ಖರ್ಚು ಮಾಡಿದ್ದೇವೆ. ಆದರೆ ಸರ್ಕಾರದಿಂದ ಸಿಗುವ ಪರಿಹಾರ ಎಕರೆಗೆ ಕೇವಲ .6800ದಿಂದ .13ಸಾವಿರ. ಈ ಹಣ (Money) ಕೃಷಿ ಕೂಲಿ ಕಾರ್ಮಿಕ ಸಂಬಳಕ್ಕೂ ಸಾಲಲ್ಲ. ಯಾವ ಮಾನದಂಡ ಅನುಸರಿಸಿ ನಷ್ಟಲೆಕ್ಕ ಹಾಕುತ್ತೀರಿ. ಈಗಿರುವ ಪರಿಹಾರವನ್ನು ಐದು ಪಟ್ಟು ಹೆಚ್ಚಿಸಿ ಕೊಡಿ. ಇಲ್ಲದಿದ್ದರೆ ಬೇಡ, ರೈತರೇನು ಭಿಕ್ಷೆ ಬೇಡುತ್ತಿಲ್ಲ ಎಂದು ಮತ್ತೊಬ್ಬ ರೈತ ಡಿ.ಎಚ್.ಬಣವಿ ಕೂಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಾಸನ (Hassan) ಹಾಗೂ ತುಮಕೂರಿನಲ್ಲೂ ಬೆಳೆ ಹಾನಿ ಪರಿಶೀಲನೆಗೆ ಆಗಮಿಸಿದ್ದ ಅಧ್ಯಯನ ತಂಡದೆದುರೂ ಕೇಂದ್ರದಿಂದ ನೀಡುತ್ತಿರುವ ಪರಿಹಾರದ ಕುರಿತು ರೈತರಿಂದ ಆಕ್ಷೇಪ ವ್ಯಕ್ತವಾಯಿತು. ನಮ್ಮ ವರ್ಷಪೂರ್ತಿಯ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ. ವರ್ಷದ ಕೂಳು ನೀರಿನಲ್ಲಿ ಕೊಚ್ಚಿ ಹೋಗಿದೆ. ನಮ್ಮ ದನಕರುಗಳ ಮೇವೂ ಕರಗಿಹೋಗಿದೆ. ಸರ್ಕಾರ ಕೊಟ್ಟಿರುವ ಪರಿಹಾರ ಧನ, ಹೊಲದಲ್ಲಿ ಕರಗಿ ಬಿದ್ದಿರುವ ರಾಗಿ ಕೊಯ್ಯಲೂ ಸಾಲಲ್ಲ. ಮೂರು ಕಾಸಿನ ಪರಿಹಾರ ತಗೊಂಡು ನಾವೇನು ಮಾಡೋಣ ಎಂದು ಹಾಸನದ ರೈತರು ಅಸಮಾಧಾನ ಹೊರಹಾಕಿದರು.
ಎಲ್ಲೆಲ್ಲಿ ಭೇಟಿ?
ಧಾರವಾಡ (Dharwad) ಜಿಲ್ಲೆಯಲ್ಲಿ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ್ ಜೆ. ಮತ್ತು ಹಣಕಾಸು ಸಚಿವಾಲಯದ ಮಹೇಶ್ ಕುಮಾರ್ ಅವರಿದ್ದ ತಂಡ ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ, ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಹತ್ತಿ, ಮೆಣಸಿನಕಾಯಿ, ಕಡಲೆ, ಜೋಳದ ಬೆಳೆ ಹಾನಿ ವೀಕ್ಷಿಸಿತು. ತುಮಕೂರು ಜಿಲ್ಲೆಯ ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲೂಕುಗಳಲ್ಲಿ ಕೇಂದ್ರದ ಹಣಕಾಸು ನಿರ್ವಹಣಾ, ನಿಯಂತ್ರಣಾಧಿಕಾರಿ ಸುಶೀಲ್ ಪಾಲ್, ಕೇಂದ್ರದ ಕೃಷಿ (Agriculture) ನಿರ್ದೇಶಕ ಡಾ.ಸುಭಾಷ್‌ಚಂದ್ರ ಅವರ ತಂಡ ಪರಿಶೀಲನೆ ನಡೆಸಿತು. ಹಾಸನದಲ್ಲಿ ಅಧಿಕಾರಿಗಳಾದ ವಿಜಯ್ ಕುಮಾರ್, ಭವ್ಯಪಾಂಡೆ ತಂಡ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿತು.
ಮಳೆಯಿಂದ 960 ಕೋಟಿ ಹಾನಿ
ಈ ವೇಳೆ ಮಾತನಾಡಿದ ಕೇಂದ್ರದ ಅಧಿಕಾರಿ ವಿಜಯ್ ಕುಮಾರ್, ರಾಜ್ಯದಲ್ಲಿ ಮಳೆಯಿಂದಾಗಿ .960 ಕೋಟಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಾವು ಬೆಳೆ ಹಾನಿ ಬಗ್ಗೆ ಅಂದಾಜು ವರದಿ ನೀಡಲಿದ್ದೇವೆ. ನಂತರ ಬೆಳೆ ಪರಿಹಾರದ ಬಗ್ಗೆ ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.